ಮಂಗಳೂರು: ದಸರಾ ಸಂಭ್ರಮದ ಅವಧಿಯಲ್ಲೇ ಪದವಿ ಸೆಮಿಸ್ಟರ್ ಪರೀಕ್ಷೆಗಳನ್ನು ಆಯೋಜಿಸಿದ ಮಂಗಳೂರಿನ ಕಾಲೇಜಿನ ವಿರುದ್ಧ ನೂರಾರು ವಿದ್ಯಾರ್ಥಿನಿಯರು ಹಾಗೂ ಎಬಿವಿಪಿ ಕಾರ್ಯಕರ್ತರು ನಡೆಸಿದ ಪ್ರತಿಭಟನೆಯನ್ನು, ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾಧಿಕಾರಿಗಳು, ಪೊಲೀಸ್ ಆಯುಕ್ತರು, ಸಂಬಂಧಪಟ್ಟ ಎಲ್ಲರೊಡನೆ ಮಾತುಕತೆ ನಡೆಸಿ ಇಂತಹ ಅನಗತ್ಯ ಗೊಂದಲವನ್ನು ಬಗೆಹರಿಸುವಂತೆ ಮನವಿ ಮಾಡಿದ್ದೆ. ಎಲ್ಲವೂ ಸುಸೂತ್ರವಾಗಿ ಬಗೆಹರಿಯುತ್ತಿದ್ದ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕರ ಸೂಚನೆ ಅಥವಾ ಒತ್ತಡಕ್ಕೆ ಮಣಿದು ವಿದ್ಯಾರ್ಥಿಗಳ ವಿರುದ್ಧ ಪೊಲೀಸ್ ಇಲಾಖೆ ನಡೆದುಕೊಂಡ ಅತಿರೇಕದ ವರ್ತನೆ ಖಂಡನೀಯವಾದುದು ಎಂದು ಇಂದು ನಡೆದ ಸುದ್ದಿ ಗೋಷ್ಠಿಯಲ್ಲಿ ಮಂಗಳೂರು ದಕ್ಷಿಣದ ಶಾಸಕರಾದ ವೇದವ್ಯಾಸ ಕಾಮತ್ ನುಡಿದರು.


ಈ ಹಿಂದೆ ಡಿಸೆಂಬರ್ 25 ರಂದು ಕ್ರಿಸ್ಮಸ್ ಇದ್ದ ಕಾರಣ ಮಂಗಳೂರು ವಿಶ್ವವಿದ್ಯಾನಿಲಯದ ಅಡಿಯಲ್ಲಿದ್ದ 140 ಕ್ಕೂ ಹೆಚ್ಚು ಕಾಲೇಜುಗಳ ಮರುದಿನದ (ಡಿ.26) ಪರೀಕ್ಷೆಯನ್ನು ಮುಂದೂಡಲಾಗಿತ್ತು. ಅದೇ ಮಾದರಿಯಲ್ಲಿ ಸ್ವಾಯತ್ತ (Autonomous) ಆಗಿರುವ ಕೇವಲ ಈ ಒಂದು ಕಾಲೇಜಿನ ದಸರಾ ಹಬ್ಬದ ಮರುದಿನದ ಪರೀಕ್ಷೆಯನ್ನು ಮುಂದೂಡುವಂತೆ ವಿದ್ಯಾರ್ಥಿಗಳು ಮನವಿ ಮಾಡಿದ್ದರು. ಇದರಲ್ಲಿ ನಾವು ಯಾವುದೇ ರಾಜಕಾರಣ ಮಾಡಲು ಬಯಸುವುದಿಲ್ಲ. ವಿದ್ಯಾರ್ಥಿಗಳ ಪೋಷಕರು ನಮಗೆ ಕರೆ ಮಾಡಿ ತಿಳಿಸಿದಾಗ ಯಾರಿಗೂ ತೊಂದರೆಯಾಗಬಾರದು ಎಂಬ ಉದ್ದೇಶದಿಂದ ವಿದ್ಯಾರ್ಥಿಗಳು ಹಾಗೂ ಸಂಬಂಧಪಟ್ಟ ಎಲ್ಲರೊಡನೆ ಮಾತುಕತೆ ನಡೆಸಿದ್ದೆವು.
ದಸರಾವನ್ನು ಕುಟುಂಬದೊಂದಿಗೆ ಆಚರಿಸಬೇಕು ಎಂದುಕೊಂಡಿದ್ದ ವಿದ್ಯಾರ್ಥಿಗಳಿಗೆ ಪರೀಕ್ಷೆಯ ಮೂಲಕ ಸಂಭ್ರಮಕ್ಕೆ ಅಡ್ಡಿ ಪಡಿಸಲಾಗಿತ್ತು. ಈ ಬಗ್ಗೆ ವಿದ್ಯಾರ್ಥಿಗಳು ತಮ್ಮ ಕಾಲೇಜಿಗೆ ಮನವಿ ಮಾಡಿದ್ದರೂ ಯಾವುದೇ ಪ್ರಯೋಜನ ಆಗದಿದ್ದಾಗ ಶಾಂತಿಯುತವಾಗಿ ಪ್ರತಿಭಟನೆಗೆ ಇಳಿದಿದ್ದು, ಎಬಿವಿಪಿ ಬೆಂಬಲ ನೀಡಿದೆ.

ಈ ಸಂದರ್ಭದಲ್ಲಿ ಪೊಲೀಸರು ಸೌಜನ್ಯಯುತವಾಗಿ ವರ್ತಿಸುವ ಬದಲು, ವಿದ್ಯಾರ್ಥಿಗಳ ಕುತ್ತಿಗೆ ಪಟ್ಟಿ ಹಿಡಿದು ಎಳೆದುಕೊಂಡು ಹೋಗಿರುವುದು ತಪ್ಪು. ಅದರಲ್ಲೂ ಭಾರತ್ ಮಾತಾಕಿ ಜೈ ಎಂದ ವಿದ್ಯಾರ್ಥಿಯ ಮೇಲೆ ಹಲ್ಲೆ ನಡೆಸಿದ್ದು ಒಪ್ಪಲು ಸಾಧ್ಯವೇ ಇಲ್ಲ. ಈ ಕಾಂಗ್ರೆಸ್ ಸರ್ಕಾರದಲ್ಲಿ, ವಿಧಾನಸೌಧದಲ್ಲೇ ಪಾಕಿಸ್ತಾನ್ ಜಿಂದಾಬಾದ್ ಎನ್ನಬಹುದು. ಆದರೆ ಪ್ರತಿಭಟನೆ ಸಂದರ್ಭದಲ್ಲಿ ಭಾರತ್ ಮಾತಾ ಕಿ ಜೈ ಎನ್ನುವುದು ಮಹಾಪರಾಧವೇ? ಈ ಹಿಂದೆ ನಮ್ಮದೇ ಜಿಲ್ಲೆಯಲ್ಲಿ ಭಾರತ್ ಮಾತಾ ಕಿ ಜೈ ಎಂದಿದ್ದ ಹಿಂದೂ ಕಾರ್ಯಕರ್ತರ ಮೇಲೆ ಚೂರಿ ಇರಿತ ಮಾತ್ರವಲ್ಲದೇ ಪ್ರಕರಣ ಕೂಡಾ ದಾಖಲಾಗಿತ್ತು. ನಂತರ ಮಾನ್ಯ ಹೈಕೋರ್ಟ್ ನ್ಯಾಯಾಧೀಶರು, ಭಾರತ್ ಮಾತಾ ಕಿ ಜೈ ಎಂದರೆ ತಪ್ಪೇನು ಎಂದು ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಹಾಗೂ ಪೊಲೀಸ್ ಇಲಾಖೆಗೆ ಚಾಟಿ ಬೀಸಿ ಪ್ರಕರಣವನ್ನೇ ರದ್ದುಗೊಳಿಸಿತ್ತು.
ಪ್ರತಿಭಟನಾ ನಿರತ ವಿದ್ಯಾರ್ಥಿನಿಯರನ್ನು ನಿಯಂತ್ರಿಸಲು ಮಹಿಳಾ ಪೊಲೀಸರ ಬದಲು ಪುರುಷ ಪೊಲೀಸರನ್ನು ಬಳಸಿಕೊಂಡಿರುವುದು ಅಕ್ಷಮ್ಯ. ಇದನ್ನು ಪ್ರಶ್ನಿಸಿದ ವಿದ್ಯಾರ್ಥಿಯೊಬ್ಬನನ್ನು ಸಹ ಪೊಲೀಸರು ಎಳೆದುಕೊಂಡು ಹೋಗಿದ್ದು ಈ ರಾಜ್ಯ ಸರ್ಕಾರದ ಆಡಳಿತದಲ್ಲಿ ಮಹಿಳೆಯರ ಸ್ಥಿತಿಗತಿಯ ಬಗ್ಗೆ ಪ್ರಶ್ನೆ ಎದ್ದಿದೆ. ಪೊಲೀಸರು ಏಕಾಏಕಿ ವಿದ್ಯಾರ್ಥಿಗಳನ್ನು ಬಂಧಿಸಿ ಕರೆದೊಯ್ದ ವಿಷಯ ತಿಳಿದ ನಂತರ, ನಾವು ಪೊಲೀಸ್ ಠಾಣೆಗೆ ತೆರಳಿ ವಿದ್ಯಾರ್ಥಿಗಳಿಗೆ ಅವರ ಮನವಿ ನೀಡಲು ಅವಕಾಶ ನೀಡಿ ಎಂದು ಹೇಳಿ ಅವರನ್ನು ಬಿಡಿಸಿ ಕಳುಹಿಸಿದ್ದೆವು.
ಆ ನಂತರವೂ ಕೂಡಾ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆದಿದೆ ಎಂದರೆ ಅದರ ಹಿಂದೆ ಕಾಂಗ್ರೆಸ್ ನಾಯಕರಾದ ಯು.ಟಿ ಖಾದರ್ ಹಾಗೂ ಐವನ್ ಡಿಸೋಜ ಅವರೇ ಇದ್ದರೆಂದು ಹಲವರು ಆರೋಪಿಸುತ್ತಿದ್ದು, ಪೊಲೀಸರು ಕಾಂಗ್ರೆಸ್ ಪಕ್ಷದ ಎಜೇಂಟರ ರೀತಿಯಲ್ಲಿ ನಡೆದುಕೊಳ್ಳುವುದು ಸರಿಯಲ್ಲ.
ಅಲ್ಲಿದ್ದ ಯಾವುದೇ ವಿದ್ಯಾರ್ಥಿಗಳು ಕಲ್ಲು ತೂರಾಟವಾಗಲೀ, ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿಯಾಗಲೀ ಮಾಡಿಲ್ಲ. ಆದರೂ ವಿದ್ಯಾರ್ಥಿಗಳಿಗೆ ಹೊಡೆಯಲು ಅಧಿಕಾರ ಕೊಟ್ಟವರು ಯಾರು? ಇದನ್ನು ನಮ್ಮ ಬಿಜೆಪಿ ಪಕ್ಷವು ಖಂಡಿಸುತ್ತಾ, ಮುಂದಿನ ದಿನಗಳಲ್ಲಿ ಎಬಿವಿಪಿ ವಿದ್ಯಾರ್ಥಿಗಳ ಹೋರಾಟಕ್ಕೆ ಸಂಪೂರ್ಣ ಬೆಂಬಲಕ್ಕೆ ನೀಡುತ್ತದೆ.
ಭವಿಷ್ಯದಲ್ಲಿ ಇಂತಹ ಗೊಂದಲಗಳಿಗೆ ಆಸ್ಪದವಾಗದಂತೆ ನಾಗರಪಂಚಮಿ, ಅಷ್ಟಮಿ, ದಸರಾ ಸೇರಿದಂತೆ ಯಾವುದೇ ಹಬ್ಬಗಳ ಸಂದರ್ಭದಲ್ಲಿ ಪರೀಕ್ಷೆಗಳನ್ನು ಇಡಬಾರದು ಎಂದು ರಾಜ್ಯ ಸರ್ಕಾರವೇ ಸೂಕ್ತ ಆದೇಶವನ್ನು ಹೊರಡಿಸಬೇಕು ಎಂದು ಆಗ್ರಹಿಸುತ್ತಾ, ಸದಾ ಕಾಲ ವಿದ್ಯಾರ್ಥಿಗಳ ನ್ಯಾಯಯುತ ಬೇಡಿಕೆಗಾಗಿ ಹೋರಾಟ ನಡೆಸುವ ಎಬಿವಿಪಿಯನ್ನು ಯಾವುದೇ ಕಾರಣಕ್ಕೂ ಬಿಟ್ಟು ಕೊಡುವ ಪ್ರಶ್ನೆಯೇ ಇಲ್ಲ. ಕೂಡಲೇ ತಪ್ಪಿತಸ್ಥ ಪೊಲೀಸರನ್ನು ಅಮಾನತುಗೊಳಿಸಬೇಕು ಎಂದು ಆಗ್ರಹಿಸುತ್ತೇನೆ.

ಪತ್ರಿಕಾಗೋಷ್ಠಿಯಲ್ಲಿ ಮಂಡಲದ ಅಧ್ಯಕ್ಷರಾದ ರಮೇಶ್ ಕಂಡೆಟ್ಟು, ಪ್ರಧಾನ ಕಾರ್ಯದರ್ಶಿಗಳಾದ ರಮೇಶ್ ಹೆಗ್ಡೆ, ಲಲೇಶ್ ಕುಮಾರ್, ಯುವ ಮೋರ್ಚಾ ಜಿಲ್ಲಾಧ್ಯಕ್ಷ ನಂದನ್ ಮಲ್ಯ, ಮಂಡಲದ ಯುವ ಮೋರ್ಚಾ ಅಧ್ಯಕ್ಷ ಅಶ್ವಿತ್ ಕೊಟ್ಟಾರಿ, ಪ್ರಮುಖರಾದ ಮನೋಹರ್ ಕದ್ರಿ, ನಿಶಾಂತ್ ಪೂಜಾರಿ, ವರುಣ್ ರಾಜ್ ಅಂಬಟ್, ಋತ್ವಿಕ್ ಕದ್ರಿ, ರಾಜೇಂದ್ರ ಶೆಟ್ಟಿ, ಭಾಸ್ಕರ ಚಂದ್ರ ಶೆಟ್ಟಿ, ಉಪಸ್ಥಿತರಿದ್ದರು.

