ಮಂಗಳೂರಿನಲ್ಲಿ ಹೈಕೋರ್ಟ್ ಪೀಠ ಸ್ಥಾಪನೆಗೆ ಬೆಂಬಲವಾಗಿ ಅಕ್ಟೋಬರ್ 16ರಂದು ಸಮಾಲೋಚನಾ ಸಭೆ

Prakhara News
2 Min Read

ಮಂಗಳೂರು: ಕರಾವಳಿ ಮತ್ತು ಮಲೆನಾಡು ಕರ್ನಾಟಕದ ಜನಸಾಮಾನ್ಯರಿಗೆ ನ್ಯಾಯವನ್ನು ಸುಲಭವಾಗಿ, ಶೀಘ್ರವಾಗಿ ಹಾಗೂ ಕಡಿಮೆ ವೆಚ್ಚದಲ್ಲಿ ದೊರಕಿಸುವ ಉದ್ದೇಶದಿಂದ ಮಂಗಳೂರಿನಲ್ಲಿ ಕರ್ನಾಟಕ ಹೈಕೋರ್ಟ್ ಪೀಠ ಸ್ಥಾಪನೆಯ ಅಗತ್ಯದ ಕುರಿತು ಜನಜಾಗೃತಿ ಮೂಡಿಸಲು ಹಾಗೂ ಈ ಹೋರಾಟಕ್ಕೆ ವ್ಯಾಪಕ ಬೆಂಬಲ ಕ್ರೋಡೀಕರಿಸಲು ಯುನೈಟೆಡ್ ಲೀಗಲ್ ರಿಸರ್ಚ್ ಆ್ಯಂಡ್ ಜಸ್ಟಿಸ್ ಟ್ರಸ್ಟ್ (ರಿ.), ದಕ್ಷಿಣ ಕನ್ನಡ ಜಿಲ್ಲೆ ವತಿಯಿಂದ ಅಕ್ಟೋಬರ್ 16ರಂದು ಶುಕ್ರವಾರ ಸಂಜೆ 4 ಗಂಟೆಗೆ ಮಂಗಳೂರಿನ ಸ್ಟೇಟ್‌ಬ್ಯಾಂಕ್‌ನಲ್ಲಿರುವ ಹಳೆಯ ಜಿಲ್ಲಾಧಿಕಾರಿ ಕಚೇರಿಯ ಹಿಂಭಾಗದ ಭಾರತೀಯ ರೆಡ್ ಕ್ರಾಸ್ ಕಟ್ಟಡದಲ್ಲಿ ಸಮಾಲೋಚನಾ ಸಭೆಯನ್ನು ಆಯೋಜಿಸಲಾಗಿದೆ.

ಕರಾವಳಿ ಮತ್ತು ಮಲೆನಾಡು ಭಾಗದ ಜನರು ನ್ಯಾಯಕ್ಕಾಗಿ ಬೆಂಗಳೂರಿಗೆ ತೆರಳಬೇಕಾದ ಸಂದರ್ಭದಲ್ಲಿ ಎದುರಿಸುವ ಪ್ರಯಾಣದ ತೊಂದರೆ, ಸಮಯದ ವ್ಯಯ ಹಾಗೂ ಆರ್ಥಿಕ ಹೊರೆಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಮಂಗಳೂರಿನಲ್ಲಿ ಹೈಕೋರ್ಟ್ ಪೀಠ ಸ್ಥಾಪನೆಯ ಬೇಡಿಕೆ ಮಹತ್ವದ್ದಾಗಿದೆ. ನ್ಯಾಯದ ಹಕ್ಕು ಪ್ರತಿಯೊಬ್ಬ ನಾಗರಿಕನಿಗೂ ಸುಲಭವಾಗಿ ತಲುಪಬೇಕು ಎಂಬ ಆಶಯದೊಂದಿಗೆ ನಡೆಯುತ್ತಿರುವ ಈ ಹೋರಾಟಕ್ಕೆ ಸಾರ್ವಜನಿಕರು, ವಕೀಲರು, ಜನಪ್ರತಿನಿಧಿಗಳು ಹಾಗೂ ವಿವಿಧ ಕ್ಷೇತ್ರಗಳ ಮುಖಂಡರ ಸಹಕಾರ ಅತ್ಯಗತ್ಯವಾಗಿದೆ.

ಈ ಸಮಾಲೋಚನಾ ಸಭೆಯಲ್ಲಿ ಜಿಲ್ಲೆಯ ವಿವಿಧ ವಕೀಲರ ಸಂಘಗಳ ಅಧ್ಯಕ್ಷರು, ಜನಪ್ರತಿನಿಧಿಗಳು, ಹೈಕೋರ್ಟ್ ಪೀಠ ಸ್ಥಾಪನೆ ಹೋರಾಟ ಸಮಿತಿಯ ಸಂಚಾಲಕರು, ಧಾರ್ಮಿಕ ಹಾಗೂ ಸಾಮಾಜಿಕ ಕ್ಷೇತ್ರಗಳ ನಾಯಕರು ಮತ್ತು ವಿವಿಧ ಸಂಘಸಂಸ್ಥೆಗಳ ಮುಖಂಡರು ಭಾಗವಹಿಸಲಿದ್ದಾರೆ. ಮಂಗಳೂರಿನಲ್ಲಿ ಹೈಕೋರ್ಟ್ ಪೀಠ ಸ್ಥಾಪನೆಯ ಅಗತ್ಯ, ಅದರ ಸಾಧಕ-ಬಾಧಕಗಳು, ಜನಸಾಮಾನ್ಯರಿಗೆ ದೊರೆಯಬಹುದಾದ ಪ್ರಯೋಜನಗಳು ಹಾಗೂ ಹೋರಾಟವನ್ನು ಮುಂದಿನ ಹಂತಕ್ಕೆ ಕೊಂಡೊಯ್ಯುವ ಕುರಿತು ಅರ್ಥಪೂರ್ಣ ಚರ್ಚೆ ನಡೆಯಲಿದೆ.

ಮಂಗಳೂರಿನಲ್ಲಿ ಹೈಕೋರ್ಟ್ ಪೀಠ ಸ್ಥಾಪನೆಯು ಕೇವಲ ವಕೀಲರ ಬೇಡಿಕೆಯಲ್ಲ; ಅದು ಕರಾವಳಿ ಮತ್ತು ಮಲೆನಾಡಿನ ಜನಸಾಮಾನ್ಯರ ನ್ಯಾಯದ ಹಕ್ಕು, ಅನುಕೂಲತೆ ಮತ್ತು ಸಾರ್ವಜನಿಕ ಹಿತಾಸಕ್ತಿಗೆ ಸಂಬಂಧಿಸಿದ ಮಹತ್ವದ ಆಶಯವಾಗಿದೆ. ಈ ನಿಟ್ಟಿನಲ್ಲಿ ಪಕ್ಷಭೇದ, ಧರ್ಮಭೇದ ಹಾಗೂ ವೈಯಕ್ತಿಕ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು, ನ್ಯಾಯದ ಸುಲಭ ಲಭ್ಯತೆ ಎಂಬ ಸಾರ್ವಜನಿಕ ಹಿತದೃಷ್ಟಿಯಿಂದ ಎಲ್ಲರೂ ಒಂದೇ ವೇದಿಕೆಯಲ್ಲಿ ಒಂದಾಗಬೇಕಿದೆ.

ಆದ್ದರಿಂದ, ಈ ಮಹತ್ವದ ಉದ್ದೇಶಕ್ಕೆ ನೈತಿಕ ಬೆಂಬಲ ವ್ಯಕ್ತಪಡಿಸಿ, ಸಮಾಲೋಚನಾ ಸಭೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ಮೂಲಕ ಮಂಗಳೂರಿನಲ್ಲಿ ಹೈಕೋರ್ಟ್ ಪೀಠ ಸ್ಥಾಪನೆಯ ಹೋರಾಟಕ್ಕೆ ಬಲ ತುಂಬಬೇಕೆಂದು ಟ್ರಸ್ಟ್‌ನ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಮಾಧ್ಯಮಗಳ ಮೂಲಕ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

ಬನ್ನಿ, ಚರ್ಚಿಸೋಣ; ಒಗ್ಗಟ್ಟಿನಿಂದ ಧ್ವನಿ ಎತ್ತೋಣ; ಜನಸಾಮಾನ್ಯರಿಗೆ ನ್ಯಾಯ ಸುಲಭವಾಗಿ ದೊರಕುವ ನಿಟ್ಟಿನಲ್ಲಿ ಕೈಜೋಡಿಸೋಣ.
ಆಯೋಜಕರು: ಯುನೈಟೆಡ್ ಲೀಗಲ್ ರಿಸರ್ಚ್ ಆ್ಯಂಡ್ ಜಸ್ಟಿಸ್ ಟ್ರಸ್ಟ್ (ರಿ.) ದಕ್ಷಿಣ ಕನ್ನಡ ಜಿಲ್ಲೆ

Share This Article
Leave a Comment