ಚಿಕ್ಕಮಗಳೂರು : ಚಾರ್ಮಾಡಿ ಘಾಟಿಯಲ್ಲಿ ಬಂಡೆ ಕುಸಿತ ; ಅದೃಷ್ಟವಶಾತ್ ತಪ್ಪಿದ ಭಾರೀ ಅನಾಹುತ..!

Prakhara News
1 Min Read

ಚಿಕ್ಕಮಗಳೂರು : ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ ಸಮೀಪದ ಚಾರ್ಮಾಡಿ ಘಾಟಿಯಲ್ಲಿ ಬಂಡೆ ಕುಸಿದ ಘಟನೆ ನಡೆದಿದೆ. ಚಾರ್ಮಾಡಿ ಘಾಟಿಯ ಬಿದಿರುತಳ ಬಸ್ ನಿಲ್ದಾಣದ ಬಳಿ ಈ ಘಟನೆ ಸಂಭವಿಸಿದ್ದು, ಭೂಮಿಯ ತೇವಾಂಶ ಹೆಚ್ಚಾದ ಪರಿಣಾಮ ಬಂಡೆ ಕುಸಿದಿದೆ.

ಮಲೆನಾಡಿನಲ್ಲಿ ಭಾರೀ ಮಳೆಯಾಗದಿದ್ದರೂ ಕಳೆದ ಒಂದು ತಿಂಗಳಿನಿಂದ ಸಾಧಾರಣ ಮಳೆ ನಿರಂತರವಾಗಿ ಸುರಿಯುತ್ತಿದ್ದು, ಇದರ ಪರಿಣಾಮವಾಗಿ ಘಾಟಿ ಪ್ರದೇಶದ ಮಣ್ಣಿನಲ್ಲಿ ತೇವಾಂಶ ಹೆಚ್ಚಾಗಿದೆ. ಇದೇ ಕಾರಣದಿಂದ ಬಂಡೆ ಕುಸಿದಿರುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

ಘಟನೆಯಿಂದ ಯಾವುದೇ ವಾಹನಕ್ಕೆ ಹಾನಿಯಾಗಿಲ್ಲ. ಅಲ್ಲದೆ, ವಾಹನ ಸಂಚಾರಕ್ಕೂ ಯಾವುದೇ ತೊಂದರೆ ಉಂಟಾಗಿಲ್ಲ. ಬಂಡೆ ಕುಸಿದ ವೇಳೆ ಯಾವುದೇ ವಾಹನಗಳು ಆ ಭಾಗದಲ್ಲಿ ಸಂಚರಿಸದ ಕಾರಣ ಸಂಭವಿಸಬಹುದಾಗಿದ್ದ ದೊಡ್ಡ ಅನಾಹುತವೊಂದು ಅದೃಷ್ಟವಶಾತ್ ತಪ್ಪಿದೆ.

ಚಾರ್ಮಾಡಿ ಘಾಟಿ ಪ್ರದೇಶದಲ್ಲಿ ಮಳೆ ಮುಂದುವರಿದಿರುವ ಹಿನ್ನೆಲೆಯಲ್ಲಿ ಪ್ರಯಾಣಿಕರು ಹಾಗೂ ವಾಹನ ಸವಾರರು ಎಚ್ಚರಿಕೆಯಿಂದ ಸಂಚರಿಸುವಂತೆ ಅಧಿಕಾರಿಗಳು ಸೂಚಿಸಿದ್ದಾರೆ.

Share This Article
Leave a Comment