ಬಂಟ್ವಾಳ: ಕೊನೆಗೂ ಮಣಿದ ಅಧಿಕಾರಿಗಳು – ಹಕ್ಕುಪತ್ರ ನೀಡುವ ಲಿಖಿತ ಭರವಸೆ, ಪುಣಚ ಕುಟುಂಬಗಳ ಪ್ರತಿಭಟನೆ ವಾಪಸ್

Prakhara News
1 Min Read

ಬಂಟ್ವಾಳ : ತಮಗೆ ವಾಸಿಸಲು ಹಕ್ಕುಪತ್ರ ನೀಡುವಂತೆ ಆಗ್ರಹಿಸಿ ಕಳೆದ ನಾಲ್ಕು ದಿನಗಳಿಂದ ಬಂಟ್ವಾಳ ಮಿನಿ ವಿಧಾನಸೌಧದ ಮುಂಭಾಗದಲ್ಲಿ ಅನಿರ್ದಿಷ್ಟಾವಧಿ ಧರಣಿ ನಡೆಸುತ್ತಿದ್ದ ಪುಣಚ ಗ್ರಾಮದ ದೇವಿನಗರದ ಐದು ಬಡ ಕುಟುಂಬಗಳು ಕೊನೆಗೂ ತಮ್ಮ ಪ್ರತಿಭಟನೆಯನ್ನು ಹಿಂಪಡೆದಿವೆ. ಮೇ 26 ರಂದು ಅಧಿಕೃತವಾಗಿ ಹಕ್ಕುಪತ್ರ ವಿತರಿಸುವುದಾಗಿ ಕಂದಾಯ ಅಧಿಕಾರಿಗಳು ಲಿಖಿತ ಭರವಸೆ ನೀಡಿದ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.

ಪುಣಚ ದೇವಿನಗರದ ಈ ಕುಟುಂಬಗಳು ತಮಗೆ ಹಕ್ಕುಪತ್ರ ನೀಡುವಂತೆ ಕಳೆದ 8 ವರ್ಷಗಳಿಂದ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಕಚೇರಿಗೆ ಅಲೆದು ಮನವಿ ಸಲ್ಲಿಸುತ್ತಿದ್ದವು. ಆದರೂ ಯಾವುದೇ ಪ್ರಯೋಜನವಾಗದಿದ್ದಾಗ, ಬೇಸತ್ತ ಕುಟುಂಬಸ್ಥರು ಮೇ 18 ರಂದು ಬಂಟ್ವಾಳ ತಾಲೂಕು ಕಚೇರಿ (ಮಿನಿ ವಿಧಾನಸೌಧ) ಎದುರು ಅನಿರ್ದಿಷ್ಟಾವಧಿ ಪ್ರತಿಭಟನೆ ಆರಂಭಿಸಿದ್ದರು.

ಈ ಬಡ ಕುಟುಂಬಗಳ ನ್ಯಾಯಯುತ ಹೋರಾಟಕ್ಕೆ ಬಿಜಿಪಿ ಪಕ್ಷವೂ ಸೇರಿದಂತೆ ವಿವಿಧ ಸಂಘಟನೆಗಳು ಸಂಪೂರ್ಣ ಬೆಂಬಲ ಸೂಚಿಸಿದ್ದವು. ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆ ಎಚ್ಚೆತ್ತ ತಾಲ್ಲೂಕು ಆಡಳಿತದ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಮಾತುಕತೆ ನಡೆಸಿದ್ದಾರೆ. ಅಲ್ಲದೆ, ಬರುವ ಮೇ 26 ರಂದು ಕಡ್ಡಾಯವಾಗಿ ಹಕ್ಕುಪತ್ರಗಳನ್ನು ವಿತರಿಸಲಾಗುವುದು ಎಂದು ಲಿಖಿತವಾಗಿ ಆದೇಶ ಪತ್ರ ನೀಡಿದ್ದಾರೆ. ಅಧಿಕಾರಿಗಳ ಈ ಲಿಖಿತ ಭರವಸೆಗೆ ಒಪ್ಪಿದ ಪ್ರತಿಭಟನಾಕಾರರು ತಮ್ಮಧರಣಿಯನ್ನು ಮುಕ್ತಾಯಗೊಳಿಸಿದ್ದಾರೆ.

Share This Article
Leave a Comment