ಮಂಗಳೂರು: ಬ್ರಹ್ಮಶ್ರೀ ನಾರಾಯಣಗುರು ಸ್ವಾಮೀಜಿಯವರ 172ನೇ ಜನ್ಮದಿನಾಚರಣೆ ಪ್ರಯುಕ್ತ ಶ್ರೀಕ್ಷೇತ್ರ ಕುದ್ರೋಳಿ ದೇವಸ್ಥಾನದಲ್ಲಿ ವಿಶೇಷ ಕಾರ್ಯಕ್ರಮ ನೆರವೇರಿತು.


ಬೆಳಗ್ಗೆ 8.45ಕ್ಕೆ ಸಾಮೂಹಿಕ ಗುರು ಪ್ರಾರ್ಥನೆ, ಗುರುಪೂಜೆ, ಮಧ್ಯಾಹ್ನ ಮಹಾಪೂಜೆ, ರಾತ್ರಿ ಮಹಾಗುರುಪೂಜೆ, ಪ್ರಸಾದ ವಿತರಣೆ ನೆರವೇರಿತು. ಸಂಜೆ 6 ಗಂಟೆಗೆ ಶ್ರೀ ವೆಂಕಟೇಶ ಶಿವಭಕ್ತಿ ಯೋಗ ಸಂಘದ ವತಿಯಿಂದ ಗಾಂಧಿನಗರ ಶ್ರೀಗೋಕರ್ಣನಾಥೇಶ್ವರ ಕಾಲೇಜಿನಿಂದ ಶ್ರೀ ಗುರುವರ್ಯರ ಭಾವಚಿತ್ರ ಮೆರವಣಿಗೆ ಜರುಗಿತು. ಸಹಸ್ರಾರು ಮಂದಿ ಗುರುಪೂಜೆಯಲ್ಲಿ ಪಾಲ್ಗೊಂಡರು.
ವರಮಹಾಲಕ್ಷ್ಮೀ ಪೂಜೆ ಹಾಗೂ ನಾರಾಯಣ ಗುರುಗಳ ಜನ್ಮದಿನ ಒಂದೇ ದಿನ ಬಂದಿರುವುದು ಅಪರೂಪವಾಗಿದ್ದು, ಈ ದಿನ ವಿಶೇಷವಾಗಿದೆ. ನೂರಾರು ಮಹಿಳೆಯರು ಭಾಗವಹಿಸಿ ವಿಶೇಷ ಪೂಜೆ ನೆರವೇರಿಸಿದರು.


ವರಮಹಾಲಕ್ಷ್ಮೀ ಪೂಜೆಯ ಹಿನ್ನೆಲೆಯಲ್ಲಿ ಬೆಳಗ್ಗೆಯಿಂದಲೇ ಮಹಿಳೆಯರು ಸೇರಿದಂತೆ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಕ್ಷೇತ್ರಕ್ಕೆ ಆಗಮಿಸಿದ್ದರು.

ಕ್ಷೇತ್ರಾಡಳಿತ ಸಮಿತಿ ಅಧ್ಯಕ್ಷ ಜೈರಾಜ್ ಎಚ್.ಸೋಮಸುಂದರಂ, ಕೋಶಾಧಿಕಾರಿ ಪದ್ಮರಾಜ್ ಆರ್. ಪೂಜಾರಿ, ಟ್ರಸ್ಟಿಗಳಾದ ಸಂತೋಷ್ ಜೆ.ಪೂಜಾರಿ, ಸಾಯಿರಾಮ್ ಎಚ್.ಎಸ್., ಕಿಶೋರ್ ದಂಡೆಕೇರಿ, ಕೃತೀನ್ ಧೀರಜ್ ಅಮೀನ್, ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಡಾ.ಬಿ.ಜಿ.ಸುವರ್ಣ, ಸದಸ್ಯರಾದ ಪಿ.ಕೆ.ಗೌರವಿ ರಾಜಶೇಖರ್, ಲತೀಶ್ ಸುವರ್ಣ ಮೊದಲಾದವರು ಉಪಸ್ಥಿತರಿದ್ದರು.

