ಮಂಗಳೂರು: ಸಿಮ್ ಸ್ವಾಪ್ ಮೂಲಕ ಹಿರಿಯ ನಾಗರಿಕನ ಬ್ಯಾಂಕ್ ಖಾತೆಗಳಿಂದ ₹2.12 ಕೋಟಿಗೂ ಅಧಿಕ ಹಣ ಲೂಟಿ ಹೊಡೆದ ಸೈಬರ್ ವಂಚಕರು..!

Prakhara News
2 Min Read

ಮಂಗಳೂರು : ಸಿಮ್ ನೆಟ್‌ವರ್ಕ್ ಹ್ಯಾಕ್ ಮಾಡಿ ಅಕ್ರಮವಾಗಿ ಆನ್‌ಲೈನ್ ನೆಟ್ ಬ್ಯಾಂಕಿಂಗ್ ಅಕ್ಸೆಸ್ ಪಡೆದ ಸೈಬರ್ ವಂಚಕರ ತಂಡವೊಂದು ಮಂಗಳೂರಿನ ನಿವೃತ್ತ ಖಾಸಗಿ ಉದ್ಯೋಗಿಯೊಬ್ಬರ ಬ್ಯಾಂಕ್ ಗಳಿಂದ ಬರೋಬ್ಬರಿ ₹2.12 ಕೋಟಿಗೂ ಅಧಿಕ ಹಣವನ್ನು ದೋಚಿರುವ ಸೈಬರ್ ಅಪರಾಧ ಪ್ರಕರಣ ಬೆಳಕಿಗೆ ಬಂದಿದೆ. ಮುಂಬೈನಲ್ಲಿ 50 ವರ್ಷಗಳ ಕಾಲ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡಿ ನಿವೃತ್ತರಾಗಿ ಪ್ರಸ್ತುತ ಮಂಗಳೂರಿನಲ್ಲಿ ನೆಲೆಸಿರುವ 78 ವರ್ಷದ ವೃದ್ಧರೊಬ್ಬರು ಈ ಸೈಬರ್ ವಂಚನೆಗೆ ಬಲಿಯಾಗಿದ್ದಾರೆ.

ಸಂತ್ರಸ್ತ ವೃದ್ಧರು ಮುಂಬೈನ ಕರ್ಲಾದಲ್ಲಿ ತಮ್ಮ ಹೆಸರಿನಲ್ಲಿ ಖರೀದಿಸಿದ್ದ ವೊಡಾಫೋನ್ ಮೊಬೈಲ್ ಸಂಖ್ಯೆಯನ್ನು ಕಳೆದ 10 ವರ್ಷಗಳಿಂದ ಬಳಸುತ್ತಿದ್ದು, ಅದನ್ನು ತಮ್ಮ ಎಲ್ಲಾ ಬ್ಯಾಂಕ್ ಖಾತೆಗಳಿಗೆ ಲಿಂಕ್ ಮಾಡಿದ್ದರು. ಕಳೆದ ಜುಲೈ ತಿಂಗಳಲ್ಲಿ ಇದ್ದಕ್ಕಿದ್ದಂತೆ ಅವರ ಮೊಬೈಲ್ ನೆಟ್‌ವರ್ಕ್ ಬಂದ್ ಆಗಿತ್ತು. ಬಳಿಕ ಮಂಗಳೂರಿನ ವೊಡಾಫೋನ್ ಕಚೇರಿಗೆ ತೆರಳಿ ವಿಚಾರಿಸಿದಾಗ, ಆ ಸಂಖ್ಯೆಯನ್ನು ಏರ್‌ಟೆಲ್ ನೆಟ್‌ವರ್ಕ್‌ಗೆ ಪೋರ್ಟ್ ಮಾಡಿ ಬೇರೊಬ್ಬರಿಗೆ ಮಾರಾಟ ಮಾಡಿರುವುದು ತಿಳಿದುಬಂದಿದೆ. ಕೂಡಲೇ ಅವರು ಏರ್‌ಟೆಲ್ ಕಚೇರಿಯಲ್ಲಿ ಆ ನಂಬರ್ ಬ್ಲಾಕ್ ಮಾಡುವಂತೆ ದೂರು ನೀಡಿದ್ದರು.

ಆಗಸ್ಟ್ 17ರಂದು ಸಂತ್ರಸ್ತರು ಐಡಿಎಫ್‌ಸಿ ಬ್ಯಾಂಕ್‌ಗೆ ತೆರಳಿದಾಗ ಅವರ ಖಾತೆಯಲ್ಲಿ ಹಲವಾರು ಅಸಹಜ ಆನ್‌ಲೈನ್ ವಹಿವಾಟುಗಳು ನಡೆದಿರುವುದು ಬೆಳಕಿಗೆ ಬಂದಿದೆ. ಆಘಾತಗೊಂಡ ಅವರು ಖಾತೆಯನ್ನು ಬ್ಲಾಕ್ ಮಾಡಿಸಿ, ಬ್ಯಾಂಕ್ ಸ್ಟೇಟ್‌ಮೆಂಟ್ ಪರಿಶೀಲಿಸಿದಾಗ ಸೈಬರ್ ಖದೀಮರು ನೆಟ್ ಬ್ಯಾಂಕಿಂಗ್ ಮೂಲಕ ಲಕ್ಷಾಂತರ ರೂಪಾಯಿ ವರ್ಗಾಯಿಸಿಕೊಂಡಿರುವುದು ಪತ್ತೆಯಾಗಿದೆ.
ಸಂದೇಹಗೊಂಡು ತಮ್ಮ ಇತರ ಬ್ಯಾಂಕ್‌ಗಳಾದ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ, ಬ್ಯಾಂಕ್ ಆಫ್ ಬರೋಡಾ, ಕರ್ನಾಟಕ ಬ್ಯಾಂಕ್ ಹಾಗೂ ಹೆಚ್‌ಡಿಎಫ್‌ಸಿ ಬ್ಯಾಂಕ್‌ಗಳ ಖಾತೆಗಳನ್ನು ಪರಿಶೀಲಿಸಿದಾಗ ಅಲ್ಲೂ ಕೋಟ್ಯಂತರ ರೂಪಾಯಿ ಖಾಲಿಯಾಗಿತ್ತು!

ಜುಲೈ 16 ರಿಂದ ಆಗಸ್ಟ್ 18ರ ನಡುವಿನ ಅವಧಿಯಲ್ಲಿ ಹಂತ ಹಂತವಾಗಿ ಒಟ್ಟು ₹2,12,95,500/- (ಎರಡು ಕೋಟಿಯ ಹನ್ನೆರಡು ಲಕ್ಷದ ತೊಂಬತ್ತೈದು ಸಾವಿರದ ಐನೂರು ರೂಪಾಯಿ) ಹಣವನ್ನು ವಂಚಕರು ವರ್ಗಾಯಿಸಿಕೊಂಡಿದ್ದಾರೆ. ಹಣ ವರ್ಗಾವಣೆಯಾಗುವಾಗ ಬ್ಯಾಂಕ್‌ನಿಂದ ಯಾವುದೇ ಎಸ್‌ಎಂಎಸ್ (SMS) ಅಥವಾ ಕರೆಗಳು ಬಂದಿರುವುದಿಲ್ಲ.

ಸಂತ್ರಸ್ತರಿಗೆ ‘ಹೇಮಂತ್’ ಎಂಬ ಅಪರಿಚಿತ ವ್ಯಕ್ತಿ (ಮೊಬೈಲ್ ನಂಬರ್: 7827590552) ನಿರಂತರ ಕರೆ ಮಾಡುತ್ತಿದ್ದು, ಬ್ಯಾಂಕ್ ಸ್ಟೇಟ್‌ಮೆಂಟ್ ಪರಿಶೀಲಿಸಿದಾಗಲೂ ಅದೇ ಹೆಸರಿನ ಖಾತೆಗೆ ಹಣ ವರ್ಗಾವಣೆಯಾಗಿರುವುದು ಕಂಡುಬಂದಿದೆ. ಸಿಮ್ ಅಕ್ಸೆಸ್ ಪಡೆದು ಆನ್‌ಲೈನ್ ಮೂಲಕ ಸಂಘಟಿತ ಅಪರಾಧ ಎಸಗಿರುವ ವಂಚಕರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಸೈಬರ್ ಕ್ರೈಮ್ (CEN) ಪೊಲೀಸ್ ಠಾಣೆಗೆ ದೂರು ನೀಡಲಾಗಿದ್ದು, ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದಾರೆ.

Share This Article
Leave a Comment