ಚೆನ್ನೈ : ತಮಿಳು ಚಿತ್ರರಂಗದ ಇತಿಹಾಸದಲ್ಲಿ ಕ್ರಾಂತಿಕಾರಿ ಬದಲಾವಣೆ ತಂದಿದ್ದ ಪ್ರಖ್ಯಾತ ಚಲನಚಿತ್ರ ನಿರ್ಮಾಪಕ, ನಿರ್ದೇಶಕ ಹಾಗೂ ಹಿರಿಯ ನಟ ಭಾರತಿರಾಜ (84) ಅವರು ವಯೋಸಹಜ ಆರೋಗ್ಯ ಸಮಸ್ಯೆಗಳಿಂದಾಗಿ ಬುಧವಾರ ಚೆನ್ನೈನ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದರು. ತಮಿಳು ಚಲನಚಿತ್ರ ನಿರ್ಮಾಪಕರ ಮಂಡಳಿಯು (TFPC) ಭಾರತಿರಾಜ ಅವರ ನಿಧನದ ಸುದ್ದಿಯನ್ನು ಅಧಿಕೃತವಾಗಿ ಖಚಿತಪಡಿಸಿದೆ. “ನಮ್ಮ ಸಂಘದ ಹಿರಿಯ ಸದಸ್ಯರು, ಮಾಜಿ ಅಧ್ಯಕ್ಷರು ಹಾಗೂ ಲೆಜೆಂಡರಿ ನಿರ್ದೇಶಕರಾದ ಶ್ರೀ ಭಾರತಿರಾಜ ಅವರ ನಿಧನಕ್ಕೆ ನಾವು ತೀವ್ರ ವಿಷಾದ ವ್ಯಕ್ತಪಡಿಸುತ್ತೇವೆ” ಎಂದು ಮಂಡಳಿ ತನ್ನ ಶೋಕ ಸಂದೇಶದಲ್ಲಿ ತಿಳಿಸಿದೆ.


ಕಳೆದ ಕೆಲವು ಸಮಯದಿಂದ ತೀವ್ರ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದ ಭಾರತಿರಾಜ ಅವರನ್ನು ಕಳೆದ ವರ್ಷದ ಡಿಸೆಂಬರ್‌ನಲ್ಲಿ ಉಸಿರಾಟದ ತೊಂದರೆಯಿಂದಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ವರ್ಷದ ಆರಂಭದಲ್ಲೂ ಅನಾರೋಗ್ಯದ ಕಾರಣ ಆಸ್ಪತ್ರೆ ಸೇರಿದ್ದ ಅವರು, ಚಿಕಿತ್ಸೆಯ ಬಳಿಕ ಏಪ್ರಿಲ್‌ನಲ್ಲಿ ಬಿಡುಗಡೆಯಾಗಿದ್ದರು. ಆದರೆ ಬುಧವಾರ ಮುಂಜಾನೆ ಚಿಕಿತ್ಸೆ ಫಲಕಾರಿಯಾಗದೆ ಅವರು ನಿಧನರಾಗಿದ್ದಾರೆ. ಮೃತರು ಪತ್ನಿ ಚಂದ್ರಲೀಲಾ ಮತ್ತು ಮಗಳು ಜನನಿ ಅವರನ್ನು ಅಗಲಿದ್ದಾರೆ. ಇವರ ಪುತ್ರ ಮನೋಜ್ ಭಾರತಿರಾಜ ಅವರು ಕಳೆದ 2025 ರಲ್ಲಿ ನಿಧನರಾಗಿದ್ದರು.

ಹಲವಾರು ದಶಕಗಳ ಕಾಲ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದ ಭಾರತಿರಾಜ, ತಮಿಳು ಸಿನಿಮಾವನ್ನು ಸ್ಟುಡಿಯೋಗಳ ನಾಲ್ಕು ಗೋಡೆಗಳಿಂದ ಹೊರತಂದು ಹಳ್ಳಿಗಳ ನೈಜ ಸೊಗಡನ್ನು ಪರದೆಯ ಮೇಲೆ ಮೂಡಿಸಿದ ಶ್ರೇಯಸ್ಸಿಗೆ ಪಾತ್ರರಾದವರು. ಇವರ ನಿರ್ದೇಶನದ ’16 ವಯತಿನಿಲೆ’ (1977), ‘ಕಿಜಕ್ಕೆ ಪೋಗುಮ್ ರೈಲ್’ (1978), ‘ಸಿಗಪ್ಪು ರೋಜಕ್ಕಲ್’ (1978), ‘ಮುದಲ್ ಮರಿಯಾತೈ’ (1985) ಮತ್ತು ‘ಕಿಝಕ್ಕು ಚೀಮಾಯಿಲೆ’ (1993) ಚಿತ್ರಗಳು ಭಾರತೀಯ ಚಿತ್ರರಂಗದ ಮೈಲಿಗಲ್ಲುಗಳಾಗಿವೆ. ತಮ್ಮ ಸುದೀರ್ಘ ವೃತ್ತಿಜೀವನದಲ್ಲಿ ಅವರು ಶಿವಾಜಿ ಗಣೇಶನ್, ಕಮಲ್ ಹಾಸನ್ ಹಾಗೂ ರಜನಿಕಾಂತ್ ಅಂತಹ ಮಹಾನ್ ನಟರನ್ನು ನಿರ್ದೇಶಿಸಿದ್ದರು. 2023ರ ಅಮೆಜಾನ್ ಪ್ರೈಮ್‌ನ ‘ಮಾಡರ್ನ್ ಲವ್ ಚೆನ್ನೈ’ ‘ಪರವೈ ಕೂಟಿಲ್ ವಾಜುಮ್ ಮಂಗಲ್’ ಇವರು ನಿರ್ದೇಶಿಸಿದ ಕೊನೆಯ ಚಿತ್ರವಾಗಿದೆ.

ಇತ್ತೀಚಿನ ವರ್ಷಗಳಲ್ಲಿ ‘ಆಯುತ ಎಳುತ್ತು’, ‘ತಿರುಚಿತ್ರಂಬಲಂ’ ಮತ್ತು ಸೂಪರ್ ಹಿಟ್ ‘ಮಹಾರಾಜ’ ಚಿತ್ರಗಳಲ್ಲಿ ಅದ್ಭುತವಾಗಿ ನಟಿಸಿ ನಟನಾಗಿಯೂ ಸೈ ಎನಿಸಿಕೊಂಡಿದ್ದರು. ಮೋಹನ್‌ಲಾಲ್ ಅಭಿನಯದ ‘ತುಡಾರಂ’ (2025) ಇವರು ನಟಿಸಿದ ಕೊನೆಯ ಸಿನಿಮಾವಾಗಿದೆ.


