ಗುಡ್ ನ್ಯೂಸ್: ಇಂದಿನಿಂದ ವಾಣಿಜ್ಯ ಎಲ್. ಪಿ. ಜಿ ದರದಲ್ಲಿ ಇಳಿಕೆ

Prakhara News
1 Min Read

ನವದೆಹಲಿ: ವಾಣಿಜ್ಯ ಬಳಕೆಯ ಎಲ್‌ಪಿಜಿ ಪೂರೈಕೆ ಮೇಲಿನ ನಿರ್ಬಂಧ ತೆರವುಗೊಳಿಸಿದ ಬೆನ್ನಲ್ಲೇ ಕೇಂದ್ರ ಸರ್ಕಾರ ಮತ್ತೊಂದು ಸಿಹಿಸುದ್ದಿ ನೀಡಿದ್ದು, ವಾಣಿಜ್ಯ ಬಳಕೆಯ ಎಲ್‌ಪಿಜಿ ದರ 183.50 ರೂ. ಇಳಿಕೆ ಮಾಡಿದೆ.

ಇಂದಿನಿಂದ (ಜುಲೈ 1) ಜಾರಿಗೆ ಬರುವಂತೆ 19 ಕೆ.ಜಿಯ ವಾಣಿಜ್ಯ ಬಳಕೆಯ ಸಿಲಿಂಡ‌ರ್ ಬೆಲೆಯನ್ನು 183.50 ರೂ. ಇಳಿಕೆ ಮಾಡಲಾಗಿದೆ. ಈ ಮೂಲಕ 3,113.50 ರೂ. ಇದ್ದ ಸಿಲಿಂಡ‌ರ್ ಬೆಲೆ ಈಗ 2,930 ರೂ.ಗೆ ಇಳಿದಿದೆ. ಆದರೆ ತೈಲ ಕಂಪನಿಗಳು ಗೃಹ ಬಳಕೆಯ ಸಿಲಿಂಡರ್ ಬೆಲೆಯಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಹೀಗಾಗಿ 14.2 ಕೆಜಿ ತೂಕದ ಗೃಹ ಬಳಕೆಯ ಸಿಲಿಂಡ‌ರ್ ಬೆಲೆಯಲ್ಲಿ ಯಾವುದೇ ಬದಲಾವಣೆ ಆಗಿಲ್ಲ.

ಮಧ್ಯಪ್ರಾಚ್ಯ ಸಂಘರ್ಷದಿಂದಾಗಿ ಜಗತ್ತಿನಾದ್ಯಂತ ಇಂಧನ ಬಿಕ್ಕಟ್ಟು ಎದುರಾಗಿತ್ತು. ಅಮೆರಿಕ ಹಾಗೂ ಇಸ್ರೇಲ್ ದಾಳಿಗೆ ಪ್ರತಿಯಾಗಿ ಇರಾನ್ ದೇಶವು ತನ್ನ ನಿಯಂತ್ರಣದಲ್ಲಿದ್ದ ಹೊರ್ಮುಜ್ ಜಲಸಂಧಿಯನ್ನು ಬಂದ್ ಮಾಡಿ, ಕಚ್ಚಾ ತೈಲ ಮತ್ತು ಎಲ್‌ಪಿಜಿ ಸಾಗಿಸುವ ಹಡಗುಗಳ ಸಂಚಾರವನ್ನು ತಡೆಹಿಡಿದಿತ್ತು.

ಹೊರ್ಮುಜ್ ಜಲಸಂಧಿಯಿಂದ ಇಂಧನ ಪೂರೈಕೆ ವ್ಯತ್ಯಯವಾದ ಹಿನ್ನೆಲೆ ಭಾರತದಲ್ಲಿ ವಾಣಿಜ್ಯ ಎಲ್‌ಪಿಜಿ ದರವನ್ನು ನಾಲ್ಕು ಬಾರಿ ಏರಿಕೆ ಮಾಡಲಾಗಿದೆ. ಭಾರೀ ನಷ್ಟ ಅನುಭವಿಸುತ್ತಿದ್ದ ತೈಲ ಕಂಪನಿಗಳು ಮಾರ್ಚ್‌ನಲ್ಲಿ 144 ರೂ., ಏಪ್ರಿಲ್‌ನಲ್ಲಿ 195.50 ರೂ., ಮೇನಲ್ಲಿ 993 ರೂ. ಹಾಗೂ ಜೂನ್‌ನಲ್ಲಿ 42 ರೂ. ಏರಿಕೆ ಮಾಡಿದ್ದವು. ಒಟ್ಟು ನಾಲ್ಕು ಹಂತಗಳಲ್ಲಿ 1374.50 ರೂ. ಏರಿಕೆಯಾಗಿತ್ತು.

ಈ ಸಮಯದಲ್ಲಿ 14.2 ಕೆ.ಜಿ ಗೃಹಬಳಕೆಯ ಎಲ್‌ಪಿಜಿ ದರವನ್ನು ಎರಡು ಬಾರಿ ಏರಿಕೆ ಮಾಡಲಾಗಿದ್ದು, ಮಾರ್ಚ್‌ನಲ್ಲಿ 60 ರೂ. ಹಾಗೂ ಜೂನ್‌ನಲ್ಲಿ 29 ರೂ. ಹೆಚ್ಚಿಸಿ, ಒಟ್ಟು 89 ರೂ. ಏರಿಸಿರುವುದಾಗಿ ವರದಿ ಮೂಲಕ ತಿಳಿದುಬಂದಿದೆ.

Share This Article
Leave a Comment