ಅಭಿವೃದ್ಧಿಯ ‘ಹೆಸರು’ ಬದಲಾಯಿಸುವುದೇ ಕಾಂಗ್ರೆಸ್ ಕೈಚಳಕ: ಶಾಸಕ ವೇದವ್ಯಾಸ ಕಾಮತ್ ಕೆಂಡಾಮಂಡಲ!

Prakhara News
1 Min Read

ಮಂಗಳೂರು: “ಅಭಿವೃದ್ಧಿ ವಿಚಾರದಲ್ಲಿ ರಾಜಕಾರಣ ಮಾಡಬಾರದು ಎಂದು ಭಾಷಣ ಮಾಡುವ ಕಾಂಗ್ರೆಸ್ ನಾಯಕರು, ಮೊದಲು ತಾವೇ ಅದನ್ನು ಪಾಲಿಸುತ್ತಿದ್ದಾರೆಯೇ ಎಂದು ಆತ್ಮವಿಮರ್ಶೆ ಮಾಡಿಕೊಳ್ಳಲಿ.” ಹೀಗೆಂದು ಮಂಗಳೂರು ದಕ್ಷಿಣದ ಶಾಸಕ ವೇದವ್ಯಾಸ ಕಾಮತ್ ಗುಡುಗಿದರು.

ನಗರದ ಅಟಲ್ ಸೇವಾ ಕೇಂದ್ರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ದಾಖಲೆಗಳನ್ನು ಪ್ರದರ್ಶಿಸುತ್ತಾ, ಕಾಂಗ್ರೆಸ್ ಸರ್ಕಾರದ ಅನುದಾನದ ನಾಟಕವನ್ನು ಎಳೆಎಳೆಯಾಗಿ ಬಿಚ್ಚಿಟ್ಟರು.

ಮಹಾತ್ಮಾ ಗಾಂಧಿ ನಗರ ವಿಕಾಸ ಯೋಜನೆ-2ರ ಅಡಿಯಲ್ಲಿ ನಡೆಯುತ್ತಿರುವ 165 ಕೋಟಿ ರೂಪಾಯಿಗಳ ಕಾಮಗಾರಿಯ ಅಸಲಿ ಕಥೆಯನ್ನೇ ಕಾಮತ್ ಬಿಚ್ಚಿಟ್ಟಿದ್ದಾರೆ. “ಈ 165 ಕೋಟಿ ರೂ. ಅನುದಾನವನ್ನು ಘೋಷಿಸಿದ್ದು ಹಿಂದಿನ ಬಿಜೆಪಿ ಸರ್ಕಾರ. ಬಜೆಟ್ ಪ್ರತಿಗಳಲ್ಲೇ ಇದಕ್ಕೆ ದಾಖಲೆ ಇದೆ.

ಆದರೆ ಈಗ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ, ಅದೇ ಯೋಜನೆಗೆ ಕೇವಲ ‘2’ ಎಂದು ಸೇರಿಸಿ, ತನ್ನ ಸಾಧನೆ ಎಂಬಂತೆ ಬ್ಯಾನರ್ ಹಾಕಿಕೊಂಡು ಜನರ ಹಾದಿ ತಪ್ಪಿಸುತ್ತಿದೆ. ಹೆಸರು ಬದಲಾಯಿಸುವುದು ಬಿಟ್ಟರೆ ಕಾಂಗ್ರೆಸ್ ಮಾಡಿರುವ ಸಾಧನೆ ಶೂನ್ಯ” ಎಂದು ವ್ಯಂಗ್ಯವಾಡಿದರು.

ಹಣಕಾಸು ಇಲಾಖೆಯ ಅನುಮೋದನೆ ಇಲ್ಲದೆಯೇ ಶಿಲಾನ್ಯಾಸ ಮಾಡಲಾಗಿದೆ ಎಂಬ ಕಾಂಗ್ರೆಸ್ ನಾಯಕರ ಆರೋಪಕ್ಕೆ ತಿರುಗೇಟು ನೀಡಿದ ಶಾಸಕರು, “ಹಿಂದಿನ ಸರ್ಕಾರದ ಬಜೆಟ್ ಪುಟಗಳನ್ನು ಒಮ್ಮೆ ತಿರುವಿ ಹಾಕಿ ನೋಡಿ. ಬಜೆಟ್‌ನಲ್ಲಿ ಘೋಷಣೆಯಾಗುವುದು ಹಣಕಾಸು ಇಲಾಖೆಯ ಅನುಮತಿಯ ನಂತರವೇ ಎಂಬ ಕನಿಷ್ಠ ಜ್ಞಾನವೂ ಇಲ್ಲದ ಇವರು, ಸುಳ್ಳು ಆರೋಪ ಮಾಡುವುದರಲ್ಲಿ ನಿಸ್ಸಿಮರು,” ಎಂದು ಆಕ್ರೋಶ ಹೊರಹಾಕಿದರು.

“ನಮ್ಮ ಸರ್ಕಾರದ ಅವಧಿಯಲ್ಲಿ ಒಂದೇ ದಿನ 70ಕ್ಕೂ ಹೆಚ್ಚು ಗುದ್ದಲಿ ಪೂಜೆ ಮಾಡಿದ ದಾಖಲೆ ಇದೆ. ಆದರೆ ಈ ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಒಂದೇ ಒಂದು ಗುದ್ದಲಿ ಪೂಜೆ ನಡೆಸಲು ಇವರಿಗೆ ಸಾಧ್ಯವಾಗಿಲ್ಲ. ಬಿಜೆಪಿ ಅವಧಿಯಲ್ಲಿ ಮಂಜೂರಾದ ಅನುದಾನಗಳಿಗೆ ತಡೆ ನೀಡಿ ಈಗ ಸತತ ಪ್ರಯತ್ನದ ಬಳಿಕ ಬಿಡುಗಡೆಯಾದ ಕೆಲಸಗಳನ್ನೇ ತಮ್ಮ ಸಾಧನೆ ಎನ್ನುತ್ತಿರುವುದು ಹಾಸ್ಯಾಸ್ಪದ. ರಾಜಕಾಲುವೆ ಹೂಳೆತ್ತುವ ಕೆಲಸ ಪ್ರತಿ ವರ್ಷ ನಡೆಯುವಂತದ್ದು, ಅದು ಜನರ ತೆರಿಗೆ ಹಣ. ಅದಕ್ಕೂ ಕೈ ಹಾಕುತ್ತಿರುವುದು ಇವರ ಹತಾಶೆಯನ್ನು ತೋರಿಸುತ್ತದೆ,” ಎಂದು ಲೇವಡಿ ಮಾಡಿದರು.

Share This Article
Leave a Comment