ಪುತ್ತೂರು: ಪ್ರಸ್ತಾವಿತ ಬೆಂಗಳೂರು–ಮಂಗಳೂರು ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಕಬಕ ಪುತ್ತೂರು ರೈಲ್ವೆ ನಿಲ್ದಾಣದಲ್ಲಿ ಅಧಿಕೃತ ನಿಲುಗಡೆ ನೀಡಬೇಕೆಂಬ ಬೇಡಿಕೆಗೆ ವಿಧಾನ ಪರಿಷತ್ ಸದಸ್ಯ ಶ್ರೀ ಕಿಶೋರ್ ಕುಮಾರ್ ಪುತ್ತೂರು ಅವರು ನೇರವಾಗಿ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರ ಗಮನ ಸೆಳೆಯುವ ಮೂಲಕ ಮಹತ್ವದ ಬಲ ತಂದಿದ್ದಾರೆ.


ಪುತ್ತೂರು ಹಾಗೂ ಸುತ್ತಮುತ್ತಲಿನ ಸಾರ್ವಜನಿಕರು ಮತ್ತು ರೈಲ್ವೆ ಪ್ರಯಾಣಿಕರ ಬೇಡಿಕೆಗೆ ಸ್ಪಂದಿಸಿರುವ ಕಿಶೋರ್ ಕುಮಾರ್, ಬೆಂಗಳೂರು–ಮಂಗಳೂರು ವಂದೇ ಭಾರತ್ ರೈಲಿಗೆ ಕಬಕ ಪುತ್ತೂರಿನಲ್ಲಿ ನಿಲುಗಡೆ ಕಲ್ಪಿಸಬೇಕೆಂದು ಕೋರಿ ಕೇಂದ್ರ ರೈಲ್ವೆ ಸಚಿವರಿಗೆ ಪತ್ರ ಬರೆದಿದ್ದಾರೆ. ಕರಾವಳಿ ಕರ್ನಾಟಕಕ್ಕೆ ಪ್ರೀಮಿಯಂ ರೈಲ್ವೆ ಸಂಪರ್ಕವನ್ನು ಬಲಪಡಿಸಲು ಮತ್ತು ಬೆಂಗಳೂರು–ಮಂಗಳೂರು ನಡುವೆ ವಂದೇ ಭಾರತ್ ಸಂಪರ್ಕ ಕಲ್ಪಿಸಲು ನಿರಂತರ ಶ್ರಮಿಸುತ್ತಿರುವ ರೈಲ್ವೆ ಸಚಿವರ ಕ್ರಮವನ್ನು ಶ್ಲಾಘಿಸಿರುವ ಅವರು, ಪುತ್ತೂರು ಭಾಗದ ಜನರ ನ್ಯಾಯಯುತ ಬೇಡಿಕೆಯನ್ನು ಪರಿಗಣಿಸುವಂತೆ ವಿನಂತಿಸಿದ್ದಾರೆ.
ಹೆಚ್ಚಿನ ಪ್ರಯಾಣಿಕರ ವ್ಯಾಪ್ತಿ ಹೊಂದಿರುವ ಕಬಕ ಪುತ್ತೂರು

ಕಬಕ ಪುತ್ತೂರು ನಿಲ್ದಾಣದ ಮಹತ್ವವನ್ನು ವಿವರಿಸಿರುವ ಕಿಶೋರ್ ಕುಮಾರ್,ಕಬಕ ಪುತ್ತೂರು ನಿಲ್ದಾಣವು ದಕ್ಷಿಣ ಕನ್ನಡದ ಗ್ರಾಮೀಣ ಭಾಗದ ಪ್ರಮುಖ ರೈಲ್ವೆ ಹಾಗೂ ವಾಣಿಜ್ಯ ಕೇಂದ್ರವಾಗಿ ಹೊರಹೊಮ್ಮಿದೆ ಎಂದು ತಿಳಿಸಿದ್ದಾರೆ. ಈ ರೈಲು ನಿಲ್ದಾಣವು ಕೇವಲ ಪುತ್ತೂರಿಗೆ ಮಾತ್ರವಲ್ಲದೆ ಸುಳ್ಯ, ಬೆಳ್ತಂಗಡಿ, ಬಂಟ್ವಾಳ ತಾಲೂಕಿನ ಬಹುತೇಕ ಭಾಗಗಳು ಹಾಗೂ ಸುತ್ತಮುತ್ತಲಿನ ಜನರಿಗೆ ಪ್ರಮುಖ ಸಂಪರ್ಕ ಕೊಂಡಿಯಾಗಿದೆ.
2011ರ ಜನಗಣತಿಯನ್ನು ಉಲ್ಲೇಖಿಸಿದ ಅವರು, ಪುತ್ತೂರು, ಸುಳ್ಯ ಮತ್ತು ಬಂಟ್ವಾಳ ತಾಲೂಕುಗಳು ಒಟ್ಟು ಸುಮಾರು 8.88 ಲಕ್ಷ ಜನಸಂಖ್ಯೆಯನ್ನು ಹೊಂದಿವೆ ಎಂದು ಗಮನಸೆಳೆದಿದ್ದಾರೆ. ಆದ್ದರಿಂದ, ಕಬಕ ಪುತ್ತೂರು ನಿಲ್ದಾಣವು ಬೆಂಗಳೂರು ಹಾಗೂ ಇತರೆ ಪ್ರಮುಖ ನಗರಗಳಿಗೆ ನೇರ ಮತ್ತು ಸುಲಭ ಸಂಪರ್ಕ ಬಯಸುವ ದೊಡ್ಡ ಪ್ರಮಾಣದ ಜನರಿಗೆ ಅನುಕೂಲ ಕಲ್ಪಿಸುವ ಸಾಮರ್ಥ್ಯ ಹೊಂದಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಪುತ್ತೂರು ಈ ಭಾಗದ ಶಿಕ್ಷಣ, ವ್ಯಾಪಾರ, ಆರೋಗ್ಯ ಮತ್ತು ವಾಣಿಜ್ಯ ಕೇಂದ್ರವಾಗಿದೆ. ಇಲ್ಲಿನ ಅಪಾರ ಸಂಖ್ಯೆಯ ಐಟಿ ಉದ್ಯೋಗಿಗಳು, ವ್ಯಾಪಾರಸ್ಥರು, ಉದ್ಯಮಿಗಳು, ವಿದ್ಯಾರ್ಥಿಗಳು, ಸರ್ಕಾರಿ ಮತ್ತು ಖಾಸಗಿ ವಲಯದ ನೌಕರರು ಬೆಂಗಳೂರು ನಡುವೆ ನಿರಂತರ ಸಂಚಾರ ನಡೆಸುತ್ತಿದ್ದು, ಬೆಂಗಳೂರು ಸಂಪರ್ಕದ ಪ್ರೀಮಿಯಂ ರೈಲುಗಳನ್ನು ಪಡೆಯಲು ಕಬಕ ಪುತ್ತೂರು ಅತ್ಯಂತ ಸೂಕ್ತ ನಿಲ್ದಾಣವಾಗಿದೆ ಎಂದು ಒತ್ತಿ ಹೇಳಿದ್ದಾರೆ.
ಪ್ರಯಾಣಿಕರಿಗೂ, ಪ್ರವಾಸಿಗರಿಗೂ ಅನುಕೂಲ:
ಪುತ್ತೂರಿನ ಸಾಂಸ್ಕೃತಿಕ ಮತ್ತು ಧಾರ್ಮಿಕ ಮಹತ್ವವನ್ನು, ವಿಶೇಷವಾಗಿ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಾಲಯದ ಹಿರಿಮೆಯನ್ನು ಪ್ರಸ್ತಾಪಿಸಿರುವ ಶಾಸಕರು, ಸುಧಾರಿತ ಪ್ರೀಮಿಯಂ ರೈಲು ಸಂಪರ್ಕವು ಕೇವಲ ನಿತ್ಯ ಪ್ರಯಾಣಿಕರಿಗೆ ಮಾತ್ರವಲ್ಲದೆ ಪುತ್ತೂರಿಗೆ ಭೇಟಿ ನೀಡುವ ಭಕ್ತರು ಹಾಗೂ ಪ್ರವಾಸಿಗರಿಗೂ ನೆರವಾಗಲಿದೆ ಎಂದಿದ್ದಾರೆ.
ಪ್ರಸ್ತುತ, ಈ ಭಾಗದ ಜನರು ಪ್ರೀಮಿಯಂ ರೈಲುಗಳನ್ನು ಏರಲು ದೂರದ ಇತರ ನಿಲ್ದಾಣಗಳನ್ನು ಅವಲಂಬಿಸಬೇಕಾಗಿದೆ. ಕಬಕ ಪುತ್ತೂರಿನಲ್ಲಿ ನಿಲುಗಡೆ ನೀಡಿದರೆ ವಂದೇ ಭಾರತ್ ಸೇವೆಯ ನೇರ ಪ್ರಯೋಜನ ದಕ್ಷಿಣ ಕನ್ನಡದ ಗ್ರಾಮಾಂತರ ಭಾಗದ ಜನರಿಗೆ ಸುಲಭವಾಗಿ ತಲುಪಲಿದೆ ಎಂದು ಅವರು ವಿವರಿಸಿದ್ದಾರೆ.
ಭಾರತೀಯ ರೈಲ್ವೆಗೂ ಆರ್ಥಿಕ ಲಾಭ:
ರೈಲ್ವೆಯ ಆದಾಯ ಹಿತದೃಷ್ಟಿಯಿಂದಲೂ ಈ ನಿಲುಗಡೆ ಉಪಯುಕ್ತ ಎಂಬುದನ್ನು ಕಿಶೋರ್ ಕುಮಾರ್ ಪ್ರಬಲವಾಗಿ ಮಂಡಿಸಿದ್ದಾರೆ. ಈ ಭಾಗದಿಂದ ಬೆಂಗಳೂರಿಗೆ ಪ್ರಯಾಣಿಸುವವರ ಸಂಖ್ಯೆ ಅಧಿಕವಾಗಿರುವುದರಿಂದ ವಂದೇ ಭಾರತ್ ರೈಲಿಗೆ ಉತ್ತಮ ಪ್ರಯಾಣಿಕರ ದಟ್ಟಣೆ (ಆಕ್ಯುಪೆನ್ಸಿ) ದೊರೆತು, ಭಾರತೀಯ ರೈಲ್ವೆಗೆ ಹೆಚ್ಚಿನ ಆದಾಯ ತರಲಿದೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.
ಆದ್ದರಿಂದ, ಬೆಂಗಳೂರು–ಮಂಗಳೂರು ವಂದೇ ಭಾರತ್ ರೈಲಿನ ವೇಳಾಪಟ್ಟಿ ಮತ್ತು ನಿಲುಗಡೆಗಳನ್ನು ಅಂತಿಮಗೊಳಿಸುವಾಗ ಕಬಕ ಪುತ್ತೂರನ್ನು ನಿಗದಿತ ನಿಲ್ದಾಣವಾಗಿ ಪರಿಗಣಿಸಬೇಕು ಹಾಗೂ ಸಂಬಂಧಪಟ್ಟ ರೈಲ್ವೆ ಅಧಿಕಾರಿಗಳಿಗೆ ತಕ್ಷಣವೇ ಅಗತ್ಯ ನಿರ್ದೇಶನ ನೀಡಬೇಕೆಂದು ಅವರು ಸಚಿವರಿಗೆ ಮನವಿ ಮಾಡಿದ್ದಾರೆ.
ಸಾರ್ವಜನಿಕ ಅಭಿಯಾನಕ್ಕೆ ಭಾರಿ ಬೆಂಬಲ:
ಕೆಲವು ದಿನಗಳ ಹಿಂದೆ ‘ಪುತ್ತೂರು–ಸುಬ್ರಹ್ಮಣ್ಯ ರೈಲು ಬಳಕೆದಾರರ ಸಮಿತಿ’ ಹಾಗೂ ಜಿಲ್ಲೆಯ ಗ್ರಾಮೀಣ ಭಾಗದ ರೈಲು ಪ್ರಯಾಣಿಕರು ಕಬಕ ಪುತ್ತೂರು ನಿಲ್ದಾಣದಲ್ಲಿ ವಂದೇ ಭಾರತ್ ನಿಲುಗಡೆಗೆ ಒತ್ತಾಯಿಸಿ ಆನ್ಲೈನ್ ಸಹಿ ಅಭಿಯಾನ ಆರಂಭಿಸಿತ್ತು. ರೈಲಿನ ಮಾರ್ಗ, ವೇಳಾಪಟ್ಟಿ ಹಾಗೂ ನಿಲ್ದಾಣಗಳು ಅಂತಿಮಗೊಳ್ಳುವ ಮುನ್ನವೇ ದಕ್ಷಿಣ
ಕನ್ನಡದ ಜನಪ್ರತಿನಿಧಿಗಳು ಒಗ್ಗಟ್ಟಿನಿಂದ ಧ್ವನಿ ಎತ್ತಬೇಕೆಂದು ಕೋರಿ ವಿಸ್ತೃತ ಮನವಿ ಸಲ್ಲಿಸಲಾಗಿತ್ತು. ಇದಕ್ಕೆ ಸ್ಥಳೀಯ ನಿವಾಸಿಗಳು ಹಾಗೂ ಸಾರ್ವಜನಿಕರಿಂದ ಪತ್ರಗಳಿಗೆ ಸಹಿಗಳ ಜತೆಗೆ ಸುಮಾರು 3,900ಕ್ಕೂ ಅಧಿಕ ಆನ್‌ಲೈನ್ ಸಹಿಗಳು ಸಂಗ್ರಹವಾಗಿದ್ದವು.
ಈ ಅಭಿಯಾನವು ನಂತರ ಮತ್ತಷ್ಟು ವೇಗ ಪಡೆದುಕೊಂಡಿದ್ದು, ಇತ್ತೀಚಿನ ಅಂಕಿಅಂಶಗಳ ಪ್ರಕಾರ 3,992 ಸಹಿಗಳನ್ನು ಸಂಗ್ರಹಿಸುವ ಉತ್ತಮ ಬೆಂಬಲವನ್ನು ಸಂಗ್ರಹಿಸಿದೆ. ಕಬಕ ಪುತ್ತೂರಿನ ವ್ಯಾಪ್ತಿಯನ್ನು ವಿವರಿಸಿರುವ ಸಮಿತಿಯು, ರೈಲ್ವೆ ಸಚಿವಾಲಯ ಮತ್ತು ರೈಲ್ವೆ ಮಂಡಳಿಯೊಂದಿಗೆ ಮಾತುಕತೆ ನಡೆಸಿ ಈ ಬೇಡಿಕೆಯನ್ನು ಈಡೇರಿಸುವಂತೆ ಜಿಲ್ಲೆಯ ಸರ್ವ ಜನಪ್ರತಿನಿಧಿಗಳಿಗೆ ಮನವಿ ಮಾಡಿತ್ತು.
ರೈಲ್ವೆ ಸಮಸ್ಯೆಗಳಿಗೆ ನಿರಂತರ ಧ್ವನಿಯಾದ ಕಿಶೋರ್ ಕುಮಾರ್:
ಪುತ್ತೂರಿಗೆ ಸಂಬಂಧಿಸಿದ ಯಾವುದೇ ಪ್ರಮುಖ ರೈಲ್ವೆ ಬೇಡಿಕೆಗಳು ಹಾಗೂ ಸಮಸ್ಯೆಗಳು ಎದುರಾದಾಗಲೆಲ್ಲ ಕಿಶೋರ್ ಕುಮಾರ್ ಅವರು ನಿರಂತರವಾಗಿ ಧ್ವನಿಯೆತ್ತಿ, ಸಂಬಂಧಪಟ್ಟ ಅಧಿಕಾರಿಗಳ ಮಟ್ಟದಲ್ಲಿ ಪ್ರಾಮಾಣಿಕ ಪ್ರಯತ್ನ ನಡೆಸುತ್ತಿರುವುದು ಶಾಘನೀಯವಾದದ್ದು.
ಬಿಜೆಪಿ ಸಮಾವೇಶದ ನಿಮಿತ್ತ ಬಳ್ಳಾರಿಯಲ್ಲಿದ್ದ ಸಂದರ್ಭದಲ್ಲೂ, ತಮ್ಮ ಬಿಡುವಿಲ್ಲದ ಕಾರ್ಯಕ್ರಮಗಳ ನಡುವೆ ಪುತ್ತೂರಿನ ರೈಲು ಪ್ರಯಾಣಿಕರ ಜೊತೆಗೆ ಹಾಗೂ ಸಹಿ ಅಭಿಯಾನ ನಡೆಸಿದ ತಂಡದ ಜೊತೆಗೆ ಕಬಕ ಪುತ್ತೂರು ರೈಲು ನಿಲ್ದಾಣದಲ್ಲಿ ವಂದೇ ಭಾರತ್ ನಿಲುಗಡೆ ಕುರಿತಾದ ವರ್ಚುವಲ್ ಸಭೆಯನ್ನು ನಡೆಸಿ ಅವರು ಈ ವಿಷಯಕ್ಕೆ ಹೆಚ್ಚಿನ ಆದ್ಯತೆ ನೀಡಿದ್ದರು.
ರೈಲಿನ ಸಂಚಾರ ವೇಳಾಪಟ್ಟಿ ಹಾಗೂ ನಿಲುಗಡೆಗಳನ್ನು ಅಂತಿಮಗೊಳಿಸುವ ನಿರ್ಣಾಯಕ ಹಂತದಲ್ಲೇ ಈ ಬೇಡಿಕೆಯನ್ನು ಸರ್ಕಾರದ ಮುಂದಿಟ್ಟಿರುವುದು ಅತ್ಯಂತ ಸೂಕ್ತವಾಗಿದೆ ಎಂದು ಪ್ರಯಾಣಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ರೈಲ್ವೆ ಬಳಕೆದಾರರ ಸಂಘಟನೆಗಳು ಹಾಗೂ ಕಿಶೋರ್ ಕುಮಾರ್ ಸೇರಿದಂತೆ ಜಿಲ್ಲೆಯ ಸರ್ವ ಜನಪ್ರತಿನಿಧಿಗಳ ಈ ಜಂಟಿ ಪ್ರಯತ್ನದಿಂದಾಗಿ, ಬೆಂಗಳೂರು–ಮಂಗಳೂರು ವಂದೇ ಭಾರತ್ ರೈಲು ಆರಂಭವಾದ ಮೊದಲ ದಿನದಿಂದಲೇ ಕಬಕ ಪುತ್ತೂರಿನಲ್ಲಿ ನಿಲುಗಡೆ ದೊರೆಯಲಿದೆ ಎಂಬ ಭರವಸೆ ಸ್ಥಳೀಯರಲ್ಲಿದೆ. ಈ ನಿಲುಗಡೆಯು ಒಳನಾಡಿನ ಸಂಪರ್ಕ ವ್ಯವಸ್ಥೆಗೆ ಹೊಸ ಚೈತನ್ಯ ನೀಡುವುದರ ಜತೆಗೆ, ರೈಲ್ವೆ ಇಲಾಖೆಗೂ ಉತ್ತಮ ಆದಾಯದ ಅವಕಾಶವನ್ನು ಕಲ್ಪಿಸಲಿದೆ.

