ನೂರಾರು ರೋಗಿಗಳಿಗೆ ಮರುಜೀವ ನೀಡಿದ್ದ ಪ್ರಸಿದ್ಧ ಯುವ ನರವಿಜ್ಞಾನಿ ಡಾ. ಕುಂಕಲಾ ಲಾವಣ್ಯ ಹೃದಯಾಘಾತಕ್ಕೆ ಬಲಿ..!

Prakhara News
2 Min Read

ಆಂಧ್ರಪ್ರದೇಶ: ನೂರಾರು ರೋಗಿಗಳಿಗೆ ಮರುಜೀವ ನೀಡಿದ್ದ ಆಂಧ್ರಪ್ರದೇಶದ ಪ್ರಸಿದ್ಧ ಯುವ ನರವಿಜ್ಞಾನಿ (Neurologist) ಡಾ. ಕುಂಕಲಾ ಲಾವಣ್ಯ (32) ಅವರು ಹಠಾತ್‌ ಹೃದಯಾಘಾತದಿಂದ ನಿಧನರಾದ ದಾರುಣ ಘಟನೆ ಶ್ರೀ ಪೊಟ್ಟಿ ಶ್ರೀರಾಮುಲು ನೆಲ್ಲೂರು ಜಿಲ್ಲೆಯಲ್ಲಿ ನಡೆದಿದೆ.

ಅಪರೂಪದ ನರಸಂಬಂಧಿ ಕಾಯಿಲೆಯನ್ನು ಗೆದ್ದುಬಂದಿದ್ದ ಪ್ರತಿಭಾವಂತ ವೈದ್ಯೆಯೊಬ್ಬರು, ಸ್ವತಃ ಹೃದ್ರೋಗ ತಜ್ಞ ಪತಿ ಹಾಗೂ ವೈದ್ಯಕೀಯ ಸೌಲಭ್ಯಗಳಿದ್ದ ಸ್ವಂತ ಆಸ್ಪತ್ರೆಯಲ್ಲೇ ಕೊನೆಯುಸಿರೆಳೆದಿರುವುದು ಸಾರ್ವಜನಿಕರ ಹಾಗೂ ವೈದ್ಯಕೀಯ ಕ್ಷೇತ್ರದ ಕಣ್ಣಾಲಿಗಳನ್ನು ಒದ್ದೆಯಾಗಿಸಿದೆ.

ನೆಲ್ಲೂರು ಜಿಲ್ಲೆಯ ವೆಂಕಟಾಚಲಂ ಮಂಡಲದ ಚೆಮುಡುಗುಂಟದಲ್ಲಿರುವ ಪ್ರಸಿದ್ಧ ಎನ್‌ಎಲ್‌ ಆಸ್ಪತ್ರೆಯ ಅಧ್ಯಕ್ಷ ಡಾ. ದಶರಥ ನಾಗೇಂದ್ರ ಪ್ರಸಾದ್ ಹಾಗೂ ಲಕ್ಷ್ಮಿ ದಂಪತಿಯ ಪುತ್ರಿಯಾದ ಲಾವಣ್ಯ, 2016ರಲ್ಲಿ ನೆಲ್ಲೂರಿನ ನಾರಾಯಣ ವೈದ್ಯಕೀಯ ಕಾಲೇಜಿನಿಂದ ಎಂಬಿಬಿಎಸ್ ಪೂರ್ಣಗೊಳಿಸಿದ್ದರು. ಬಳಿಕ ಬೆಂಗಳೂರಿನಲ್ಲಿ ಜನರಲ್ ಮೆಡಿಸಿನ್ ಹಾಗೂ ಚೆನ್ನೈನಲ್ಲಿ ಡಿಎಂ ನರವಿಜ್ಞಾನ ವಿಭಾಗದಲ್ಲಿ ಚಿನ್ನದ ಪದಕದೊಂದಿಗೆ ಉನ್ನತ ಶಿಕ್ಷಣ ಮುಗಿಸಿದ್ದರು.

ಪ್ರಸ್ತುತ ನೆಲ್ಲೂರು ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ (ACSR GMC) ಸಹಾಯಕ ಪ್ರಾಧ್ಯಾಪಕಿಯಾಗಿ (Associate Professor) ಸೇವೆ ಸಲ್ಲಿಸುತ್ತಿದ್ದರು. ಪ್ರಸಿದ್ಧ ಹೃದ್ರೋಗ ತಜ್ಞ ಡಾ. ನಾಗೇಂದ್ರ ಪ್ರಸಾದ್ ಅವರನ್ನು ವಿವಾಹವಾಗಿದ್ದ ಇವರಿಗೆ ಇಬ್ಬರು ಪುಟ್ಟ ಮಕ್ಕಳಿದ್ದಾರೆ.

2025ರಲ್ಲಿ ಡಾ. ಲಾವಣ್ಯ ಅವರಿಗೆ ಏಕಾಏಕಿ ಮಾತು ಹಾಗೂ ನಿಲ್ಲುವ ಶಕ್ತಿ ಕುಂದಿ ಅನಾರೋಗ್ಯ ಕಾಡಿತ್ತು. ವೈದ್ಯಕೀಯ ಪರೀಕ್ಷೆಯಲ್ಲಿ ಅವರಿಗೆ ಅಪರೂಪದ ಸ್ವಯಂ ನಿರೋಧಕ ನರವೈಜ್ಞಾನಿಕ ಕಾಯಿಲೆಯಾದ ‘ಮೈಸ್ತೇನಿಯಾ ಗ್ರ್ಯಾವಿಸ್’ (Myasthenia Gravis) ತಗುಲಿರುವುದು ದೃಢಪಟ್ಟಿತ್ತು. ಆದರೆ, ಧೈರ್ಯಗೆಡದ ಲಾವಣ್ಯ ಸಂಕೀರ್ಣ ಶಸ್ತ್ರಚಿಕಿತ್ಸೆಗೆ ಒಳಗಾಗಿ ಸಾವು ಗೆದ್ದುಬಂದಿದ್ದರು.

ವೈದ್ಯರು ವಿಶ್ರಾಂತಿಗೆ ಸೂಚಿಸಿದ್ದರೂ, ಕೇವಲ 4 ತಿಂಗಳಲ್ಲಿ ಕರ್ತವ್ಯಕ್ಕೆ ಮರಳಿದ್ದ ಅವರು ಗ್ರಾಮೀಣ ಪ್ರದೇಶಗಳಲ್ಲಿ ಉಚಿತ ನರವಿಜ್ಞಾನ ವೈದ್ಯಕೀಯ ಶಿಬಿರಗಳನ್ನು ನಡೆಸಿ ಬಡವರಿಗೆ ಉಚಿತ ಔಷಧಿ ವಿತರಿಸುವ ಮೂಲಕ ಸಮಾಜಸೇವೆಯಲ್ಲೂ ಸಕ್ರಿಯರಾಗಿದ್ದರು.

ಆದರೆ, ಕಠಿಣ ನರರೋಗವನ್ನು ಮೆಟ್ಟಿ ನಿಂತಿದ್ದ ಯುವ ವೈದ್ಯೆಗೆ ವಿಧಿ ಹೃದಯಾಘಾತದ ರೂಪದಲ್ಲಿ ಮೃತ್ಯುವನ್ನೊಡ್ಡಿದೆ. ಬುಧವಾರ ಇದ್ದಕ್ಕಿದ್ದಂತೆ ಕುಸಿದುಬಿದ್ದ ಅವರಿಗೆ ಚಿಕಿತ್ಸೆ ನೀಡಲು ಸಮಯವೇ ಸಿಗದೆ ಕೆಲವೇ ಸೆಕೆಂಡುಗಳಲ್ಲಿ ಕೊನೆಯುಸಿರೆಳೆದಿದ್ದಾರೆ. ಪತಿ ಸ್ವತಃ ಹೃದ್ರೋಗ ತಜ್ಞರಾಗಿದ್ದರೂ ಹಾಗೂ ಅತ್ಯಾಧುನಿಕ ವೈದ್ಯಕೀಯ ಸೌಲಭ್ಯವಿದ್ದ ಸ್ವಂತ ಆಸ್ಪತ್ರೆಯಲ್ಲೇ ಇದ್ದರೂ ಆಕೆಯನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ ಎಂದು ಕುಟುಂಬಸ್ಥರು ಕಣ್ಣೀರಿಟ್ಟಿದ್ದಾರೆ.

Share This Article
Leave a Comment