ಕಾಸರಗೋಡು: ಮುಖಕ್ಕೆ ಗುಂಡು ತಗುಲಿದ ರೀತಿಯಲ್ಲಿ ಯುವಕನ ಮೃತದೇಹ ಪತ್ತೆ..!

Prakhara News
1 Min Read

ಕಾಸರಗೋಡು: ಬೇಟೆಯಾಡಲು ತೆರಳುತ್ತಿದ್ದ ವೇಳೆ ಸ್ಕೂಟರ್‌ನಲ್ಲಿ ಸಾಗಿಸುತ್ತಿದ್ದ ಲೋಡ್ ಮಾಡಿದ ರೈಫಲ್ ಆಕಸ್ಮಿಕವಾಗಿ ಸಿಡಿದು 28 ವರ್ಷದ ಯುವಕನೊಬ್ಬ ಸ್ಥಳದಲ್ಲೇ ಮೃತಪಟ್ಟ ದಾರುಣ ಘಟನೆ ಕಾಸರಗೋಡಿನ ಮುಳಿಯಾರ್ ಪಂಚಾಯಿತಿಯ ಕಟ್ಟಿಪ್ಪಳಂನಲ್ಲಿ ಭಾನುವಾರ ರಾತ್ರಿ ನಡೆದಿದೆ. ಕಟ್ಟಿಪ್ಪಳಂ ನಿವಾಸಿ ಮೊಯ್ದು ಮತ್ತು ಜಮೀಲಾ ದಂಪತಿಯ ಪುತ್ರ ಹೈದರ್ ಅಲಿ (28) ಮೃತ ದುರ್ದೈವಿ.

ಅಡೂರು ಪೊಲೀಸರು ನೀಡಿರುವ ಮಾಹಿತಿಯಂತೆ, ಹೈದರ್ ಅಲಿ ಭಾನುವಾರ ರಾತ್ರಿ ಬೇಟೆಯಾಡುವ ಉದ್ದೇಶದಿಂದ ಸ್ಕೂಟರ್‌ನಲ್ಲಿ ತೆರಳುತ್ತಿದ್ದರು. ಪ್ರಯಾಣದ ವೇಳೆ ರೈಫಲ್ ಬೀಳದಂತೆ ತಡೆಯಲು, ಲೋಡ್ ಮಾಡಿದ್ದ ರೈಫಲ್‌ನ ಬಟ್ ಅನ್ನು ಸ್ಕೂಟರ್‌ನ ಫುಟ್‌ಬೋರ್ಡ್‌ನಲ್ಲಿ ತಮ್ಮ ಪಾದಗಳ ನಡುವೆ ಇರಿಸಿಕೊಂಡು, ಮೇಲ್ಭಾಗವನ್ನು ಶರ್ಟ್‌ನ ಒಳಗೆ ಇಟ್ಟುಕೊಂಡಿದ್ದರು ಎನ್ನಲಾಗಿದೆ.

ರಸ್ತೆಯಲ್ಲಿ ಸ್ಕೂಟರ್ ಚಲಾಯಿಸುತ್ತಿದ್ದ ವೇಳೆ ಆಕಸ್ಮಿಕವಾಗಿ ಬಂದೂಕಿನ ಟ್ರಿಗರ್ ಒತ್ತಲ್ಪಟ್ಟು ಗುಂಡು ಸಿಡಿದಿದ್ದು, ಅದು ಹೈದರ್ ಅಲಿ ಅವರ ಗಲ್ಲ ಮತ್ತು ತಲೆಯನ್ನು ಸೀಳಿಕೊಂಡು ಹೋಗಿದೆ ಎಂದು ಪೊಲೀಸರು ಶಂಕಿಸಿದ್ದಾರೆ. ಕಟ್ಟಿಪ್ಪಳಂನ ಮೈದಾನವೊಂದರ ಬಳಿ ಸ್ಕೂಟರ್ ಹಾಗೂ ರೈಫಲ್ ಪಕ್ಕದಲ್ಲಿಯೇ ಹೈದರ್ ಅಲಿ ರಕ್ತದ ಮಡುವಿನಲ್ಲಿ ಬಿದ್ದಿರುವುದು ಪತ್ತೆಯಾಗಿದೆ. ತಕ್ಷಣವೇ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಅದಾಗಲೇ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದರು.

ಕೃತ್ಯಕ್ಕೆ ಬಳಸಲಾದ ರೈಫಲ್ ಪರವಾನಗಿ ಪಡೆದದ್ದೇ ಅಥವಾ ಅಕ್ರಮವಾಗಿ ತಯಾರಿಸಿದ ದೇಶೀಯ ಬಂದೂಕೇ ಎಂಬುದು ಇನ್ನಷ್ಟೇ ಖಚಿತವಾಗಬೇಕಿದೆ. ತನಿಖೆಯ ಬಳಿಕವಷ್ಟೇ ನಿಖರ ಮಾಹಿತಿ ತಿಳಿದುಬರಲಿದೆ ಎಂದು ಅಡೂರು ವೃತ್ತ ನಿರೀಕ್ಷಕರು ತಿಳಿಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕಾಸರಗೋಡು ಜನರಲ್ ಆಸ್ಪತ್ರೆಯ ಶವಾಗಾರಕ್ಕೆ ಸ್ಥಳಾಂತರಿಸಲಾಗಿದ್ದು, ಅಡೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ. ದುಬೈನಲ್ಲಿ ಉದ್ಯೋಗದಲ್ಲಿದ್ದ ಹೈದರ್ ಅಲಿ ಇತ್ತೀಚೆಗಷ್ಟೇ ಊರಿಗೆ ಮರಳಿ, ಬೋವಿಕ್ಕಾನದಲ್ಲಿ ಜವಳಿ ಅಂಗಡಿಯೊಂದನ್ನು ಆರಂಭಿಸಿದ್ದರು.

Share This Article
Leave a Comment