ಕೇರಳ : ಆರ್ಥಿಕ ಸಂಕಷ್ಟಕ್ಕೆ ಒಂದೇ ಕುಟುಂಬದ ಮೂವರು ಬಲಿ..!

Prakhara News
1 Min Read

ಚಂಗನಶ್ಶೇರಿ (ಕೇರಳ): ತೀವ್ರ ಆರ್ಥಿಕ ಸಂಕಷ್ಟ ಹಾಗೂ ಸಾಲದ ಸುಳಿಗೆ ಸಿಲುಕಿ ಒಂದೇ ಕುಟುಂಬದ ಮೂವರು ಸದಸ್ಯರು ಆತ್ಮಹತ್ಯೆ ಮಾಡಿಕೊಂಡಿರುವ ಅತ್ಯಂತ ದಾರುಣ ಘಟನೆ ಕೇರಳದ ಚಂಗನಶ್ಶೇರಿಯಲ್ಲಿ ಶನಿವಾರ ವರದಿಯಾಗಿದೆ. ಚಂಗನಶ್ಶೇರಿಯ ಎಸ್‌ಬಿ ಕಾಲೇಜು ಸಮೀಪದ ‘ಕರಿಂಗಡ’ ನಿವಾಸಿಗಳಾದ ಉದ್ಯಮಿ ಸಾಜು, ಅವರ ಪತ್ನಿ ಅನು ಸಾಜು ಹಾಗೂ ದಂಪತಿಯ ಮಗ ಸವಿನ್ ಸಾಜು ಸಾವನ್ನಪ್ಪಿದ ದುರ್ದೈವಿಗಳು.

ಶನಿವಾರ ಬೆಳಿಗ್ಗೆ ಸುದೀರ್ಘ ಸಮಯದವರೆಗೆ ಮನೆಯಿಂದ ಯಾರೂ ಹೊರಗೆ ಬಾರದಿದ್ದಾಗ ಸಂಶಯಗೊಂಡ ನೆರೆಹೊರೆಯವರು ತಪಾಸಣೆ ನಡೆಸಿದಾಗ ಈ ದುರಂತ ಬೆಳಕಿಗೆ ಬಂದಿದೆ. ಮನೆಯ ಮುಂಭಾಗದ ಬಾಗಿಲು ತೆರೆದೇ ಇತ್ತು. ಪರಿಶೀಲನೆ ನಡೆಸಿದಾಗ ಸಾಜು ಹಾಗೂ ಅವರ ಪತ್ನಿ ಅನು ಮಲಗುವ ಕೋಣೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರೆ, ಮಗ ಸವಿನ್ ಅಂಗಡಿ ಕೋಣೆಯಲ್ಲಿ ನೇಣು ಬಿಗಿದುಕೊಂಡಿರುವುದು ಕಂಡುಬಂದಿದೆ. ತಕ್ಷಣವೇ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಸ್ಥಳಕ್ಕೆ ಆಗಮಿಸಿದ ಚಂಗನಶ್ಶೇರಿ ಪೊಲೀಸರು ಪರಿಶೀಲನೆ ನಡೆಸಿ ದಂಪತಿ ಒಟ್ಟಿಗೆ ಬರೆದಿಟ್ಟಿದ್ದ ಆತ್ಮಹತ್ಯೆ ಪತ್ರವನ್ನು (Death Note) ವಶಪಡಿಸಿಕೊಂಡಿದ್ದಾರೆ. ಪ್ರಕರಣದ ಪ್ರಾಥಮಿಕ ತನಿಖೆಯಲ್ಲಿ, ಉದ್ಯಮದಲ್ಲಾದ ಭಾರಿ ನಷ್ಟ ಹಾಗೂ ಆರ್ಥಿಕ ಸಂಕಷ್ಟದಿಂದ ಹತಾಶೆಗೊಂಡಿದ್ದ ಸಾಜು ಮತ್ತು ಅನು ದಂಪತಿ ಮೊದಲಿಗೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬಳಿಕ ಪೋಷಕರ ಮೃತದೇಹಗಳನ್ನು ಕಂಡು ಆಘಾತಕ್ಕೊಳಗಾದ ಮಗ ಸವಿನ್ ಕೂಡ ಅದೇ ಹತಾಶೆಯಿಂದ ನೇಣಿಗೆ ಶರಣಾಗಿದ್ದಾನೆ ಎಂದು ಪೊಲೀಸರು ಕಂಡುಕೊಂಡಿದ್ದಾರೆ.

ಪೊಲೀಸರು ವಶಪಡಿಸಿಕೊಂಡಿರುವ ಡೆತ್ ನೋಟ್‌ನಲ್ಲಿ ₹3 ಲಕ್ಷ ರೂಪಾಯಿ ಸಾಲದ ವಿವರಗಳು ಹಾಗೂ ಸಾಲ ತೀರಿಸಬೇಕಾದ ವ್ಯಕ್ತಿಗಳ ಹೆಸರುಗಳನ್ನು ಉಲ್ಲೇಖಿಸಲಾಗಿದೆ. ಸಾಲದ ಹೊರೆಯಿಂದಲೇ ಜೀವ ಕಳೆದುಕೊಳ್ಳುತ್ತಿರುವುದಾಗಿ ಮತ್ತು ಸಾಜು ತಮ್ಮ ಸಹೋದರನಿಗೆ ಸಾಲ ತೀರಿಸುವಂತೆ ಪತ್ರದಲ್ಲಿ ವಿನಂತಿಸಿದ್ದಾರೆ.

ಮತ್ತೊಂದೆಡೆ, ಮಗ ಸವಿನ್ ಆನ್‌ಲೈನ್ ರಮ್ಮಿ ಆಡುವ ದುರಾಭ್ಯಾಸಕ್ಕೆ ಬಿದ್ದು ಭಾರಿ ಪ್ರಮಾಣದ ಸಾಲ ಮಾಡಿಕೊಂಡಿದ್ದ ಎಂಬ ಪ್ರಮುಖ ಮಾಹಿತಿಯೂ ಪೊಲೀಸರಿಗೆ ಲಭ್ಯವಾಗಿದೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ವರದಿ ಬಂದ ಬಳಿಕ ಸಾವಿಗೆ ನಿಖರ ಕಾರಣ ದೃಢಪಡಲಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಸಮಗ್ರ ತನಿಖೆ ನಡೆಸುತ್ತಿದ್ದಾರೆ.

Share This Article
Leave a Comment