ಕುಂದಾಪುರ: ಕುಂದಾಪುರ ಚರ್ಚ್ ರಸ್ತೆಯಲ್ಲಿ ಶುಕ್ರವಾರ ಮುಂಜಾನೆ ರಿಚರ್ಡ್ ಮಸ್ಕರೇನಸ್ ಅವರನ್ನು ಬಂದೂಕಿನಿಂದ ಶೂಟ್ ಮಾಡಿ ಭೀಕರವಾಗಿ ಹತ್ಯೆಗೈದು ಪರಾರಿಯಾಗಿದ್ದ ಕೊಲೆ ಆರೋಪಿ ಡೆರಿಕ್ ಕ್ರಾಸ್ತಾನನ್ನು (54) ಉಡುಪಿ ಜಿಲ್ಲಾ ಪೊಲೀಸರು ಶನಿವಾರ (ಆಗಸ್ಟ್ 1, 2026) ಭಟ್ಕಳದಲ್ಲಿ ಬಂಧಿಸಿದ್ದಾರೆ.


ಶೂಟ್ ಮಾಡಿ ಪರಾರಿಯಾಗಿದ್ದ ಆರೋಪಿಯನ್ನು ಅರೆಸ್ಟ್ ಮಾಡಲು ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಹರಿರಾಂ ಶಂಕರ್ ಅವರು ಮೂರು ವಿಶೇಷ ತನಿಖಾ ತಂಡಗಳನ್ನು ರಚಿಸಿದ್ದರು. ತೀವ್ರ ಶೋಧ ಕಾರ್ಯಾಚರಣೆ ನಡೆಸಿದ ಪೊಲೀಸರು, ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಬೆಳಕೆ ಗ್ರಾಮದ ಹೇರಬುಡಿಕೆ ಪ್ರದೇಶದಲ್ಲಿ ಅಡಗಿಕೊಂಡಿದ್ದ ಆರೋಪಿ ಡೆರಿಕ್ ಕ್ರಾಸ್ತಾನನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುತ್ತಿದ್ದು, ಹೆಚ್ಚಿನ ವಿಚಾರಣೆ ಕಸ್ಟಡಿಗೆ ಪಡೆಯಲಾಗುವುದು ಎಂದು ಎಸ್ಪಿ ತಿಳಿಸಿದ್ದಾರೆ.

ಬಾರ್ಕೂರು ಕಚ್ಚೂರಿನ ಬಾಡಿಗೆ ನಿವಾಸಿ, ಹೆಬ್ರಿ ಸಂತೆಕಟ್ಟೆ ಮೂಲದ ಐವನ್ ರಿಚರ್ಡ್ ಮಸ್ಕರೇನಸ್ (45) ಹಾಗೂ ಕುಂದಾಪುರದ ನಿವಾಸಿ ಡೆರಿಕ್ ಕ್ರಾಸ್ತಾ ನಡುವೆ ವ್ಯಾಪಾರ ಹಾಗೂ ಹಣಕಾಸಿನ ತಕರಾರಿತ್ತು. ಗುರುವಾರ ರಾತ್ರಿ ಫೋನ್ನಲ್ಲಿ ‘ಧಮ್ ಇದ್ದರೆ ಕುಂದಾಪುರಕ್ಕೆ ಬಾ’ ಎಂದು ಡೆರಿಕ್ ಸವಾಲು ಹಾಕಿದ್ದ. ಚಾಲೆಂಜ್ ಸ್ವೀಕರಿಸಿ ಸ್ಥಳಕ್ಕೆ ಬಂದಿದ್ದ ಐವನ್ ಕಾರಿನಿಂದ ಇಳಿಯುತ್ತಿದ್ದಂತೆಯೇ ಡೆರಿಕ್ ತಂದಿದ್ದ ಬಂದೂಕಿನಿಂದ ಸೊಂಟ ಹಾಗೂ ಕಾಲಿಗೆ ಗುಂಡು ಹಾರಿಸಿ ಹತ್ಯೆಗೈದು ಪರಾರಿಯಾಗಿದ್ದ.



