ಮಂಗಳೂರು: ಗುಣಮಟ್ಟದ ತಾಯಿ-ಮಗುವಿನ ಆರೋಗ್ಯ ಸೇವೆಯಲ್ಲಿ ಮುಂಚೂಣಿಯಲ್ಲಿರುವ ಮಂಗಳೂರಿನ ಪ್ರಸಿದ್ಧ ದಕ್ಷಿಣ ಕನ್ನಡ ಜಿಲ್ಲಾ ಸರ್ಕಾರಿ ಲೇಡಿಗೋಷನ್ ಆಸ್ಪತ್ರೆಯು ರಾಜ್ಯ ಮಟ್ಟದಲ್ಲಿ ಪ್ರಥಮ ಸ್ಥಾನ ಗಳಿಸಿ ಮತ್ತೊಮ್ಮೆ ಕರಾವಳಿಯ ಕೀರ್ತಿ ಪತಾಕೆಯನ್ನು ಎತ್ತಿಹಿಡಿದಿದೆ.


ವಿನೂತನ ವೈದ್ಯಕೀಯ ವಿಧಾನಗಳನ್ನು ಅಳವಡಿಸಿಕೊಂಡು ತಾಯಿ ಹಾಗೂ ಶಿಶು ಮರಣ ಪ್ರಮಾಣವನ್ನು ಕನಿಷ್ಠ ಮಟ್ಟಕ್ಕೆ ತಂದಿರುವ ಲೇಡಿಗೋಷನ್ ಆಸ್ಪತ್ರೆಯು, ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಐಪಾಸ್ ಫೌಂಡೇಶನ್ (Ipas Foundation) ನಡೆಸಿದ ಜಂಟಿ ಸಮೀಕ್ಷೆಯಲ್ಲಿ ‘ಅತ್ಯುತ್ತಮ ಪ್ರಶಸ್ತಿಗೆ’ ಭಾಜನವಾಗಿದೆ.

2025-26ನೇ ಆರ್ಥಿಕ ಸಾಲಿನಲ್ಲಿ ಕಾನೂನುಬದ್ಧವಾಗಿ ನಡೆದ ಗರ್ಭಪಾತ (Legal Abortion) ಹಾಗೂ ಗರ್ಭಪಾತಾನಂತರದ ಆರೈಕೆಯಲ್ಲಿ (Post-Abortion Care) ಶೇಕಡಾ 100 ರಷ್ಟು ತಾಯಂದಿರ ಆರೋಗ್ಯವನ್ನು ಕಾಪಾಡಿ, ಶೂನ್ಯ (Zero) ತಾಯಿ ಮರಣ ಪ್ರಮಾಣವನ್ನು ಕಾಯ್ದುಕೊಳ್ಳುವ ಮೂಲಕ ಲೇಡಿಗೋಷನ್ ಆಸ್ಪತ್ರೆ ಇಡೀ ರಾಜ್ಯಕ್ಕೇ ಮೊದಲ ಸ್ಥಾನ ಪಡೆದುಕೊಂಡಿದೆ.

ಆಸ್ಪತ್ರೆಯು ‘ಕಾಂಪ್ರೆಹೆನ್ಸಿವ್ ಅಬಾರ್ಶನ್ ಕೇರ್’ (Comprehensive Abortion Care) ಯೋಜನೆಯಡಿ ಪ್ರತಿಯೊಂದು ಪ್ರಕರಣದಲ್ಲೂ ಅತ್ಯುನ್ನತ ನಿಯಮಗಳನ್ನು ಪಾಲಿಸಿದೆ.
2025-26 ನೇ ಸಾಲಿನ ಗರ್ಭಪಾತ ಪ್ರಕರಣಗಳ ಅಂಕಿ-ಅಂಶ:
9 ವಾರಗಳ ಒಳಗಿನ ಗರ್ಭಪಾತ: 191
10 ರಿಂದ 12 ವಾರಗಳು: 31
12 ರಿಂದ 20 ವಾರಗಳು: 52
20 ರಿಂದ 24 ವಾರಗಳು: 25
24 ವಾರಗಳ ನಂತರದ ಗರ್ಭಪಾತ: 5
ಒಟ್ಟು ಸಂಸ್ಕರಿಸಿದ ಪ್ರಕರಣಗಳು: 304

ಅಷ್ಟೇ ಅಲ್ಲದೆ, ಚಿಕಿತ್ಸೆ ಪಡೆದ ಶೇಕಡಾ 95 ರಷ್ಟು ಫಲಾನುಭವಿ ಮಹಿಳೆಯರಿಗೆ ಕುಟುಂಬ ಕಲ್ಯಾಣ ಯೋಜನೆಗಳನ್ನು ಅಳವಡಿಸಿಕೊಳ್ಳಲು ಯಶಸ್ವಿಯಾಗಿ ಪ್ರೇರೇಪಿಸಿ ಜಾಗೃತಿ ಮೂಡಿಸಿದ ಹೆಗ್ಗಳಿಕೆಗೂ ಆಸ್ಪತ್ರೆ ಪಾತ್ರವಾಗಿದೆ.
ಆಸ್ಪತ್ರೆಯ ಯಶಸ್ಸಿನ ಕುರಿತು ವೈದ್ಯಕೀಯ ಅಧೀಕ್ಷಕರಾದ ಡಾ. ದುರ್ಗಾಪ್ರಸಾದ್ ಎಂ.ಆರ್. ಅವರು ಮಾಹಿತಿ ನೀಡಿ, ಸಂಕೀರ್ಣ ಸ್ಥಿತಿಯಲ್ಲೂ ತಾಯಂದಿರ ಪ್ರಾಣ ಉಳಿಸಲು ನೆರವಾದ ಪ್ರಮುಖ ವ್ಯವಸ್ಥೆಗಳನ್ನು ಶ್ಲಾಘಿಸಿದರು:
ವಾಟ್ಸಾಪ್ ಹೈ-ರಿಸ್ಕ್ ಪ್ರೆಗ್ನೆನ್ಸಿ ಟ್ರ್ಯಾಕಿಂಗ್ ಸಿಸ್ಟಮ್ (High-Risk Pregnancy Tracking)
ಪ್ರಸೂತಿ ತೀವ್ರ ನಿಗಾ ಘಟಕ (Obstetric ICU)
ಪ್ರಸೂತಿ ಕ್ರಿಟಿಕಲ್ ಕೇರ್ ಹಾಗೂ ಹೈ-ರಿಸ್ಕ್ ಡೆಲಿವರಿ ಘಟಕಗಳು
ವಿವಿಧ ಸಂಸ್ಥೆಗಳ ಸಿಎಸ್ಆರ್ (CSR) ಅನುದಾನದಡಿ ದೊರೆತ ಅತ್ಯಾಧುನಿಕ ಜೀವರಕ್ಷಕ ವೈದ್ಯಕೀಯ ಉಪಕರಣಗಳು.
ಈ ಮಹತ್ತರ ಸಾಧನೆಗೆ ಕಾರಣಕರ್ತರಾದ ಕೆ.ಎಂ.ಸಿ (KMC) ಆಸ್ಪತ್ರೆಯ ಪ್ರಸೂತಿ ಮತ್ತು ಸ್ತ್ರೀರೋಗ ವಿಭಾಗ, ಅರಿವಳಿಕೆ (Anaesthesia), ರೇಡಿಯೋಡಯಾಗ್ನೋಸಿಸ್ ಹಾಗೂ ನವಜಾತ ಶಿಶು ವಿಭಾಗದ ತಜ್ಞ ವೈದ್ಯರು, ಶುಶ್ರೂಷಕರು (Nurses), ಅರೆ ವೈದ್ಯಕೀಯ ಸಿಬ್ಬಂದಿ ಹಾಗೂ ತಾಂತ್ರಿಕ ವರ್ಗದ ಅನನ್ಯ ಸೇವೆಯನ್ನು ಡಾ. ದುರ್ಗಾಪ್ರಸಾದ್ ಕೊಂಡಾಡಿದ್ದಾರೆ.
ಆರೋಗ್ಯ ಸಚಿವರು, ಸ್ಥಳೀಯ ಜನಪ್ರತಿನಿಧಿಗಳು, ಜಿಲ್ಲಾಡಳಿತ ಹಾಗೂ ಸಮಾಜಮುಖಿ ಸಂಸ್ಥೆಗಳ ಬೆಂಬಲವನ್ನು ಸ್ಮರಿಸಿದ ಅವರು, “ದೊರೆತ ಈ ಉನ್ನತ ಸ್ಥಾನಮಾನವನ್ನು ಕಾಯ್ದುಕೊಂಡು ತಾಯಂದಿರ ಬಾಳಿನಲ್ಲಿ ಆಶಾಜ್ಯೋತಿ ಬೆಳಗಲು ಆಸ್ಪತ್ರೆಯ ಪ್ರತಿಯೊಬ್ಬ ಸಿಬ್ಬಂದಿಯೂ ಕಟಿಬದ್ಧರಾಗಿದ್ದಾರೆ” ಎಂದು ತಿಳಿಸಿದ್ದಾರೆ.


