ಉಡುಪಿ: ರಾಷ್ಟ್ರೀಯ ಹೆದ್ದಾರಿಯಲ್ಲಿ ಭೀಕರ ಅಪಘಾತ; ಟೆಂಪೋ ಚಾಲಕ ಸ್ಥಳದಲ್ಲೇ ಸಾವು!

Prakhara News
1 Min Read

ಉಡುಪಿ : ರಾಷ್ಟ್ರೀಯ ಹೆದ್ದಾರಿ 66ರ ಕಿನ್ನಿಮೂಲ್ಕಿ ಬಳಿ ರವಿವಾರ ನಸುಕಿನ ಜಾವ ಲಾರಿ ಮತ್ತು ಗೂಡ್ಸ್ ಟೆಂಪೋ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಟೆಂಪೋ ಚಾಲಕ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಡೆದಿದೆ. ಮೃತರನ್ನು ಶಿವಮೊಗ್ಗ ಮೂಲದ ಪ್ರಶಾಂತ್ ಪಿ. (29 ವರ್ಷ) ಎಂದು ಗುರುತಿಸಲಾಗಿದೆ.

ಹೆದ್ದಾರಿ ಬದಿಯಲ್ಲಿ ನಿಲ್ಲಿಸಲಾಗಿದ್ದ ಸರಕು ಸಾಗಾಟದ ಲಾರಿಗೆ, ಚಾಲಕನ ನಿಯಂತ್ರಣ ತಪ್ಪಿದ ಗೂಡ್ಸ್ ಟೆಂಪೋ ಹಿಂದಿನಿಂದ ಬಂದು ಭೀಕರವಾಗಿ ಢಿಕ್ಕಿ ಹೊಡೆದಿದೆ ಎಂದು ಶಂಕಿಸಲಾಗಿದೆ. ಅಪಘಾತದ ತೀವ್ರತೆ ಎಷ್ಟಿತ್ತೆಂದರೆ ಟೆಂಪೋದ ಮುಂಭಾಗ ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ. ಢಿಕ್ಕಿಯ ರಭಸಕ್ಕೆ ಚಾಲಕ ಪ್ರಶಾಂತ್ ಅವರ ಮೃತದೇಹ ಟೆಂಪೋದ ಕ್ಯಾಬಿನ್ ಒಳಗಡೆಯೇ ಸಿಲುಕಿಕೊಂಡಿತ್ತು. ಸಮಾಜಸೇವಕ ನಿತ್ಯಾನಂದ ಒಳಕಾಡು, ಉಡುಪಿ ಸಂಚಾರ ಠಾಣೆಯ ಪೊಲೀಸರು ಹಾಗೂ ಸ್ಥಳೀಯ ಸಾರ್ವಜನಿಕರು ತೀವ್ರ ಕಾರ್ಯಾಚರಣೆ ನಡೆಸಿ, ಅತ್ಯಂತ ಸಾಹಸದ ಬಳಿಕ ಮೃತದೇಹವನ್ನು ಹೊರತೆಗೆದರು.

ಬಳಿಕ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಉಡುಪಿಯ ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ. ಉಡುಪಿ ಸಂಚಾರ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

Share This Article
Leave a Comment