ಮಂಗಳೂರಿನಲ್ಲಿ ಮತ್ತೊಂದು ಸೈಬರ್ ವಂಚನೆ..! ಪಾರ್ಸಲ್ ಹೆಸರಲ್ಲಿ ಮಹಿಳೆಗೆ ಬರೋಬ್ಬರಿ 6 ಲಕ್ಷದ 84 ಸಾವಿರ ರೂಪಾಯಿ ಪಂಗನಾಮ

Prakhara News
1 Min Read

ಮಂಗಳೂರು : ದುಬೈನಿಂದ ಕಳುಹಿಸಿದ ಬೆಲೆಬಾಳುವ ಪಾರ್ಸಲ್ ನೀಡುವುದಾಗಿ ನಂಬಿಸಿ ಮಂಗಳೂರಿನ ಮಹಿಳೆಯೊಬ್ಬರಿಗೆ ಅಪರಿಚಿತ ವ್ಯಕ್ತಿಗಳು ₹6,84,500 ವಂಚಿಸಿರುವ ಘಟನೆ ಬೆಳಕಿಗೆ ಬಂದಿದೆ. ಈ ಸಂಬಂಧ ಸಂತ್ರಸ್ತ ಮಹಿಳೆ ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿದ್ದಾರೆ.

ನಗರದ ನಿವಾಸಿ 44 ವರ್ಷದ ಮಹಿಳೆಯ ಪತಿ ದುಬೈನಲ್ಲಿ ಕೆಲಸ ಮಾಡುತ್ತಿದ್ದು, ಆಗಾಗ ಪಾರ್ಸಲ್ ಕಳುಹಿಸುತ್ತಿದ್ದರು. ಇದನ್ನು ಬಂಡವಾಳ ಮಾಡಿಕೊಂಡ ವಂಚಕರು, ಏಪ್ರಿಲ್ 21 ರಂದು ಲಂಡನ್‌ನ ನಂಬರ್‌ನಿಂದ ವಾಟ್ಸ್ ಆ್ಯಪ್ ಕರೆ ಮಾಡಿ, “ನಿಮ್ಮ ಪತಿ ಫೆಡ್‌ಎಕ್ಸ್ ಕಾರ್ಗೋ ಮೂಲಕ ಪಾರ್ಸಲ್ ಕಳುಹಿಸಿದ್ದಾರೆ” ಎಂದು ನಂಬಿಸಿದ್ದರು.

ಬಳಿಕ ಏಪ್ರಿಲ್ 27 ರಂದು ಪುನಃ ಕರೆ ಮಾಡಿ, “ಪಾರ್ಸಲ್‌ನಲ್ಲಿ ಚಿನ್ನ, ಲಂಡನ್ ಪೌಂಡ್ಸ್, ಡೈಮಂಡ್ ವಾಚ್ ಸೇರಿದಂತೆ ಸುಮಾರು ₹5.5 ಕೋಟಿ ಮೌಲ್ಯದ ವಸ್ತುಗಳಿವೆ” ಎಂದು ಆಮಿಷ ಒಡ್ಡಿದ್ದರು.
ಪಾರ್ಸಲ್ ಪಡೆಯಲು ಕಸ್ಟಮ್ಸ್ ಮತ್ತು ಜಿಎಸ್‌ಟಿ ಹೆಸರಿನಲ್ಲಿ ವಂಚಕರು ಹಣ ಪೀಕಲು ಶುರು ಮಾಡಿದರು:

ಕಸ್ಟಮ್ಸ್ ಶುಲ್ಕ: ಏಪ್ರಿಲ್ 28 ರಂದು ಪಾರ್ಸಲ್ ಡೆಲಿವರಿ ಮಾಡಲು ₹1,10,500 ಪಡೆದರು.

ಜಿಎಸ್‌ಟಿ ಚಾರ್ಜ್: ಏಪ್ರಿಲ್ 29 ರಂದು ₹4,48,000 ಜಿಎಸ್‌ಟಿ ಪಾವತಿಸುವಂತೆ ಬೇಡಿಕೆ ಇಟ್ಟರು. ಮಹಿಳೆ ಒಪ್ಪದಿದ್ದಾಗ ಅರ್ಧದಷ್ಟು ಅಂದರೆ ₹2,24,000 ಹಣವನ್ನು ಪಾವತಿಸಿಕೊಂಡರು.

ದಾಖಲೆ ಶುಲ್ಕ: ಏಪ್ರಿಲ್ 30 ರಂದು ಬಾಕಿ ಜಿಎಸ್‌ಟಿ ಮತ್ತು ಡಾಕ್ಯುಮೆಂಟ್ ಚಾರ್ಜ್ ಹೆಸರಿನಲ್ಲಿ ₹2,50,000 ವಸೂಲಿ ಮಾಡಿದರು.

ಕರೆನ್ಸಿ ಬದಲಾವಣೆ: ಅದೇ ದಿನ ಪಾರ್ಸಲ್‌ನಲ್ಲಿರುವ ಒಂದು ಲಕ್ಷ ಲಂಡನ್ ಪೌಂಡ್ಸ್ ಅನ್ನು ಇಂಡಿಯನ್ ಕರೆನ್ಸಿಗೆ ಬದಲಾಯಿಸಲು ಚಾರ್ಜ್ ನೀಡಬೇಕು ಎಂದು ನಂಬಿಸಿ ಮತ್ತೆ ₹1,00,000 ಪಾವತಿಸಿಕೊಂಡರು.

ಒಟ್ಟು ₹6,84,500 ಹಣ ವರ್ಗಾಯಿಸಿದರೂ ಯಾವುದೇ ಪಾರ್ಸಲ್ ಬಾರದಿದ್ದಾಗ ತಾನು ವಂಚನೆಗೆ ಒಳಗಾಗಿರುವುದು ಮಹಿಳೆಗೆ ಅರಿವಾಗಿದೆ. ಕೂಡಲೇ ಅವರು ಮಂಗಳೂರಿನ ಸೆನ್ (CEN) ಪೊಲೀಸ್ ಠಾಣೆಗೆ ದೂರು ನೀಡಿದ್ದು, ಆರೋಪಿಗಳ ಪತ್ತೆಗೆ ಪೊಲೀಸರು ಜಾಲ ಬೀಸಿದ್ದಾರೆ.

Share This Article
Leave a Comment