ಬಂಟ್ವಾಳ: ಕಣ್ಣಿಗೆ ಕಾರದ ಪುಡಿ ಎರಚಿ, ತಲವಾರು ತೋರಿಸಿ ₹8.52 ಲಕ್ಷ ದರೋಡೆ – ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲು

Prakhara News
1 Min Read

ಬಂಟ್ವಾಳ: ಕಣ್ಣಿಗೆ ಕಾರದ ಪುಡಿ ಎರಚಿ, ತಲವಾರು ತೋರಿಸಿ ₹8.52 ಲಕ್ಷ ದರೋಡೆ ಬಂಟ್ವಾಳ: ವ್ಯಾಪಾರದ ಹಣ ಸಂಗ್ರಹಿಸಿ ಬೈಕ್ನಲ್ಲಿ ಹಿಂತಿರುಗುತ್ತಿದ್ದ ಸಂಸ್ಥೆಯೊಂದರ ಸೌಕರನನ್ನು ತಡೆದು, ತಲವಾರು ತೋರಿಸಿ ಬೆದರಿಸಿ ಬರೋಬ್ಬರಿ ₹8,52,000 ನಗದು ಹಣವನ್ನು ದರೋಡೆ ಮಾಡಿಕೊಂಡು ಪರಾರಿಯಾಗಿರುವ ಘಟನೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಮಣಿನಾಲ್ಕೂರು ಗ್ರಾಮದ ಮುಲ್ಕಾಜೆ ಮಾಳೆ ಎಂಬಲ್ಲಿ ಗುರುವಾರ ಮಧ್ಯಾಹ್ನ ಸಂಭವಿಸಿದೆ. ಮಂಗಳೂರಿನ ಕಣ್ಣೂರು ಮೂಲದ ಸಿಮೆಂಟ್ ಹಾಗೂ ಕಬ್ಬಿಣ ಮಾರಾಟ ಸಂಸ್ಥೆಯಲ್ಲಿ ಉದ್ಯೋಗಿಯಾಗಿರುವ ಮಯ್ಯದಿ (40) ದರೋಡೆಗೆಳಗಾದ ವ್ಯಕ್ತಿ.

ಘಟನೆಯ ವಿವರ: ಸಂಸ್ಥೆಯ ವ್ಯವಹಾರಕ್ಕೆ ಸಂಬಂಧಿಸಿದಂತೆ ವಿವಿಧ ಅಂಗಡಿಗಳಿಂದ ನಗದು ಹಣ ಸಂಗ್ರಹಿಸಲು ಮಯ್ಯದಿ ಅವರು ಆ. 20ರಂದು ತಮ್ಮ ಬೈಕ್ನಲ್ಲಿ ತೆರಳಿದ್ದರು. ಹಲವು ಭಾಗಗಳಲ್ಲಿ ಹಣ ಸಂಗ್ರಹಿಸಿದ ಅವರು, ಬಂಟ್ವಾಳ ತಾಲೂಕಿನ ಕಕ್ಕಪದವಿನಿಂದ ಪಾಣೆಮಂಗಳೂರಿನತ್ತ ಬೈಕ್ನಲ್ಲಿ ಹಿಂತಿರುಗುತ್ತಿದ್ದರು. ಮಧ್ಯಾಹ್ನ ಸುಮಾರು 1:00 ಗಂಟೆಯ ವೇಳೆಗೆ ಮಣಿನಾಲ್ಕೂರು ಮುಲ್ಕಾಜೆ ಮಾಳೆ ಎಂಬ ನಿರ್ಜನ ಪ್ರದೇಶದ ಬಳಿ ತಲುಪುತ್ತಿದ್ದಂತೆ, 2 ಬೈಕ್ಗಳಲ್ಲಿ ಬೆನ್ನಟ್ಟಿ ಬಂದ ನಾಲ್ಕು ಜನ ಅಪರಿಚಿತ ದುಷ್ಕರ್ಮಿಗಳು ಮಯ್ಯದಿ ಅವರ ಬೈಕ್ ಅನ್ನು ತಡೆದು ನಿಲ್ಲಿಸಿದರು. ತಕ್ಷಣವೇ ಅವರ ಬಳಿಯಿದ್ದ ತಲವಾರು ತೋರಿಸಿ, ಪ್ರಾಣ ಬೆದರಿಕೆಯೊಡ್ಡಿ ಅವರ ವಶದಲ್ಲಿದ್ದ ₹8,52,000 ನಗದು ಹಣದ ಬ್ಯಾಗ್ ಅನ್ನು ಕಸಿದುಕೊಂಡು ಸ್ಥಳದಿಂದ ಪರಾರಿಯಾಗಿದ್ದಾರೆ.

ಈ ಕುರಿತು ಸಂತ್ರಸ್ತ ಮಯ್ಯದಿ ಅವರು ನೀಡಿದ ದೂರಿನ ಮೇರೆಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆರೋಪಿಗಳ ಪತ್ತೆಗೆ ಜಾಲ ಬೀಸಲಾಗಿದ್ದು, ತನಿಖೆ ಪ್ರಗತಿಯಲ್ಲಿದೆ.

Share This Article
Leave a Comment