ಕೊಚ್ಚಿ: ರಾಷ್ಟ್ರ ಪ್ರಶಸ್ತಿ ವಿಜೇತ, ಖ್ಯಾತ ಮಲಯಾಳಂ ನಟ ಮತ್ತು ನಿರ್ದೇಶಕ ಸಲೀಂ ಕುಮಾರ್ (56 ವರ್ಷ) ಅವರು ಶನಿವಾರ ರಾತ್ರಿ ಕೊಚ್ಚಿಯ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.


ಅವರು ಕೊಚ್ಚಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ನ್ಯುಮೋನಿಯಾ ಕಾಯಿಲೆಗೆ ಚಿಕಿತ್ಸೆ ಪಡೆಯುತ್ತಿದ್ದ ಸಲೀಂ ಕುಮಾರ್ ಅವರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.

ಕಳೆದ ಕೆಲವು ವರ್ಷಗಳಿಂದ ಅವರು ಯಕೃತ್ತಿಗೆ ಸಂಬಂಧಿಸಿದ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದರು ಎಂದು ತಿಳಿದು ಬಂದಿದೆ.

ಹಾಸ್ಯ, ಭಾವನಾತ್ಮಕ ಹಾಗೂ ಗಂಭೀರ ಪಾತ್ರಗಳಲ್ಲಿ ಅಭಿನಯಿಸಿ ಮಲಯಾಳಂ ಚಿತ್ರರಂಗದಲ್ಲಿ ವಿಶಿಷ್ಟ ಸ್ಥಾನ ಗಳಿಸಿದ್ದ ಸಲೀಂ ಕುಮಾರ್ ಅವರು ಅಪಾರ ಅಭಿಮಾನಿ ಬಳಗವನ್ನು ಹೊಂದಿದ್ದರು.
ಮಲಯಾಳಂ ಚಿತ್ರರಂಗದ ಅದ್ಭುತ ಪ್ರತಿಭೆಯಾಗಿ ಗುರುತಿಸಿಕೊಳ್ಳುವ ಮುನ್ನ, ಸಲೀಂ ಕುಮಾರ್ ಅವರು ಕಲಾವಿದರಾಗಿ ತಮ್ಮ ಹಾಸ್ಯ ಪ್ರಜ್ಞೆಯಿಂದ ಜನಪ್ರಿಯತೆ ಗಳಿಸಿದ್ದರು. 1997ರಲ್ಲಿ ಬಿಡುಗಡೆಯಾದ ‘ಇಷ್ಟಮಾನು ನೂರು ವಟ್ಟಂ’ ಸಿನಿಮಾ ಮೂಲಕ ಅವರು ಬೆಳ್ಳಿಪರದೆಗೆ ಪದಾರ್ಪಣೆ ಮಾಡಿದರು.
ಅದಾದ ಬಳಿಕ ‘ಕಲ್ಯಾಣರಾಮನ್’, ‘ಪಂಜಾಬಿ ಹೌಸ್’, ‘ಸಿ.ಐ.ಡಿ. ಮೂಸಾ’ ಮತ್ತು ‘ಈ ಪರಕ್ಕುಂ ತಳಿಕಾ’ ನಂತಹ ಬ್ಲಾಕ್ಬಸ್ಟರ್ ಸಿನಿಮಾಗಳ ಮೂಲಕ ಪ್ರತಿ ಮನೆಯ ಅಚ್ಚುಮೆಚ್ಚಿನ ಹಾಸ್ಯನಟನಾಗಿ ಹೊರಹೊಮ್ಮಿದರು.
ಕೇವಲ ಕಾಮಿಡಿ ಪಾತ್ರಗಳಿಗಷ್ಟೇ ಸೀಮಿತವಾಗದೆ, ನಂತರದ ದಿನಗಳಲ್ಲಿ ಅತ್ಯಂತ ಗಂಭೀರ ಹಾಗೂ ಖಡಕ್ ಪಾತ್ರಗಳಲ್ಲಿ ನಟಿಸುವ ಮೂಲಕ ವಿಮರ್ಶಕರಿಂದಲೂ ಭೇಷ್ ಎನಿಸಿಕೊಂಡರು.
ರಾಷ್ಟ್ರ ಪ್ರಶಸ್ತಿಯ ಗರಿ ಅವರ ಸಿನಿಮಾ ಜರ್ನಿಯಲ್ಲಿ ‘ಅಚ್ಚನುರಂಗತ ವೀಡು’ ಸಿನಿಮಾ ದೊಡ್ಡ ತಿರುವು ನೀಡಿತು. ಈ ಚಿತ್ರದ ಅದ್ಭುತ ನಟನೆಗಾಗಿ ಅವರಿಗೆ ಅತ್ಯುತ್ತಮ ನಟ ರಾಜ್ಯ ಪ್ರಶಸ್ತಿ ಒಲಿಯಿತು. ತದನಂತರ 2010ರಲ್ಲಿ ತೆರೆಕಂಡ ‘ಅದಾಮಿಂತೆ ಮಕನ್ ಅಬು’ ಸಿನಿಮಾದ ಅತ್ಯಂತ ಭಾವನಾತ್ಮಕ ಮತ್ತು ನೈಜ ನಟನೆಗಾಗಿ ಸಲೀಂ ಕುಮಾರ್ ಅವರಿಗೆ ಭಾರತದ ಅತ್ಯುನ್ನತ ‘ರಾಷ್ಟ್ರ ಪ್ರಶಸ್ತಿ (ಅತ್ಯುತ್ತಮ ನಟ)’ ಲಭಿಸಿತು. ಇದರೊಂದಿಗೆ ಹಲವು ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿಗಳೂ ಇವರ ಮುಡಿಗೇರಿವೆ.
ಇತ್ತೀಚಿನ ವರ್ಷಗಳಲ್ಲೂ ಸಕ್ರಿಯರಾಗಿದ್ದ ಅವರು, 2025ರಲ್ಲಿ ತೆರೆಕಂಡ ‘ಆಜಾದಿ’ ಮತ್ತು ‘ಭಾ ಭಾ ಭಾ’ ಚಿತ್ರಗಳಲ್ಲಿ ನಟಿಸಿದ್ದರು. ಇವರ ಪುತ್ರ ಚಂದು ಸಲೀಂ ಕುಮಾರ್ ಕೂಡ ಮಲಯಾಳಂ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದು, ಸೂಪರ್ ಹಿಟ್ ಚಿತ್ರಗಳಾದ ‘ಮಲಿಕ್’ ಮತ್ತು ‘ಮಂಜುಮ್ಮೆಲ್ ಬಾಯ್ಸ್’ ನಲ್ಲಿ ಅಭಿನಯಿಸಿದ್ದಾರೆ.


