ಮಂಗಳೂರು : ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ (MUDA) ರೂಪಿಸಿರುವ ಸಮಗ್ರ ಅಭಿವೃದ್ಧಿ ಯೋಜನೆ (CDP) ಹಾಗೂ ಹೊಸವಲಯ ಕಟ್ಟಡ ನಿಯಮಾವಳಿಗಳಲ್ಲಿನ ಅವೈಜ್ಞಾನಿಕ ನೀತಿಗಳಿಂದ ಸಾಮಾನ್ಯ ಜನರು ಮನೆ ನಿರ್ಮಿಸಲು ತೊಂದರೆ ಅನುಭವಿಸುತ್ತಿದ್ದಾರೆ. ಈ ನಿಯಮಗಳನ್ನು ತಕ್ಷಣ ಮರುಪರಿಶೀಲಿಸಿ ಅಗತ್ಯ ತಿದ್ದುಪಡಿ ಮಾಡಬೇಕು ಎಂದು ಮಾಜಿ ಸಚಿವ ಕೃಷ್ಣ ಜೆ. ಪಾಲೆಮಾರ್ ಆಗ್ರಹಿಸಿದ್ದಾರೆ.


ನಗರದ ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ULMS ಆನ್ಲೈನ್ ವ್ಯವಸ್ಥೆಯ ತಾಂತ್ರಿಕ ದೋಷಗಳಿಂದ ಕಟ್ಟಡ ಪರವಾನಗಿ ಪಡೆಯಲು ವಿಳಂಬವಾಗುತ್ತಿದೆ. ಸಣ್ಣ ಮನೆ ನಿರ್ಮಾಣಕ್ಕೂ ತಿಂಗಳುಗಟ್ಟಲೆ ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಆದರೆ ದೊಡ್ಡ ಕಟ್ಟಡಗಳಿಗೆ ಆಫ್ಲೈನ್ ಮೂಲಕ ತ್ವರಿತ ಅನುಮತಿ ನೀಡುತ್ತಿರುವುದು ತಾರತಮ್ಯವಾಗಿದೆ ಎಂದು ಆರೋಪಿಸಿದರು.

ಹೊಸವಲಯದ ಟೆಲಿಸ್ಕೋಪಿಕ್ ಸೆಟ್ಬ್ಯಾಕ್ ನಿಯಮ ಅವೈಜ್ಞಾನಿಕವಾಗಿದ್ದು, ಸಾರ್ವಜನಿಕ ಸುರಕ್ಷತೆಗೆ ತೊಂದರೆಯಾಗುವ ಸಾಧ್ಯತೆಯಿದೆ. ಈ ನಿಯಮವನ್ನು ರದ್ದುಗೊಳಿಸಬೇಕು. ಹಿಂದೆ 6 ಮತ್ತು 7.5 ಮೀಟರ್ ರಸ್ತೆಗಳಿಗೆ ಜಾಗ ಬಿಟ್ಟುಕೊಟ್ಟವರಿಗೆ ನೀಡಲಾಗುತ್ತಿದ್ದ TDR ಹಾಗೂ ಪ್ರೀಮಿಯಂ FAR ಸೌಲಭ್ಯಗಳನ್ನು ಮರುಸ್ಥಾಪಿಸಬೇಕು ಎಂದು ಒತ್ತಾಯಿಸಿದರು.

ಹೋಟೆಲ್, ವಸತಿಗೃಹ ಹಾಗೂ ಶಾಲೆಗಳಿಗೆ 12 ಮೀಟರ್ ರಸ್ತೆ ಕಡ್ಡಾಯಗೊಳಿಸಿರುವ ನಿಯಮ ಮಂಗಳೂರಿನ ಭೌಗೋಳಿಕ ಪರಿಸ್ಥಿತಿಗೆ ಹೊಂದಿಕೆಯಾಗುವುದಿಲ್ಲ. ಇದರಿಂದ ಧಾರ್ಮಿಕ ಕೇಂದ್ರಗಳು ಹಾಗೂ ಶಾಲೆಗಳ ಅಭಿವೃದ್ಧಿಗೂ ಅಡ್ಡಿಯಾಗಲಿದೆ ಎಂದು ಹೇಳಿದರು.

ಲೇಔಟ್ ಅನುಮೋದನೆಗೆ ವಿವಿಧ ಇಲಾಖೆಗಳ NOC ಪಡೆಯಲು ಎರಡು-ಮೂರು ವರ್ಷಗಳ ವಿಳಂಬವಾಗುತ್ತಿದೆ. ಈ ಪ್ರಕ್ರಿಯೆಯನ್ನು MUDA ಮೂಲಕವೇ ಸರಳಗೊಳಿಸಬೇಕು. ಮಂಗಳಾ ಕಾರ್ನಿಷ್ ರಸ್ತೆ ಸೇರಿದಂತೆ CDPಯಲ್ಲಿನ ಅವೈಜ್ಞಾನಿಕ ರಸ್ತೆ ಜೋಡಣೆ ಹಾಗೂ ಅಗಲೀಕರಣ ಯೋಜನೆಗಳಿಂದ ಜನವಸತಿ ಪ್ರದೇಶದ ನಿವಾಸಿಗಳಿಗೆ ತೊಂದರೆಯಾಗುತ್ತಿದ್ದು, ಈ ಬಗ್ಗೆ ಸಮಗ್ರ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.
ಸುಮಾರು 20 ವರ್ಷಗಳಿಂದ ಸಮಗ್ರ CDP ಪರಿಷ್ಕರಣೆ ನಡೆದಿಲ್ಲ. ನಗರಾಭಿವೃದ್ಧಿಯ ಹೆಸರಿನಲ್ಲಿ ಜನರ ಮನೆ ನಿರ್ಮಾಣದ ಹಕ್ಕು ಹಾಗೂ ಸಾರ್ವಜನಿಕ ಸುರಕ್ಷತೆಗೆ ಧಕ್ಕೆಯಾಗಬಾರದು. ಹೊಸವಲಯ ನಿಯಮಾವಳಿಗಳನ್ನು ಮರುಪರಿಶೀಲಿಸಿ ನ್ಯಾಯಯುತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಇಂಜಿನಿಯರ್ ಸಂಘದ ಅಧ್ಯಕ್ಷ ಇಂಜಿನಿಯರ್ ಐ. ಯೋಗೀಶ್ ಪೈ ಉಪಸ್ಥಿತರಿದ್ದರು.


