ಮಂಗಳೂರು : ಪೋರ್ಚುಗೀಸರನ್ನು ಕೆಚ್ಚೆದೆಯಿಂದ ಹಿಮ್ಮೆಟ್ಟಿಸಿದ್ದ ವೀರರಾಣಿ ಅಬ್ಬಕ್ಕಳ ಹೆಸರು ಅತ್ಯಂತ ಮಹತ್ವದಾಗಿದ್ದು, ಇತಿಹಾಸದ ಪುಟಗಳಲ್ಲಿ ಆಕೆಗೆ ಸೂಕ್ತ
ಸ್ಥಾನಮಾನ ಸಿಕ್ಕಿಲ್ಲ. ದೇಶದ ಸ್ವಾತಂತ್ರ್ಯಕ್ಕಾಗಿ ಜೀವ ನೀಡಿದ ಅದೆಷ್ಟೋ ಹೋರಾಟಗಾರರನ್ನು ನಮ್ಮ ಇತಿಹಾಸ ಕಡೆಗಣಿಸಿದೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಖಿಲ ಭಾರತೀಯ ಸಹ ಬೌದ್ಧಿಕ್ ಪ್ರಮುಖ್ ಸುಧೀರ್ ಹೇಳಿದರು.


ಕರ್ನಾಟಕ ರಾಜ್ಯ ಮಹಾವಿದ್ಯಾಲಯ ಶಿಕ್ಷಕ ಸಂಘ ಮಂಗಳೂರು ವಿಭಾಗ ಹಾಗೂ ನಿರ್ಮಲ ಭಾರತ್ ಚಾರಿಟೆಬಲ್ ಟ್ರಸ್ಟ್ ಮಂಗಳೂರು ಇದರ ಸಹಯೋಗದಲ್ಲಿ ಉಳ್ಳಾಲದ ಶಾರದನಿಕೇತನ ಸಭಾಂಗಣದಲ್ಲಿ ನಡೆದ ನಡೆದ ಅಬ್ಬಕ್ಕ-೫೦೦ ಪ್ರೇರಣಾದಾಯಿ ಉಪನ್ಯಾಸ ಸರಣಿ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

ರಾಣಿ ಅಬ್ಬಕ್ಕಳ ಹೆಸರು ಅಜರಾಮರವಾಗಿ ಉಳಿಯುವಂತೆ ಮಾಡಲು ಇಂತಹ ಕಾರ್ಯಕ್ರಮಗಳು ನಿರಂತರ ನಡೆಯುತ್ತಿರಬೇಕು ಎಂದರು. ಕಾರ್ಯಕ್ರಮ ಉದ್ಘಾಟಿಸಿದ ಅಬ್ಬಕ್ಕ ವಂಶಸ್ಥರಾದ ಧರ್ಮಸ್ಥಳದ ಅನಿತಾ ಸುರೇಂದ್ರ ಕುಮಾರ್ ಮಾತನಾಡಿ, ಕಳೆದ ಒಂದು ವರ್ಷದಿಂದ ಅಬ್ಬಕ್ಕ-೫೦೦ ಸರಣಿ ಕಾರ್ಯಕ್ರಮದಡಿ ಅಬ್ಬಕ್ಕಳ ಶೌರ್ಯ ಸಾಧನೆಯನ್ನು ಸಮಾಜಕ್ಕೆ ತಿಳಿಯಪಡಿಸುವ ಕಾರ್ಯ ನಡೆಸಿರುವುದು ಶ್ಲಾಘನೀಯ.

ಅಬ್ಬಕ್ಕ -೫೦೦ರ ಸಂಭ್ರಮದ ನೆನಪಿನೈಸಿರಿ ಸಂಚಿಕೆಯನ್ನು ಇದೇ ಸಂದರ್ಭ ಬಿಡುಗಡೆ ಮಾಡಲಾಯಿತು. ಬಂಟ್ವಾಳದ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದ
ಸಂಸ್ಥಾಪಕರಾದ ಡಾ. ತುಕಾರಾಮ ಪೂಜಾರಿ ಹಾಗೂ ಡಾ.ಆಶಾಲತಾ ಎಸ್ ಸುವರ್ಣ ಇವರುಗಳನ್ನು ಸನ್ಮಾನಿಸಲಾಯಿತು.
ದ.ಕ.ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ.ಸಿ.ಕೋಟ್ಯಾನ್ ಅಧ್ಯಕ್ಷತೆ ವಹಿಸಿದ್ದರು. ಪ್ರವೀಣ್ ಕುಮಾರ್ ಇಂದ್ರ, ಆರ್‌ಎಸ್‌ಎಸ್ ಮುಖಂಡ ಪಿ.ಎಸ್. ಪ್ರಕಾಶ್,ರಾಜ್ಯ ಮಹಾವಿದ್ಯಾಲಯ ಶಿಕ್ಷಕ ಸಂಘದ ಅಧ್ಯಕ್ಷ ಡಾ. ಗುರುನಾಥ ಬಡಿಗೇರ್, ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘದ ಅಧ್ಯಕ್ಷ ಸಂದೀಪ್ ಬೂದಿಹಾಳ್, ನಿರ್ಮಲ ಭಾರತ್ ಚಾರಿಟಬಲ್ ಟ್ರಸ್ಟ್ ನ ವಿಶ್ವಸ್ಥ ಕೆ.ರಮೇಶ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ರು. ರಾಜ್ಯ ಮಹಾವಿದ್ಯಾಲಯ ಶಿಕ್ಷಕ ಸಂಘ ರಾಜ್ಯ ಜಂಟಿ ಪ್ರಧಾನ ಕಾರ್ಯದರ್ಶಿ ಡಾ.ಮಾಧವ ಎಂ.ಕೆ. ಸ್ವಾಗತಿಸಿ, ಡಾ.ಸುಧಾ.ಯು. ವಂದಿಸಿದರು. ಡಾ.ಸುಧಾ .ಎನ್ .ವೈದ್ಯ ಕಾರ್ಯಕ್ರಮ ನಿರೂಪಿಸಿದರು.
ರಾಜಶ್ರೀ ಉಳ್ಳಾಲ್ ನಾಟ್ಯನಿಕೇತನ ಕೊಲ್ಯ ಇವರ ಶಿಷ್ಯ ವೃಂದದಿಂದ ನೃತ್ಯ ಮೋಹನ ಹಾಗೂ ವೀರರಾಣಿ ಅಬ್ಬಕ್ಕ ಕಿರು ನೃತ್ಯ ರೂಪಕ ಪ್ರದರ್ಶನ ನಡೆಯಿತು.


