ಕರ್ಣಾಟಕ ಬ್ಯಾಂಕ್ ವಿರುದ್ಧ ಸುಳ್ಳು ಸುದ್ದಿ ಪ್ರಸಾರ ಮಾಡಿದ್ದ ಬಿಟಿವಿ ನ್ಯೂಸ್‌ಗೆ ₹1 ಲಕ್ಷ ದಂಡ, ಕ್ಷಮೆಯಾಚನೆಗೆ ಕೋರ್ಟ್ ಆದೇಶ..!

Prakhara News
2 Min Read

ಬೆಂಗಳೂರು: ಕರ್ಣಾಟಕ ಬ್ಯಾಂಕ್ ಲಿಮಿಟೆಡ್ ವಿರುದ್ಧ ಮಾನನಷ್ಟಕರ ಹಾಗೂ ಸುಳ್ಳು ಸುದ್ದಿಗಳನ್ನು ಪ್ರಸಾರ ಮಾಡಿದ್ದ ಕನ್ನಡ ಸುದ್ದಿ ವಾಹಿನಿ ‘ಬಿಟಿವಿ ನ್ಯೂಸ್’ (BTV News) ಗೆ ₹1 ಲಕ್ಷ ಪರಿಹಾರ ನೀಡುವಂತೆ ಹಾಗೂ ಬ್ಯಾಂಕಿನ ಬಳಿ ಬಹಿರಂಗ ಕ್ಷಮೆಯಾಚಿಸುವಂತೆ ಬೆಂಗಳೂರಿನ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯ ಆದೇಶಿಸಿದೆ. ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಧೀಶ ಆರ್.ವೈ. ಶಶಿಧರ ಅವರು ಅಕ್ಟೋಬರ್ 1 ರಂದು ಈ ತೀರ್ಪು ನೀಡಿದ್ದು, ಕರ್ನಾಟಕ ಬ್ಯಾಂಕ್ ಹಾಗೂ ಅದರ ಅಧಿಕಾರಿಗಳ ವಿರುದ್ಧ ಭವಿಷ್ಯದಲ್ಲಿ ಯಾವುದೇ ಮಾನನಷ್ಟಕರ ಹೇಳಿಕೆ ಅಥವಾ ಸುದ್ದಿಗಳನ್ನು ಪ್ರಕಟಿಸದಂತೆ ಚಾನೆಲ್‌ಗೆ ಶಾಶ್ವತ ತಡೆಯಾಜ್ಞೆ ವಿಧಿಸಿದ್ದಾರೆ.

ಜೂನ್ 29, 2025 ರಂದು ಕರ್ಣಾಟಕ ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಆಗಿದ್ದ ಶ್ರೀಕೃಷ್ಣನ್ ಹರಿ ಹರ ಶರ್ಮಾ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದರು. 2024-25ರ ಆರ್ಥಿಕ ವರ್ಷದ ಲೆಕ್ಕಪರಿಶೋಧನೆಯಲ್ಲಿ ಶರ್ಮಾ ಅವರು ನಿಯಮ ಮೀರಿ ಸಲಹೆಗಾರರು ಹಾಗೂ ಇತರ ವೆಚ್ಚಗಳಿಗಾಗಿ ₹1.16 ಕೋಟಿ ಖರ್ಚು ಮಾಡಿರುವುದು ಬಹಿರಂಗವಾಗಿತ್ತು. ಬ್ಯಾಂಕಿನ ಆಡಳಿತ ಮಂಡಳಿಯು ಈ ಮೊತ್ತವನ್ನು ಶರ್ಮಾ ಅವರಿಂದ ಮರುಪಡೆಯಲು ಶಿಫಾರಸು ಮಾಡಿ, ಮೇ 14, 2025 ರಂದು ಈ ವಿಷಯವನ್ನು ರಾಷ್ಟ್ರೀಯ ಷೇರು ವಿನಿಮಯ ಕೇಂದ್ರಕ್ಕೂ (NSE) ತಿಳಿಸಿತ್ತು. ತದನಂತರ ಶರ್ಮಾ ಅವರು ವೈಯಕ್ತಿಕ ಕಾರಣ ನೀಡಿ ರಾಜೀನಾಮೆ ನೀಡಿದ್ದರು.

ಈ ಬೆಳವಣಿಗೆಯನ್ನು ವರದಿ ಮಾಡುವಾಗ ಬಿಟಿವಿ ನ್ಯೂಸ್ ವಾಹಿನಿಯು ಬ್ಯಾಂಕಿನ ಆರ್ಥಿಕ ಸ್ಥಿರತೆ, ಆಂತರಿಕ ಆಡಳಿತ ಹಾಗೂ ಗ್ರಾಹಕರ ಠೇವಣಿಗಳ ಸುರಕ್ಷತೆಯ ಬಗ್ಗೆ ಯಾವುದೇ ಆಧಾರವಿಲ್ಲದೆ ಸಂವೇದನಾಶೀಲ ಮತ್ತು ಮಾನಹಾನಿಕರ ಸುದ್ದಿಗಳನ್ನು ಪ್ರಸಾರ ಮಾಡಿತ್ತು. “ಠೇವಣಿದಾರರ ಹಣಕ್ಕೆ ವಂಚನೆಯಾಗಬಹುದು, ಗ್ರಾಹಕರು ಬ್ಯಾಂಕಿನಲ್ಲಿ ಖಾತೆ ತೆರೆಯುವ ಮುನ್ನ ಎಚ್ಚರ ವಹಿಸಿ” ಎಂಬಿತ್ಯಾದಿ ಸುಳ್ಳು ಎಚ್ಚರಿಕೆಗಳನ್ನು ನೀಡಿ ಹೂಡಿಕೆದಾರರು ಮತ್ತು ಗ್ರಾಹಕರಲ್ಲಿ ಭೀತಿ ಹುಟ್ಟಿಸಲಾಗಿತ್ತು. ಈ ಪ್ರಸಾರದ ಬೆನ್ನಲ್ಲೇ ಜೂನ್ 26, 2025 ರಂದು ₹207 ರಷ್ಟಿದ್ದ ಬ್ಯಾಂಕಿನ ಷೇರು ಮೌಲ್ಯ ತೀವ್ರವಾಗಿ ಕುಸಿದಿತ್ತು.

ಬ್ಯಾಂಕ್ ಪರವಾಗಿ ಮುಖ್ಯ ವ್ಯವಹಾರ ಅಧಿಕಾರಿ ಚಂದ್ರಶೇಖರ್ ಅವರು ಸಲ್ಲಿಸಿದ ಸಾಕ್ಷ್ಯಾಧಾರಗಳು, ಲೆಕ್ಕಪರಿಶೋಧಿತ ವರದಿಗಳು ಹಾಗೂ ಪ್ರಸಾರದ ಸಿಡಿ (CD) ಪರಿಶೀಲಿಸಿದ ನ್ಯಾಯಾಲಯ, “ಬಿಟಿವಿ ನ್ಯೂಸ್ ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾ ಹೊರಡಿಸಿದ ಪತ್ರಿಕೋದ್ಯಮ ನಡವಳಿಕೆ, ತತ್ವಗಳು ಮತ್ತು ನೀತಿಶಾಸ್ತ್ರಗಳನ್ನು ಪಾಲಿಸಿಲ್ಲ. ವಿಶ್ವಾಸಾರ್ಹ ಮೂಲಗಳಿಂದ ಮಾಹಿತಿ ಪರಿಶೀಲಿಸದೆ ಜವಾಬ್ದಾರಿರಹಿತವಾಗಿ ವರದಿ ಪ್ರಸಾರ ಮಾಡಿ ಬ್ಯಾಂಕಿನ ಖ್ಯಾತಿಗೆ ಧಕ್ಕೆ ತಂದಿದೆ” ಎಂದು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿತು. ಕೋರ್ಟ್ ಸಮನ್ಸ್ ಜಾರಿಯಾಗಿದ್ದರೂ ಬಿಟಿವಿ ನ್ಯೂಸ್ ನ್ಯಾಯಾಲಯಕ್ಕೆ ಹಾಜರಾಗದ ಹಿನ್ನೆಲೆಯಲ್ಲಿ ಏಕಪಕ್ಷೀಯ ವಿಚಾರಣೆ ನಡೆಸಿದ ನ್ಯಾಯಾಲಯವು, ಬ್ಯಾಂಕಿಗೆ ₹1 ಲಕ್ಷ ದಂಡ ಪಾವತಿಸಲು ಹಾಗೂ ವಾಹಿನಿಯಲ್ಲಿ ಕ್ಷಮೆಯಾಚನೆ ಪ್ರಸಾರ ಮಾಡಲು ಆದೇಶಿಸಿದೆ.

Share This Article
Leave a Comment