ಉಡುಪಿ: ಫ್ಯಾಕ್ಟರಿಯಲ್ಲಿ ಗಾಜಿನ ಬ್ಲಾಕ್ಗಳನ್ನು ಅನ್ಲೋಡ್ ಮಾಡುತ್ತಿದ್ದಾಗ ಸಂಭವಿಸಿದ ಭೀಕರ ಅವಘಡದಲ್ಲಿ ಉಡುಪಿಯ ಖ್ಯಾತ ಸಾಮಾಜಿಕ ಕಾರ್ಯಕರ್ತ ಸುನೀಲ್ ಬೈಲಕೆರೆ (45) ಅವರು ಅಕಾಲಿಕವಾಗಿ ಮೃತಪಟ್ಟ ಘಟನೆ ಸೋಮವಾರ ನಡೆದಿದೆ.


ಸುನೀಲ್ ಬೈಲಕೆರೆ ಅವರು ಉಡುಪಿಯ ನಿಟ್ಟೂರಿನಲ್ಲಿರುವ ಶ್ರೀದೇವಿ ಗ್ಲಾಸ್ ಫ್ಯಾಕ್ಟರಿಯಲ್ಲಿ ಗಾಜಿನ ಬ್ಲಾಕ್ಗಳನ್ನು ಅನ್ಲೋಡ್ ಮಾಡುವ ಕಾಯಕದಲ್ಲಿ ತೊಡಗಿದ್ದರು. ಈ ವೇಳೆ ಇದ್ದಕ್ಕಿದ್ದಂತೆ ಗಾಜಿನ ಬ್ಲಾಕ್ಗಳು ಆಕಸ್ಮಿಕವಾಗಿ ಅವರ ಮೇಲೆಯೇ ಬಿದ್ದಿದ್ದು, ತೀವ್ರ ಸ್ವರೂಪದ ಗಾಯಗಳಾಗಿದ್ದವು. ತಕ್ಷಣವೇ ಅವರನ್ನು ಚಿಕಿತ್ಸೆಗೆ ಒಯ್ಯಲಾಯಿತಾದರೂ, ಗಂಭೀರ ಗಾಯಗಳಿಂದಾಗಿ ಅವರು ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದುಬಂದಿದೆ.

ಮೃತ ಸುನೀಲ್ ಬೈಲಕೆರೆ ಅವರು ಉಡುಪಿ ಅಷ್ಟಮಠಗಳಲ್ಲೊಂದಾದ ಶಿರೂರು ಮಠದ ಪೂರ್ವಾಶ್ರಮದ ಶ್ರೀಗಳಾಗಿದ್ದ ದಿ. ಲಕ್ಷ್ಮೀವರ ತೀರ್ಥ ಸ್ವಾಮೀಜಿ ಅವರ ಅತ್ಯಂತ ಆಪ್ತರಾಗಿದ್ದರು. ಶ್ರೀಗಳ ಕಾರು ಚಾಲಕರಾಗಿಯೂ ಸೇವೆ ಸಲ್ಲಿಸಿದ್ದ ಇವರು, ಶೋಷಿತರ ಹಾಗೂ ಸಾರ್ವಜನಿಕರ ಪರವಾಗಿ ಸಮಾಜ ಸೇವೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಮೃತರು ಪತ್ನಿ, ಓರ್ವ ಪುತ್ರ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗುತ್ತಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ತನಿಖೆ ಕೈಗೊಂಡಿದ್ದಾರೆ.




