ಹೆಬ್ರಿ: ಭಾರೀ ಗಾಳಿ ಮಳೆಗೆ ಚಲಿಸುತ್ತಿದ್ದ ಕಾರಿನ ಮೇಲೆ ಬಿದ್ದ ದೈತ್ಯ ಮರ – ಚಾಲಕ ಸ್ಥಳದಲ್ಲೇ ಸಾವು..!

Prakhara News
1 Min Read

ಹೆಬ್ರಿ : ಹೆಬ್ರಿ ಸಮೀಪ ಶುಕ್ರವಾರ ಸಂಜೆ ಸುರಿದ ಭಾರೀ ಗಾಳಿ ಮಳೆಯಿಂದಾಗಿ ಚಲಿಸುತ್ತಿದ್ದ ಕಾರಿನ ಮೇಲೆ ದೈತ್ಯ ಮರವೊಂದು ಬಿದ್ದ ಪರಿಣಾಮ, ಕಾರು ಚಾಲಕ ಸ್ಥಳದಲ್ಲೇ ದಾರುಣವಾಗಿ ಮೃತಪಟ್ಟ ಘಟನೆ ಸಂಭವಿಸಿದೆ. ಮೃತಪಟ್ಟವರನ್ನು ಹೆಬ್ರಿ ಸಂತೆಕಟ್ಟೆ ನಿವಾಸಿ ಸದಾನಂದ ನಾಯಕ್ ಎಂದು ಗುರುತಿಸಲಾಗಿದೆ.

ಹೆಬ್ರಿಯಿಂದ ಬ್ರಹ್ಮಾವರಕ್ಕೆ ಸಂಪರ್ಕ ಕಲ್ಪಿಸುವ ಮಾರ್ಗದ ಹುರ್ತುಕೆ ಎಂಬಲ್ಲಿ ಸದಾನಂದ ನಾಯಕ್ ಅವರು ತಮ್ಮ ಕಾರಿನಲ್ಲಿ ಚಲಿಸುತ್ತಿದ್ದಾಗ ಈ ದುರಂತ ಸಂಭವಿಸಿದೆ. ಗಾಳಿ ಸಹಿತ ಭಾರೀ ಮಳೆಗೆ ರಸ್ತೆ ಬದಿಯಿದ್ದ ಬೃಹತ್ ಮರವೊಂದು ಏಕಾಏಕಿ ಕಾರಿನ ಮೇಲೆ ಉರುಳಿದೆ. ಮರ ಬಿದ್ದ ರಭಸಕ್ಕೆ ಕಾರು ಸಂಪೂರ್ಣವಾಗಿ ಜಖಂಗೊಂಡಿದ್ದು, ಚಾಲಕ ಸದಾನಂದ ನಾಯಕ್ ತೀವ್ರ ಗಾಯಗೊಂಡು ಕಾರಿನೊಳಗಡೆಯೇ ಕೊನೆಯುಸಿರೆಳೆದಿದ್ದಾರೆ.

ಅಪಘಾತದ ತೀವ್ರತೆಗೆ ನಜ್ಜುಗುಜ್ಜಾಗಿದ್ದ ಕಾರಿನ ಮೇಲೆ ಬಿದ್ದಿದ್ದ ದೈತ್ಯ ಮರವನ್ನು ತೆರವುಗೊಳಿಸಲು ಅಗ್ನಿಶಾಮಕ ಸಿಬ್ಬಂದಿ ಹಾಗೂ ಸ್ಥಳೀಯರು ಕ್ರೇನ್ ಬಳಸಿ ಹರಸಾಹಸ ಪಟ್ಟರು. ಸುದೀರ್ಘ ಕಾರ್ಯಾಚರಣೆಯ ಬಳಿಕ ಮೃತದೇಹವನ್ನು ಹೊರತೆಗೆಯಲಾಯಿತು. ಘಟನಾ ಸ್ಥಳಕ್ಕೆ ಹೆಬ್ರಿ ಪೊಲೀಸ್ ಠಾಣೆಯ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

Share This Article
Leave a Comment