ಬೆಳ್ತಂಗಡಿ: ತಾಲೂಕಿನ ಕುವೆಟ್ಟು ಗ್ರಾಮದ ಪಿಲಿಚಂಡಿಕಲ್ಲು ಎಂಬಲ್ಲಿ ಜುಲೈ 29ರ ರಾತ್ರಿ ಬೆಳ್ತಂಗಡಿ ಪೊಲೀಸರು ನಡೆಸಿದ ದಿಢೀರ್ ತಪಾಸಣೆ ವೇಳೆ ₹7,60,000 ಮೌಲ್ಯದ ನಿಷೇಧಿತ ಎಂಡಿಎಂಎ (MDMA) ಹಾಗೂ ಗಾಂಜಾವನ್ನು ವಶಪಡಿಸಿಕೊಂಡಿದ್ದು, ಒಬ್ಬ ಆರೋಪಿಯನ್ನು ಬಂಧಿಸಿದ್ದಾರೆ.


ಬೆಳ್ತಂಗಡಿ ಠಾಣಾ ಪೊಲೀಸ್ ಉಪನಿರೀಕ್ಷಕ ಆನಂದ ಎಂ. ಹಾಗೂ ಸಿಬ್ಬಂದಿ ಜುಲೈ 29ರ ರಾತ್ರಿ ರೌಂಡ್ಸ್ ಕರ್ತವ್ಯದಲ್ಲಿದ್ದಾಗ, ಪಿಲಿಚಂಡಿಕಲ್ಲು ಎಂಬಲ್ಲಿ ಆಟೋ ರಿಕ್ಷಾ ಬಳಿ ಅನುಮಾನಾಸ್ಪದವಾಗಿ ನಿಂತಿದ್ದ ಯುವಕನನ್ನು ವಶಕ್ಕೆ ಪಡೆದರು. ವಿಚಾರಣೆ ನಡೆಸಿದಾಗ ಆತ ಕುವೆಟ್ಟು ನಿವಾಸಿ ತ್ವಲಹ್ ಯಾನೆ ಅನ್ವರ್ ಯಾನೆ ಅನ್ಸರ್ (21) ಎಂದು ತಿಳಿದುಬಂದಿದೆ. ಆತನನ್ನು ತಪಾಸಣೆ ನಡೆಸಿದಾಗ 27 ಗ್ರಾಂ ಗಾಂಜಾ ಹಾಗೂ ಮೊಬೈಲ್ ಪತ್ತೆಯಾಗಿದೆ.

ಸ್ಥಳದಲ್ಲಿದ್ದ ಆಟೋ ರಿಕ್ಷಾ ಹಾಗೂ ಕಾರನ್ನು ಕೂಲಂಕಷವಾಗಿ ಪರಿಶೀಲಿಸಿದಾಗ ಸುಮಾರು 76.59 ಗ್ರಾಂ ತೂಕದ ₹7.60 ಲಕ್ಷ ಮೌಲ್ಯದ ಎಂಡಿಎಂಎ ಪತ್ತೆಯಾಗಿದೆ. ಈ ವೇಳೆ ಮಾದಕ ವಸ್ತು ಪೂರೈಸಲು ಕಾರಿನಲ್ಲಿ ಬಂದಿದ್ದ ಮತ್ತೊಬ್ಬ ಆರೋಪಿ ಅಮ್ಜತ್ ಖರಾರ್ ಎಂಬಾತ ತನ್ನ ಕಾರನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದಾನೆ. ಘಟನೆಗೆ ಸಂಬಂಧಿಸಿದಂತೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ (ಅಕ್ರ 82/2026, ಕಲಂ: 8(c), 20(b)(ii)(A), 27A, 22(c) NDPS ಕಾಯ್ದೆ) ಪ್ರಕರಣ ದಾಖಲಾಗಿದೆ. ಬಂಧಿತ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಮಾನ್ಯ ನ್ಯಾಯಾಧೀಶರು 14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿದ್ದಾರೆ. ಪರಾರಿಯಾದ ಆರೋಪಿ ಅಮ್ಜತ್ ಖರಾರ್ ಪತ್ತೆಗೆ ಪೊಲೀಸರು ಜಾಲ ಬೀಸಿದ್ದಾರೆ.



