ಮಂಗಳೂರು ದಸರಾ ಹಬ್ಬದ ಪ್ರಯುಕ್ತ ಪರೀಕ್ಷೆ ಮುಂದೂಡಲು ದ.ಕ. ಜಿಲ್ಲಾ ಎನ್.ಎಸ್.ಯು.ಐ. ಆಗ್ರಹ

Prakhara News
1 Min Read

ಮಂಗಳೂರು: ಮಂಗಳೂರಿನ ಸೈಂಟ್ ಆಗ್ನೆಸ್ ಕಾಲೇಜ್ ಹಾಗೂ ಕೆನರಾ ಕಾಲೇಜ್ ನಲ್ಲಿ ದಸರಾ ಹಬ್ಬದ ಸಂದರ್ಭದಲ್ಲಿ ಪರೀಕ್ಷೆ ಆಯೋಜಿಸಿರುವುದನ್ನು ಮರುಪರಿಶೀಲಿಸಿ ಪರೀಕ್ಷೆಯನ್ನು ಮುಂದೂಡುವಂತೆ ದಕ್ಷಿಣ ಕನ್ನಡ ಜಿಲ್ಲಾ ಎನ್.ಎಸ್.ಯು.ಐ. ಅಧ್ಯಕ್ಷ ಸುಹಾನ್ ಆಳ್ವ ಆಗ್ರಹಿಸಿದ್ದಾರೆ.

ಮಂಗಳೂರಿನ ದಸರಾ ಹಬ್ಬವು ಕರಾವಳಿ ಕರ್ನಾಟಕದ ಪ್ರಮುಖ ಸಾಂಸ್ಕೃತಿಕ ಮತ್ತು ಧಾರ್ಮಿಕ ಆಚರಣೆಯಾಗಿದ್ದು, ದಸರಾ ಉತ್ಸವದಲ್ಲಿ ಭಾಗವಹಿಸುವುದು ಅನೇಕ ವಿದ್ಯಾರ್ಥಿಗಳ ಆಸೆಯಾಗಿದೆ. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಭಾವನೆಗಳಿಗೆ ಹಾಗೂ ಹಬ್ಬದ ಆಚರಣೆಗೆ ಗೌರವ ನೀಡಿ ಪರೀಕ್ಷೆಯನ್ನು ಮುಂದೂಡಲು ಕಾಲೇಜು ಆಡಳಿತ ಮಂಡಳಿಗಳು ಸೂಕ್ತ ನಿರ್ಧಾರ ಕೈಗೊಳ್ಳಬೇಕು.


ಇಂದು ಎಬಿವಿಪಿ ಕಾರ್ಯಕರ್ತರು ದಿಢೀರನೆ ಪ್ರತಿಭಟನೆ ನಡೆಸಿರುವ ಕ್ರಮ ಸರಿಯಾದ ವಿಧಾನವಲ್ಲ.ವಿದ್ಯಾರ್ಥಿಗಳ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಮೊದಲು ಕಾಲೇಜಿನ ಆಡಳಿತ ಮಂಡಳಿಯೊಂದಿಗೆ ಮಾತುಕತೆ ನಡೆಸಿ, ಸೌಹಾರ್ದಯುತವಾಗಿ ಪರಿಹಾರ ಕಂಡುಕೊಳ್ಳುವ ಪ್ರಯತ್ನ ಮಾಡಬೇಕಿತ್ತು. ಆದರೆ ಎಬಿವಿಪಿ ನಡೆ ಸರಿಯಲ್ಲ. ವಿದ್ಯಾರ್ಥಿಗಳ ಹಿತಾಸಕ್ತಿಗೆ ಸಂಬಂಧಿಸಿದ ವಿಚಾರಗಳಲ್ಲಿ ಸಂವಾದ ಮತ್ತು ಮಾತುಕತೆಗೆ ಆದ್ಯತೆ ನೀಡುವುದು ಅಗತ್ಯವಾಗಿದೆ.

ಹಬ್ಬದ ಆಚರಣೆಯ ಹಕ್ಕು ಮತ್ತು ವಿದ್ಯಾರ್ಥಿಗಳ ಶೈಕ್ಷಣಿಕ ಹಿತಾಸಕ್ತಿಯನ್ನು ಪರಿಗಣಿಸಿ ಕಾಲೇಜು ಆಡಳಿತ ಮಂಡಳಿ ವಿದ್ಯಾರ್ಥಿಗಳೊಂದಿಗೆ ಚರ್ಚಿಸಿ ಸೂಕ್ತ ತೀರ್ಮಾನ ಕೈಗೊಳ್ಳಬೇಕು. ವಿದ್ಯಾರ್ಥಿಗಳಲ್ಲಿ ಅನಗತ್ಯ ಗೊಂದಲ ಉಂಟಾಗದಂತೆ ಪರೀಕ್ಷೆಯನ್ನು ಮುಂದೂಡಿ ಎಲ್ಲರಿಗೂ ಅನುಕೂಲವಾಗುವ ಪರಿಹಾರ ಕಂಡುಕೊಳ್ಳಬೇಕು ಎಂದು ಸುಹಾನ್ ಆಳ್ವ ಒತ್ತಾಯಿಸಿದ್ದಾರೆ.

Share This Article
Leave a Comment