ಅನಂತಪುರ ವಿಧ್ಯಾರ್ಥಿನಿ ಮೇಲೆ ಮರ ಕತ್ತರಿಸುವ ಯಂತ್ರದಿಂದ ದಾಳಿ: ಆರೋಪಿ ಹೇಮಂತ್ ಮೇಲೆ ಪೊಲೀಸರಿಂದ ಶೂಟ್ ಔಟ್..!

Prakhara News
2 Min Read

ಅನಂತಪುರ: ರಾಪ್ತಾಡು ಸರ್ಕಾರಿ ಪ್ರೌಢಶಾಲೆಯ ತರಗತಿಯೊಳಗೆ ನುಗ್ಗಿ 10ನೇ ತರಗತಿಯ ಬಾಲಕಿ ಗೋಪಿಕಾ ಹಾಗೂ ಆಕೆಯನ್ನು ರಕ್ಷಿಸಲು ಬಂದ ಲಕ್ಷ್ಮಿ ಎಂಬ ವಿದ್ಯಾರ್ಥಿನಿಯ ಮೇಲೆ ವಿದ್ಯುತ್ ಗರಗಸದಿಂದ ಭೀಕರವಾಗಿ ಹಲ್ಲೆ ನಡೆಸಿದ್ದ ಸರಣಿ ಹಂತಕ ಆರೋಪಿ ಹೇಮಂತ್ ಮೇಲೆ ಪೊಲೀಸರು ಗುಂಡು ಹಾರಿಸಿ ಎನ್‌ಕೌಂಟರ್ ನಡೆಸಿದ್ದಾರೆ.

ಆತ್ಮಕೂರ್ ಅರಣ್ಯ ಪ್ರದೇಶದಲ್ಲಿ ಅಡಗಿ ಕುಳಿತಿದ್ದ ಆರೋಪಿಯನ್ನು ಬಂಧಿಸಲು ಯತ್ನಿಸಿದಾಗ ಆತ ಪರಾರಿಯಾಗಲು ಯತ್ನಿಸಿದ್ದು, ಈ ವೇಳೆ ಪೊಲೀಸರು 6 ಸುತ್ತು ಗುಂಡು ಹಾರಿಸಿದ್ದಾರೆ. ದಾಳಿಯಲ್ಲಿ ತೀವ್ರವಾಗಿ ಗಾಯಗೊಂಡ ಆರೋಪಿ ಹೇಮಂತ್‌ನನ್ನು ವಶಕ್ಕೆ ಪಡೆದು ಚಿಕಿತ್ಸೆಗಾಗಿ ಅನಂತಪುರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ರಾಪ್ತಾಡು ಮಂಡಲದ ಅಯ್ಯವರಿಪಲ್ಲಿ ಗ್ರಾಮದ ನಿವಾಸಿಯಾಗಿರುವ 15 ವರ್ಷದ ಬಾಲಕಿ ಗೋಪಿಕಾ, ರಾಪ್ತಾಡು ಜಿಲ್ಲಾ ಪಂಚಾಯಿತಿ ಪ್ರೌಢಶಾಲೆಯಲ್ಲಿ 10ನೇ ತರಗತಿ ಓದುತ್ತಿದ್ದಳು. ಶನಿವಾರ ಬೆಳಿಗ್ಗೆ ಶಾಲೆಯಲ್ಲಿ ಪಾಠ ನಡೆಯುತ್ತಿದ್ದಾಗ, ಕಟುಕ ಹೇಮಂತ್ ವಿದ್ಯುತ್ ಗರಗಸದೊಂದಿಗೆ ಏಕಾಏಕಿ ಕೋಣೆಗೆ ನುಗ್ಗಿ ಗೋಪಿಕಾಳ ಮೇಲೆ ಮನಬಂದಂತೆ ಭೀಕರವಾಗಿ ದಾಳಿ ನಡೆಸಿದ್ದಾನೆ. ಹಲ್ಲೆಯ ಪರಿಣಾಮ ಬಾಲಕಿಯ ಮುಖ, ತಲೆ ಹಾಗೂ ಬೆನ್ನಿನ ಭಾಗದಲ್ಲಿ ತೀವ್ರ ಆಳವಾದ ಗಾಯಗಳಾಗಿದ್ದವು. ತರಗತಿಯಲ್ಲಿ ನಡೆದ ಈ ರಕ್ತಸಿಕ್ತ ದುಷ್ಕೃತ್ಯವನ್ನು ಕಂಡು ಇತರ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಆಘಾತಕ್ಕೊಳಗಾಗಿದ್ದರು.

ಆದರೆ, ಅದೇ ತರಗತಿಯ ಲಕ್ಷ್ಮಿ ಎಂಬ ದಿಟ್ಟ ವಿದ್ಯಾರ್ಥಿನಿ ಪ್ರಾಣದ ಹಂಗು ತೊರೆದು ಮೃಗದಂತೆ ವರ್ತಿಸುತ್ತಿದ್ದ ಆರೋಪಿಯನ್ನು ತಡೆಯಲು ಯತ್ನಿಸಿದಳು. ಈ ವೇಳೆ ಆಕೆಯ ಎರಡೂ ಕಾಲುಗಳಿಗೆ ಗರಗಸದಿಂದ ತೀವ್ರ ಗಾಯಗಳಾಗಿವೆ.
ಎಲ್ಲರೂ ಕಿರುಚಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಂತೆ ಆರೋಪಿ ಹೇಮಂತ್ ವಿದ್ಯುತ್ ಗರಗಸವನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದ.

ರಕ್ತದ ಮಡುವಿನಲ್ಲಿದ್ದ ಗೋಪಿಕಾ ಹಾಗೂ ರಕ್ಷಣೆಗೆ ಬಂದ ಲಕ್ಷ್ಮಿಯನ್ನು ತಕ್ಷಣವೇ ಅನಂತಪುರ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಗೋಪಿಕಾಳ ಸ್ಥಿತಿ ಅತ್ಯಂತ ಚಿಂತಾಜನಕವಾಗಿದ್ದರಿಂದ ಆಕೆಯನ್ನು ತಕ್ಷಣವೇ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ಏರ್ ಆಂಬುಲೆನ್ಸ್ ಹಾಗೂ ಗ್ರೀನ್ ಕಾರಿಡಾರ್ ಮೂಲಕ ಸ್ಥಳಾಂತರಿಸಲಾಗಿದ್ದು, ಅಲ್ಲಿ ಆಕೆಗೆ ತುರ್ತು ಶಸ್ತ್ರಚಿಕಿತ್ಸೆ ನೀಡಲಾಗುತ್ತಿದೆ. ಮತ್ತೊಂದೆಡೆ, ಪರಾರಿಯಾಗಿದ್ದ ಆರೋಪಿ ಆತ್ಮಕೂರ್ ಅರಣ್ಯ ಪ್ರದೇಶದಲ್ಲಿ (Atmakur Forest Area) ಅಡಗಿರುವ ಖಚಿತ ಮಾಹಿತಿ ಪಡೆದ ಪೊಲೀಸರು ಸುತ್ತುವರಿದಿದ್ದಾರೆ. ಈ ವೇಳೆ ಪೊಲೀಸರ ಮೇಲೆಯೇ ದಾಳಿ ನಡೆಸಿ ತಪ್ಪಿಸಿಕೊಳ್ಳಲು ಯತ್ನಿಸಿದಾಗ ಪೊಲೀಸರು 6 ಸುತ್ತು ಗುಂಡು ಹಾರಿಸಿ ವಶಕ್ಕೆ ಪಡೆದಿದ್ದಾರೆ. ಗಾಯಾಳು ಆರೋಪಿಗೆ ಬಿಗಿ ಪೊಲೀಸ್ ಭದ್ರತೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಪ್ರಕರಣ ಸಂಬಂಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗಿದೆ.

Share This Article
Leave a Comment