ಮಂಗಳೂರು: “ನಾನು ಪಕ್ಷ ನಿಷ್ಠೆ ಹೊಂದಿರುವ ವ್ಯಕ್ತಿ. ಪಕ್ಷಾಂತರ ಮಾಡುವ ಜಾಯಮಾನ ನನ್ನದಲ್ಲ. ನನ್ನ ನಿರ್ಧಾರಗಳ ಮೇಲೆ ಯಾರೂ ಒತ್ತಡ ಹೇರಲು ಸಾಧ್ಯವಿಲ್ಲ” ಎಂದು ಮಾಜಿ ಸಚಿವ, ಹಿರಿಯ ಬಿಜೆಪಿ ನಾಯಕ ಕೃಷ್ಣ ಜೆ. ಪಾಲೇಮಾರ್ ಸ್ಪಷ್ಟಪಡಿಸಿದ್ದಾರೆ.


ಸಾಮಾಜಿಕ ಜಾಲತಾಣಗಳು ಹಾಗೂ ರಾಜಕೀಯ ವಲಯದಲ್ಲಿ ತಾವು ಕಾಂಗ್ರೆಸ್ ಪಕ್ಷ ಸೇರಲಿದ್ದಾರೆ ಎಂಬ ವದಂತಿಗಳು ವ್ಯಾಪಕವಾಗಿ ಹರಿದಾಡುತ್ತಿದ್ದ ಹಿನ್ನೆಲೆಯಲ್ಲಿ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಈ ಕುರಿತು ತಮ್ಮ ನಿಲುವನ್ನು ಸ್ಪಷ್ಟಪಡಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಜನರು ಆಧಾರರಹಿತ ಸುಳ್ಳು ವಿಚಾರಗಳನ್ನು ಪಸರಿಸುತ್ತಿದ್ದಾರೆ. ದೇಶದಲ್ಲೇ ಬಲವಾದ ಆಡಳಿತ ನಡೆಸುತ್ತಿರುವ ಬಿಜೆಪಿ ಪಕ್ಷದಲ್ಲೇ ನಾನಿರುವಾಗ, ಪಕ್ಷ ಬಿಟ್ಟು ಕಾಂಗ್ರೆಸ್‌ಗೆ ಸೇರ್ಪಡೆಯಾಗುವ ಅಗತ್ಯವಾದರೂ ಏನಿದೆ?” ಎಂದು ಪ್ರಶ್ನಿಸಿದರು. ಪಕ್ಷದೊಳಗಿನ ತಮ್ಮ ಸಕ್ರಿಯತೆ ಕುರಿತು ಉತ್ತರಿಸಿದ ಅವರು, “ನಾನು ಪಕ್ಷದ ಚಟುವಟಿಕೆಗಳಲ್ಲಿ ಇಂದಿಗೂ ಸಕ್ರಿಯವಾಗಿದ್ದೇನೆ. ನನ್ನ ಕ್ರಿಯಾಶೀಲತೆ ಎಲ್ಲೂ ಕಡಿಮೆಯಾಗಿಲ್ಲ” ಎಂದು ಹೇಳಿದರು.


ಕಾಂಗ್ರೆಸ್ ನಾಯಕರೊಂದಿಗಿನ ಬಾಂಧವ್ಯದ ಕುರಿತು ಮಾತನಾಡಿದ ಕೃಷ್ಣ ಜೆ. ಪಾಲೇಮಾರ್, “ಕಾಂಗ್ರೆಸ್ ಪಕ್ಷದಲ್ಲಿ ನನಗೆ ಸಾಕಷ್ಟು ನಾಯಕರು ಆತ್ಮೀಯ ಮಿತ್ರರಿದ್ದಾರೆ. ಅವರೊಂದಿಗೆ ಇಂದಿಗೂ ಉತ್ತಮ ವೈಯಕ್ತಿಕ ಬಾಂಧವ್ಯ ಹೊಂದಿದ್ದೇನೆ. ಆದರೆ ವೈಯಕ್ತಿಕ ಸ್ನೇಹವೇ ಬೇರೆ, ರಾಜಕೀಯ ಹಾಗೂ ಪಕ್ಷದ ಸಿದ್ಧಾಂತವೇ ಬೇರೆ. ಪಕ್ಷದ ವಿಚಾರ ಬಂದಾಗ ನಾವು ಪ್ರತ್ಯೇಕವಾಗಿದ್ದು, ನನ್ನ ಪಕ್ಷ ನಿಷ್ಠೆಯನ್ನು ಯಾರೂ ಪ್ರಶ್ನಿಸಲು ಸಾಧ್ಯವಿಲ್ಲ” ಎಂದು ವದಂತಿಗಳಿಗೆ ತೆರೆ ಎಳೆದರು.


