ಅಬ್ದುಲ್ ರೆಹಮಾನ್ ಹತ್ಯೆಯಾಗಿದ್ದು ವೈಯಕ್ತಿಕ ಕಾರಣಕ್ಕೆ – ನನ್ನ ಮೇಲಿನ ಕೇಸ್ ಕೂದಲಿಗೆ ಸಮ – ಕಲ್ಲಡ್ಕ ಪ್ರಭಾಕರ ಭಟ್ ತೀವ್ರ ಆಕ್ರೋಶ..!

Prakhara News
2 Min Read

ಬಂಟ್ವಾಳ : ಬಂಟ್ವಾಳದ ಅಬ್ದುಲ್ ರೆಹಮಾನ್ ಹತ್ಯೆ ಪ್ರಕರಣ ಸಂಪೂರ್ಣವಾಗಿ ವೈಯಕ್ತಿಕ ದ್ವೇಷದಿಂದ ನಡೆದಿದ್ದು, ವೈಯಕ್ತಿಕ ದ್ವೇಷದ ಪ್ರಕರಣವನ್ನು ಹಿಂದುತ್ವ ಸಂಘಟನೆಗಳ ಮೇಲೆ ಹೊರಿಸಲಾಗುತ್ತಿದೆ ಎಂದು ಆರ್‌ಎಸ್‌ಎಸ್ (RSS) ಹಿರಿಯ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ಗಂಭೀರ ಆರೋಪ ಮಾಡಿದ್ದಾರೆ. ಬಿಸಿ ರೋಡ್ ಚಲೋ ಪ್ರತಿಭಟನಾ ಸಭೆಯ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪೊಲೀಸರು ಹಾಗೂ ರಾಜ್ಯ ಸರ್ಕಾರದ ಗೃಹ ಸಚಿವರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

ಮಾತನಾಡಿದ ಪ್ರಭಾಕರ ಭಟ್, “ಅಬ್ದುಲ್ ರೆಹಮಾನ್ ಕೊಲೆಯಾಗಿದ್ದು ವೈಯಕ್ತಿಕ ಕಾರಣಗಳಿಂದ. ಆ ಊರಿಗೆ ಹೋದರೆ ಅಲ್ಲಿನ ಜನರೇ ಸತ್ಯ ಹೇಳುತ್ತಾರೆ. ಪ್ರತಿಯೊಂದು ವೈಯಕ್ತಿಕ ದ್ವೇಷದ ಘಟನೆಯನ್ನೂ ತಂದು ಸಂಘಟನೆಯ ತಲೆಗೆ ಕಟ್ಟುವುದು ಸರಿಯಲ್ಲ. ನಾವು ಎಂದಿಗೂ ಹತ್ಯೆಯನ್ನು ಪ್ರತಿಪಾದಿಸುವುದಿಲ್ಲ. ಈ ಪ್ರಕರಣಕ್ಕೂ ಯಾವುದೇ ಸಂಬಂಧವಿಲ್ಲದ ಭರತ್ ಕುಮ್ದೇಲ್ ಹಾಗೂ ಇತರರ ಮೇಲೆ ಕೇಸ್ ಹಾಕಿ ಗೂಂಡಾ ಕಾಯ್ದೆ ಹೇರಲಾಗಿದೆ. ಇದು ಯಾವ ಸಂವಿಧಾನ ಹೇಳಿದ ಕಾನೂನು?” ಎಂದು ಪ್ರಶ್ನಿಸಿದರು.

“ಭರತ್ ಕುಮ್ದೇಲ್ ಬಂಧನವಾದಾಗ ಆತನ ಮನೆಯಲ್ಲಿ ಊಟಕ್ಕೂ ಕಷ್ಟವಿತ್ತು. ಮಗುವಿಗೆ ಅನಾರೋಗ್ಯ ಉಂಟಾಗಿ ಆತನ ಕುಟುಂಬದವರು ರಿಕ್ಷಾದಲ್ಲಿ ಕರೆದುಕೊಂಡು ಹೋದರೆ, ಆ ರಿಕ್ಷಾದವನ ಮೇಲೆಯೂ ಕೇಸ್ ಹಾಕಿದ್ದಾರೆ. ಎಂತಹ ಪಾಪಿಗಳು ಇವರು! ಕುಟುಂಬಸ್ಥರು ಸಹಕಾರ ಕೇಳಿದಾಗ ಸಹಾಯ ಮಾಡಿದವರ ಮೇಲೂ ಕೇಸ್ ಹಾಕುತ್ತಿದ್ದಾರೆ. ಪೊಲೀಸರು ಕಾನೂನಿನಂತೆ ಕೆಲಸ ಮಾಡಬೇಕೇ ಹೊರತು ಗೃಹಮಂತ್ರಿ ಹಾಗೂ ಮುಖ್ಯಮಂತ್ರಿಗಳ ಚೇಲಾಗಳಂತೆ ವರ್ತಿಸಬಾರದು” ಎಂದು ಕಿಡಿಕಾರಿದರು.

ತಮಗೆ ಪೊಲೀಸರು ವಿಚಾರಣೆಗೆ ನೋಟಿಸ್ ನೀಡಿರುವ ಬಗ್ಗೆ ಪ್ರತಿಕ್ರಿಯಿಸಿದ ಭಟ್, “ನನ್ನ ಮೇಲೂ ಕೇಸ್ ಹಾಕಲು ಹೊರಟಿದ್ದಾರೆ. ಇದು ನನಗೆ ದೊಡ್ಡ ವಿಷಯವೇ ಅಲ್ಲ, ನನ್ನ ಕೂದಲಿಗೆ ಸಮ! ಭರತ್ ಜೊತೆ ನಾನು ಫೋನ್‌ನಲ್ಲಿ ಮಾತನಾಡಿದ್ದು ನಿಜ. ಅಂಬೇಡ್ಕರ್ ಕೊಟ್ಟ ಸಂವಿಧಾನ ನನಗೆ ಫೋನ್‌ನಲ್ಲಿ ಮಾತನಾಡುವ ಸ್ವಾತಂತ್ರ್ಯ ಕೊಟ್ಟಿದೆ. ಫೋನ್‌ನಲ್ಲಿ ಭರತ್‌ಗೆ ಯಾರನ್ನಾದರೂ ಹೊಡಿ ಅಥವಾ ಕೊಲ್ಲು ಎಂದು ಹೇಳಿದ್ದೀನಾ? ಪೊಲೀಸರ ಬಳಿ ಅಂತಹ ಸಂಭಾಷಣೆ ಇದೆಯಾ? ಪೊಲೀಸರ ಈ ಹುಚ್ಚಾಟ ಸ್ವಲ್ಪ ಇಳಿಯಬೇಕು,” ಎಂದರು.

ಪ್ರಕರಣದ ಆರೋಪಿ ಭರತ್ ಕುಮ್ದೇಲ್ ಅವರಿಗೆ ಮಂಪರು ಪರೀಕ್ಷೆ (Narco Test) ನಡೆಸುವ ವದಂತಿ ಕುರಿತು ಮಾತನಾಡಿದ ಅವರು, “ಮಂಪರು ಪರೀಕ್ಷೆಗೆ ಯಾಕೆ ಒಪ್ಪಿಕೊಳ್ಳಬೇಕು? ಏನು ಆಧಾರ ಇದೆ? ಮೊದಲು ಎಸ್‌ಪಿ ಅರುಣ್ ಕುಮಾರ್ ಅವರೇ ಮಂಪರು ಪರೀಕ್ಷೆ ಮಾಡಿಸಿಕೊಳ್ಳಲಿ. ಖಾಲಿ ಫೋನ್ ಮಾಡಿದಕ್ಕೆ ನನ್ನನ್ನು ವಿಚಾರಣೆಗೆ ಕರೆಯುವುದಾದರೆ, ನಿತ್ಯ ಫೋನ್ ಮಾಡುವ ಮಾಧ್ಯಮದವರನ್ನೂ ವಿಚಾರಣೆಗೆ ಕರೆಯುತ್ತಾರೆಯೇ?” ಎಂದು ಖಾರವಾಗಿ ಪ್ರಶ್ನಿಸಿದರು.

Share This Article
Leave a Comment