ಸುಳ್ಯ: ವಿದ್ಯುತ್ ಪ್ರವಹಿಸಿ ಇಬ್ಬರ ಸಾವಿಗೆ ಕಾರಣವಾಗಿದ್ದ ತೋಟದ ಮಾಲಕರ ವಿರುದ್ಧ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಅ. 12ರಂದು ತಡರಾತ್ರಿ ಸುಳ್ಯ ಕಲ್ಮಡ್ಕದ ಬೊಮ್ಮೆಟ್ಟಿ ಬಾಬು – ಸೀತಾ ದಂಪತಿ ಪುತ್ರ ಭರತ್ (28 ವ.) ಹಾಗೂ ಬೆಳ್ತಂಗಡಿ ಗುರುವಾಯನಕೆರೆಯ ಮುಂಗೆಲು ನಿವಾಸಿ ವೀರಪ್ಪ – ಸೀತಮ್ಮ ದಂಪತಿ ಪುತ್ರ ರಮೇಶ್ ಯಾನೆ ಗಣೇಶ್ ಮೃತಪಟ್ಟವರು. ಮೃತಪಟ್ಟ ಇವರಿಬ್ಬರು ಬಾವ – ಬಾಮೈದ ಎಂದು ಹೇಳಲಾಗಿದೆ.
ಇವರಿಬ್ಬರು ಇನ್ನೋರ್ವ ಬಾಲಕನ ಜೊತೆಗೆ ಕಲ್ಮಡ್ಕದ ಹೊಳೆಕ್ಕೆರೆಯ ತೋಡಿನಲ್ಲಿ ಮೀನು ಹಿಡಿಯಲೆಂದು ಹೋಗಿದ್ದರು. ಈ ಸಂದರ್ಭ ಪಕ್ಕದ ಮಧುಸೂಧನ್ ಭಟ್ ಎಂಬವರ ತೋಟದ ವಿದ್ಯುತ್ ಸ್ಪರ್ಶಿಸಿ ಇಬ್ಬರು ಬಿದ್ದು ಬಿಟ್ಟಿದ್ದರು. ಈ ವಿಷಯವನ್ನು ಜೊತೆಗಿದ್ದ ಬಾಲಕ ಸಂಬಂಧಿಕರಿಗೆ ತಿಳಿಸಿದ್ದ. ನಂತರ ಅವರಿಬ್ಬರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಅಷ್ಟರಲ್ಲಿ ಇಬ್ಬರು ಮೃತಪಟ್ಟಿರುವುದಾಗಿ ಪರಿಶೀಲಿಸಿದ ವೈದ್ಯರು ತಿಳಿಸಿದ್ದರು. ಗಾಯಗೊಂಡ ಬಾಲಕನನ್ನು ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಿಸಲಾಗಿದೆ.

ಅನಧಿಕೃತವಾಗಿ ತೋಟಕ್ಕೆ ವಿದ್ಯುತ್ ಅಳವಡಿಸಿದ ಮಧುಸೂದನ್ ಬಟ್ ಅವರ ವಿರುದ್ಧ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಆ.ಕ್ರ 59/2026 ಕಲಂ 105 ಬಿಎನ್ಎಸ್ ಮತ್ತು 135(1)(E) ಎಲೆಕ್ಟ್ರಿಸಿಟಿ ಆಕ್ಟ್ ನಂತೆ ಪ್ರಕರಣ ದಾಖಲಿಸಲಾಗಿದೆ.

