ಕಾರ್ಕಳ ಬೈಪಾಸ್ ಬಳಿ ಭೀಕರ ಅಪಘಾತ: ಹಿಟ್ ಅಂಡ್ ರನ್ – ಕಳಸದ ಲಾರಿ ಚಾಲಕ ಸುಧಾಕರ್ ಪೂಜಾರಿ ಸ್ಥಳದಲ್ಲೇ ಸಾವು..!

Prakhara News
1 Min Read

ಕಾರ್ಕಳ: ಉಡುಪಿ ಜಿಲ್ಲೆಯ ಕಾರ್ಕಳ ಬೈಪಾಸ್ ಬಳಿ ಭೀಕರ ಅಪಘಾತದಲ್ಲಿ ಕಳಸದ ಲಾರಿ ಚಾಲಕ ಸುಧಾಕರ್ ಸ್ಥಳದಲ್ಲೇ ಸಾವು.ಕಳಸ ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನ ಹಳುವಳ್ಳಿ–ಯಡ್ರುಗೋಡು ಗ್ರಾಮದ ನಿವಾಸಿ ಸುಧಾಕರ್ ಪೂಜಾರಿ ಅವರು ಕಾರ್ಕಳ ಬೈಪಾಸ್ ಬಳಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ.

ಸುಧಾಕರ್ ಅವರು ಕಳಸದ ಪ್ರಭಾಕರ್ ಭಟ್ ಅವರ ಟಿಪ್ಪರ್ ಲಾರಿಯಲ್ಲಿ ಚಾಲಕರಾಗಿ ಕೆಲಸ ಮಾಡುತ್ತಿದ್ದರು. ಬೆಳಗಿನ ಜಾವ ಲಾರಿಯಲ್ಲಿ ತೆರಳುತ್ತಿದ್ದ ಸಂದರ್ಭದಲ್ಲಿ ಕಾರ್ಕಳ ಬೈಪಾಸ್ ಬಳಿ ಲಾರಿಯನ್ನು ನಿಲ್ಲಿಸಿ ಮೂತ್ರ ವಿಸರ್ಜನೆಗಾಗಿ ರಸ್ತೆಯ ಬದಿಗೆ ತೆರಳಿದ್ದರು ಎನ್ನಲಾಗಿದೆ.

ಈ ವೇಳೆ ಅಪರಿಚಿತ ವಾಹನವು ಸುಧಾಕರ್ ಅವರಿಗೆ ಡಿಕ್ಕಿ ಹೊಡೆದಿದೆ ಎನ್ನಲಾಗಿದ್ದು, ಅಪಘಾತದ ಪರಿಣಾಮ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಘಟನೆ ಸುಮಾರು ಬೆಳಗಿನ ಜಾವ 3.30ರ ವೇಳೆಗೆ ನಡೆದಿದೆ ಎಂದು ಕುಟುಂಬದವರು ನೀಡಿದ ಮಾಹಿತಿಯಲ್ಲಿ ತಿಳಿಸಲಾಗಿದೆ.ಅಪಘಾತದ ಬಳಿಕ ಡಿಕ್ಕಿ ಹೊಡೆದ ವಾಹನ ಸ್ಥಳದಿಂದ ತೆರಳಿರುವ ಶಂಕೆ ಇದ್ದು, ವಾಹನ ಹಾಗೂ ಚಾಲಕನ ಪತ್ತೆಗೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಅಪಘಾತ ನಡೆದ ಸ್ಥಳ ಹಾಗೂ ಸುತ್ತಮುತ್ತಲಿನ ಪ್ರದೇಶಗಳ ಸಿಸಿಟಿವಿ ದೃಶ್ಯಗಳನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ.

ಘಟನೆ ಕಾರ್ಕಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ. ಅಪಘಾತಕ್ಕೆ ಕಾರಣವಾದ ವಾಹನದ ಗುರುತು ಹಾಗೂ ಘಟನೆಗೆ ಸಂಬಂಧಿಸಿದ ಇತರ ಮಾಹಿತಿಗಳನ್ನು ಪೊಲೀಸರು ಕಲೆಹಾಕುತ್ತಿದ್ದಾರೆ.
ಹಳುವಳ್ಳಿ–ಯಡ್ರುಗೋಡು ಗ್ರಾಮದ ಸುಧಾಕರ್ ಅವರ ಅಕಾಲಿಕ ನಿಧನದಿಂದ ಕುಟುಂಬಸ್ಥರು ಹಾಗೂ ಗ್ರಾಮಸ್ಥರಲ್ಲಿ ದುಃಖದ ವಾತಾವರಣ ನಿರ್ಮಾಣವಾಗಿದೆ. ಈ ಪ್ರಕರಣ ಕಾರ್ಕಳ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

Share This Article
Leave a Comment