ಬಂಟ್ವಾಳ : ರಾಯಿ ಗ್ರಾಮದ ಪಾಂಚಕೋಡಿ ಎಂಬಲ್ಲಿ ಶನಿವಾರ (ಆಗಸ್ಟ್ 1) ರಾತ್ರಿ ಕಾಲುಸಂಕ ದಾಟುತ್ತಿದ್ದ ವೇಳೆ ಕಾಲುಜಾರಿ ನೀರಿಗೆ ಬಿದ್ದು ನಾಪತ್ತೆಯಾಗಿದ್ದ ವ್ಯಕ್ತಿಯ ಮೃತದೇಹ ನಿರಂತರ ಶೋಧ ಕಾರ್ಯಾಚರಣೆಯ ಬಳಿಕ ಅರಳ ಗ್ರಾಮದ ಪಂಬದಗದ್ದೆ ಸಮೀಪ ಸೋಮವಾರ ಬೆಳಗ್ಗೆ ಪತ್ತೆಯಾಗಿದೆ. ಮೃತರನ್ನು ಪಾಂಚಕೋಡಿ ನಿವಾಸಿ ಜೋಸೆಫ್ ಪಿಂಟೊ ಎಂಬವರ ಪುತ್ರ ಜೀವನ್ ಪಿಂಟೊ (48) ಎಂದು ಗುರುತಿಸಲಾಗಿದೆ.


ಶನಿವಾರ ರಾತ್ರಿ ಸುಮಾರು 7:30ರ ವೇಳೆಗೆ ಜೀವನ್ ಪಿಂಟೊ ತಮ್ಮ ನಿವಾಸದಿಂದ ಸ್ವಲ್ಪವೇ ದೂರದಲ್ಲಿರುವ ಮಾವನ ಮನೆಗೆ ನಡೆದುಕೊಂಡು ಹೋಗುತ್ತಿದ್ದರು. ದಾರಿ ಮಧ್ಯೆ ತೋಡಿಗೆ ಅಳವಡಿಸಲಾಗಿದ್ದ ಕಾಲುಸಂಕದ ಮೇಲೆ ಸಾಗುವಾಗ ಆಕಸ್ಮಿಕವಾಗಿ ಜಾರಿ ಕಾಲುವೆ ನೀರಿಗೆ ಬಿದ್ದಿದ್ದಾರೆ ಎಂದು ಶಂಕಿಸಲಾಗಿದೆ. ಕಾಲುವೆಯಲ್ಲಿ ಚಪ್ಪಲಿ ಹಾಗೂ ಟಾರ್ಚ್ ಪತ್ತೆಯಾಗಿದ್ದು, ಅವರು ನೀರಿನಲ್ಲಿ ಕೊಚ್ಚಿ ಹೋಗಿರುವ ಸಾಧ್ಯತೆಯಿದೆ. ಘಟನೆ ನಡೆದ ಸಮಯದಲ್ಲಿ ಪ್ರದೇಶದಲ್ಲಿ ಭಾರಿ ಮಳೆ ಸುರಿಯುತ್ತಿದ್ದುದಲ್ಲದೆ, ಕತ್ತಲಾವರಿಸಿದ್ದರಿಂದ ತಕ್ಷಣಕ್ಕೆ ಪತ್ತೆ ಕಾರ್ಯ ನಡೆಸುವುದು ಕಷ್ಟಕರವಾಗಿತ್ತು.

ಭಾರೀ ಮಳೆ ಹಾಗೂ ಹೊಳೆಯಲ್ಲಿ ನೀರಿನ ಹರಿವಿನ ನಡುವೆಯೂ ಅಗ್ನಿಶಾಮಕ ದಳ, ಎನ್ಡಿಆರ್ಎಫ್ ಮತ್ತು ಸ್ಥಳೀಯರು ನಿರಂತರ ಶೋಧ ಕಾರ್ಯಾಚರಣೆ ನಡೆಸಿದ್ದರು. ಸತತ ಎರಡು ದಿನಗಳ ಕಾರ್ಯಾಚರಣೆಯ ಬಳಿಕ ಸೋಮವಾರ ಬೆಳಗ್ಗೆ ಅವರ ಮೃತದೇಹ ಪತ್ತೆಯಾಗಿದೆ. ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



