ಉಳ್ಳಾಲ: ಪವಿತ್ರ ಚಾರ್ ಧಾಮ್ ಯಾತ್ರೆಗಾಗಿ ಉತ್ತರಾಖಂಡಕ್ಕೆ ತೆರಳಿದ್ದ ಉಳ್ಳಾಲ ತಾಲೂಕಿನ ಕುಂಪಲದ ನಿವಾಸಿಯೊಬ್ಬರು ಯಮುನೋತ್ರಿಯಲ್ಲಿ ಮಂಗಳವಾರ ಮಧ್ಯಾಹ್ನ ಹೃದಯಾಘಾತದಿಂದ ಅಕಾಲಿಕ ಮರಣ ಹೊಂದಿದ್ದಾರೆ. ಕುಂಪಲ ವಿದ್ಯಾನಗರ ನಿವಾಸಿ ರಾಜೇಶ್ ಗಾಣಿಗ (53) ಮೃತಪಟ್ಟ ದುರದೃಷ್ಟಕರ ಯಾತ್ರಿಕರಾಗಿದ್ದಾರೆ.


ರಾಜೇಶ್ ಅವರು ಸೆಪ್ಟೆಂಬರ್ 18ರಂದು ಉಳ್ಳಾಲದ 14 ಮಂದಿ ಸಹಯಾತ್ರಿಕರೊಂದಿಗೆ ಮಂಗಳೂರಿನಿಂದ ರೈಲು ಮುಖಾಂತರ ಚಾರ್ ಧಾಮ್ ಯಾತ್ರೆಗೆ ತೆರಳಿದ್ದರು. ಉತ್ತರ ಭಾರತದ ಹಲವು ಪವಿತ್ರ ಧಾರ್ಮಿಕ ಕ್ಷೇತ್ರಗಳ ದರ್ಶನ ಮುಗಿಸಿ, ಸೋಮವಾರ ಉತ್ತರಾಖಂಡ ತಲುಪಿ ಕೊಠಡಿಯೊಂದರಲ್ಲಿ ತಂಗಿದ್ದರು.
ಮಂಗಳವಾರ ಬೆಳಿಗ್ಗೆ ಉತ್ತರಾಖಂಡದ ಯಮುನೋತ್ರಿಯ ಗಿರಿ ಶಿಖರಗಳಲ್ಲಿ ಸುಮಾರು 7 ಕಿಲೋಮೀಟರ್ ದೂರದ ಪಾದಯಾತ್ರೆ ಪೂರ್ಣಗೊಳಿಸಿದ್ದ ರಾಜೇಶ್, ದೇವಸ್ಥಾನದ ಆವರಣದ ಕುರ್ಚಿಯಲ್ಲಿ ಕುಳಿತಿದ್ದಾಗ ಏಕಾಏಕಿ ಕುಸಿದುಬಿದ್ದಿದ್ದಾರೆ. ತಕ್ಷಣವೇ ಜೊತೆಯಲ್ಲಿದ್ದವರು ಅವರನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ದರಾದರೂ, ಮಾರ್ಗಮಧ್ಯದಲ್ಲೇ ಅವರು ಕೊನೆಯುಸಿರೆಳೆದಿದ್ದಾರೆ.

ಪ್ರಸ್ತುತ ಮೃತ ರಾಜೇಶ್ ಅವರ ಮೃತದೇಹವನ್ನು ಉತ್ತರಾಖಂಡದ ಡೆಹ್ರಡೂನ್ ಸರ್ಕಾರಿ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದ್ದು, ಮಂಗಳೂರಿಗೆ ತರಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.
ವೃತ್ತಿಯಲ್ಲಿ ವೆಲ್ಡರ್ ಆಗಿದ್ದ ರಾಜೇಶ್ ಅವರು ಮಂಗಳೂರಿನ ಜಪ್ಪಿನಮೊಗರುವಿನಲ್ಲಿ ಸ್ವಂತ ವರ್ಕ್‌ಶಾಪ್ ನಡೆಸುತ್ತಿದ್ದರು. ಮೃತರು ಪತ್ನಿ, ಓರ್ವ ಪುತ್ರ ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ.

