ಮಹೇಶ್ ಶೆಟ್ಟಿ ತಿಮರೋಡಿ ಗಡಿಪಾರು ಆದೇಶ ಎತ್ತಿ ಹಿಡಿದ ಗೃಹ ಇಲಾಖೆ: ಮೇಲ್ಮನವಿ ಅರ್ಜಿ ವಜಾ..!

Prakhara News
2 Min Read

ಬೆಳ್ತಂಗಡಿ: ಸಾರ್ವಜನಿಕ ಶಾಂತಿ ಹಾಗೂ ಸುವ್ಯವಸ್ಥೆಗೆ ಭಂಗ ತಂದ ಆರೋಪದಡಿ ಉಜಿರೆಯ ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ದಕ್ಷಿಣ ಕನ್ನಡ ಜಿಲ್ಲೆಯಿಂದ ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿಗೆ ಗಡಿಪಾರು ಮಾಡಿ ಪುತ್ತೂರು ಉಪ ವಿಭಾಗಾಧಿಕಾರಿ ಸ್ಟೆಲ್ಲಾ ವರ್ಗೀಸ್ ಹೊರಡಿಸಿದ್ದ ಆದೇಶವನ್ನು ರಾಜ್ಯ ಗೃಹ ಇಲಾಖೆಯ ಅಪೀಲು ಪ್ರಾಧಿಕಾರ ಎತ್ತಿಹಿಡಿದಿದೆ.

ಈ ಮೂಲಕ ಗಡಿಪಾರು ಆದೇಶ ರದ್ದುಗೊಳಿಸುವಂತೆ ಕೋರಿ ತಿಮರೋಡಿ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯನ್ನು ಇಲಾಖೆ ತಿರಸ್ಕರಿಸಿದೆ.ಕರ್ನಾಟಕ ಪೊಲೀಸ್ ಕಾಯ್ದೆ 1963ರ ಸೆಕ್ಷನ್ 59ರ ಅಡಿಯಲ್ಲಿ ಸಕ್ಷಮ ಪ್ರಾಧಿಕಾರವಾಗಿರುವ ಗೃಹ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಕಟಾರಿಯಾ ಈ ತೀರ್ಪು ಪ್ರಕಟಿಸಿದ್ದಾರೆ.

ಪುತ್ತೂರು ಉಪ ವಿಭಾಗಾಧಿಕಾರಿ ಸ್ಟೆಲ್ಲಾ ವರ್ಗೀಸ್ ಹೊರಡಿಸಿದ್ದ ಆದೇಶದಲ್ಲಿ ಯಾವುದೇ ನಿಯಮಬಾಹಿರತೆ ಅಥವಾ ಪ್ರಕ್ರಿಯಾತ್ಮಕ ಲೋಪಗಳಿಲ್ಲ ಎಂದು ಸ್ಪಷ್ಟಪಡಿಸಿರುವ ಗೃಹ ಇಲಾಖೆ ತಿಮರೋಡಿ ಅವರ ಅರ್ಜಿಯನ್ನು ವಜಾಗೊಳಿಸಿದೆ.ಪುತ್ತೂರು ಉಪ ವಿಭಾಗಾಧಿಕಾರಿ ಸ್ಟೆಲ್ಲಾ ವರ್ಗೀಸ್ 2026ರ ಮಾರ್ಚ್ 13ರಂದು ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಗಡಿಪಾರು ಮಾಡಿ ಆದೇಶಿಸಿದ್ದರು.

ಆದೇಶದ ಪ್ರಮುಖ ಅಂಶಗಳು:
ನ್ಯಾಯಾಲಯಗಳ ಸೂಚನೆಯಂತೆ ತಿಮರೋಡಿ ಗೃಹ ಇಲಾಖೆಗೆ ಮೇಲ್ಮನವಿ ಸಲ್ಲಿಸಿದ್ದರು. ‘ತಮಗೆ ಸಮರ್ಥಿಸಿಕೊಳ್ಳಲು ಸೂಕ್ತ ಕಾಲಾವಕಾಶ ನೀಡಿಲ್ಲ, ಕುಟುಂಬಕ್ಕೆ ತಾವೇ ಆಧಾರ’ ಎಂದು ತಿಮರೋಡಿ ಪರ ವಾದಿಸಲಾಗಿತ್ತು. ಆದರೆ ಡಿವೈಎಸ್ಪಿ ವರದಿಯನ್ನು ಕೂಲಂಕಷವಾಗಿ ಪರಿಶೀಲಿಸಿದ ಗೃಹ ಇಲಾಖೆ, “ಆರೋಪಿ ವಿರುದ್ಧ ಕೊಲೆ ಯತ್ನ, ದೊಂಬಿ, ಹಲ್ಲೆ, ಸುಲಿಗೆ ಸೇರಿದಂತೆ ಹಲವಾರು ಗಂಭೀರ ಕ್ರಿಮಿನಲ್ ಪ್ರಕರಣಗಳಿವೆ.

ಗಡಿಪಾರು ಪ್ರಕ್ರಿಯೆಯ ವಿಚಾರಣೆ ನಡೆಯುತ್ತಿದ್ದ ಸಂದರ್ಭದಲ್ಲೂ ಹಾಗೂ ಆದೇಶದ ಬಳಿಕವೂ ಅವರ ವಿರುದ್ದ ಹೊಸ ಪ್ರಕರಣಗಳು ದಾಖಲಾಗಿವೆ. ಗಡಿಪಾರು ಕ್ರಮವು ಶಿಕ್ಷೆಯಲ್ಲ, ಬದಲಿಗೆ ಸಾರ್ವಜನಿಕ ಶಾಂತಿ ಕಾಪಾಡಲು ಕೈಗೊಳ್ಳಲಾದ ಮುನ್ನೆಚ್ಚರಿಕಾ ಕ್ರಮ. ವಿಚಾರಣೆಗೆ ಅವರಿಗೆ ಸೂಕ್ತ ಅವಕಾಶ ನೀಡಲಾಗಿದೆ,” ಎಂದು ತಿಳಿಸಿ ಅರ್ಜಿಯನ್ನು ತಿರಸ್ಕರಿಸಿದೆ.

ಗೃಹ ಇಲಾಖೆಯ ಅಪೀಲು ಪ್ರಾಧಿಕಾರ ಆದೇಶವನ್ನು ದೃಢಪಡಿಸಿರುವುದರಿಂದ ಸ್ಥಳೀಯ ಪೊಲೀಸರು ಯಾವುದೇ ವಿಳಂಬವಿಲ್ಲದೆ ಮಹೇಶ್ ಶೆಟ್ಟಿ ತಿಮರೋಡಿ ಅವರಿಗೆ ಗೃಹ ಇಲಾಖೆಯ ಆದೇಶದ ಪ್ರತಿಯನ್ನು ಜಾರಿಗೊಳಿಸಿ ಕರ್ನಾಟಕ ಪೊಲೀಸ್ ಕಾಯ್ದೆಯ ನಿಯಮಾವಳಿಗಳ ಪ್ರಕಾರ ಅವರು ನಿಗದಿತ ಸಮಯದೊಳಗೆ ದಕ್ಷಿಣ ಕನ್ನಡ ಜಿಲ್ಲೆಯ ಗಡಿ ತೊರೆದು ನಿಗದಿಪಡಿಸಲಾದ ರಾಯಚೂರು ಜಿಲ್ಲೆಯ ಮಾನ್ವಿ ಪೊಲೀಸ್ ಠಾಣಾ ವ್ಯಾಪ್ತಿಗೆ ತೆರಳುವಂತೆ ನೋಡಿಕೊಳ್ಳಬೇಕಾಗುತ್ತದೆ.

ಒಂದು ವೇಳೆ ಅವರು ಆದೇಶವನ್ನು ಉಲ್ಲಂಘಿಸಿ ಜಿಲ್ಲೆಯಲ್ಲೇ ಉಳಿದುಕೊಂಡರೆ ಅಥವಾ ಗಡಿಪಾರು ನಿಯಮ ಮುರಿದು ಮರಳಿ ಪ್ರವೇಶಿಸಿದರೆ ಪೊಲೀಸರು ಕಾಯ್ದೆಯ ಸೆಕ್ಷನ್ 61ರ ಅಡಿಯಲ್ಲಿ ಅವರನ್ನು ವಾರಂಟ್ ಇಲ್ಲದೆಯೇ ತಕ್ಷಣವೇ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸುವ ಅಧಿಕಾರ ಹೊಂದಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ.

Share This Article
Leave a Comment