ಬಂಟ್ವಾಳ: ಬಂಟ್ವಾಳ ತಾಲೂಕಿನ ಕನ್ಯಾನ ಬೆರಿಕಟ್ಟೆ – ಕಾಡುಮನೆ ಪರಿಸರದ ನಿವಾಸಿಗಳು ಹಲವು ವರ್ಷಗಳಿಂದ ಸಾರ್ವಜನಿಕ ಆರೋಗ್ಯಕ್ಕೆ ಮಾರಕವಾಗಿರುವ ಸಮಸ್ಯೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬೆರಿಕಟ್ಟೆ ಮಸೀದಿಯ ಸಮೀಪದಲ್ಲಿರುವ ಮೂಸ ಶಹೀದ್ ರವರ ಮಾಲಕತ್ವದ ಕೋಳಿ ಫಾರ್ಮ್‌ನಿಂದ ಹರಡುತ್ತಿರುವ ತೀವ್ರ ದುರ್ವಾಸನೆ, ಸೊಳ್ಳೆ ಹಾಗೂ ನೋಣಗಳ ಕಾಟದಿಂದ ಸ್ಥಳೀಯರು ಸಂಕಷ್ಟದ ಬದುಕು ನಡೆಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.


ಫಾರ್ಮ್‌ನಿಂದ ನಿರಂತರವಾಗಿ ಹರಡುವ ದುರ್ವಾಸನೆಯಿಂದ ಸುತ್ತಮುತ್ತಲಿನ ಮನೆಗಳಲ್ಲಿ ವಾಸಿಸುವುದೇ ಅಸಹನೀಯ ಸ್ಥಿತಿಗೆ ತಲುಪಿದ್ದು, ವಿಶೇಷವಾಗಿ ಫಾರ್ಮ್‌ನ ಕೆಳಭಾಗದಲ್ಲಿರುವ ಕುಟುಂಬಗಳು ದಿನನಿತ್ಯ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿವೆ. ಮಕ್ಕಳಲ್ಲಿ ಅಲರ್ಜಿ, ಉಸಿರಾಟದ ತೊಂದರೆ ಸೇರಿದಂತೆ ವಿವಿಧ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿದ್ದು, ಪರಿಸರ ಸಂಪೂರ್ಣ ಅಸ್ವಚ್ಛಗೊಂಡಿದೆ ಎಂದು ನಿವಾಸಿಗಳು ತಿಳಿಸಿದ್ದಾರೆ.

ಕೋಳಿ ಫಾರ್ಮ್ ಪ್ರದೇಶವು ಸೊಳ್ಳೆ, ನೋಣ ಹಾಗೂ ಕೀಟಗಳ ಉತ್ಪತ್ತಿ ಕೇಂದ್ರವಾಗಿದ್ದು, ಆಹಾರ ಪದಾರ್ಥಗಳ ಮೇಲೆಯೂ ನೋಣಗಳು ಕುಳಿತುಕೊಳ್ಳುತ್ತಿರುವ ಕಾರಣ ಸೋಂಕು ರೋಗಗಳು ಹರಡುವ ಭೀತಿ ಹೆಚ್ಚಾಗಿದೆ. ಈ ಕುರಿತು ಸುಮಾರು ಎರಡು ವರ್ಷಗಳ ಹಿಂದೆಯೇ ಗ್ರಾಮ ಪಂಚಾಯಿತಿಗೆ ಮನವಿ ಸಲ್ಲಿಸಿದ್ದರೂ ಯಾವುದೇ ಶಾಶ್ವತ ಪರಿಹಾರ ಅಥವಾ ಕಾನೂನು ಕ್ರಮ ಕೈಗೊಳ್ಳಲಾಗಿಲ್ಲ ಎಂಬ ಗಂಭೀರ ಆರೋಪ ಕೇಳಿಬಂದಿದೆ.

ಸಾರ್ವಜನಿಕರ ಆರೋಗ್ಯ ಮತ್ತು ಪರಿಸರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಸ್ಥಳ ಪರಿಶೀಲನೆ ನಡೆಸಿ, ಸದರಿ ಕೋಳಿ ಫಾರ್ಮ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ. ಸಮಸ್ಯೆಗೆ ಶೀಘ್ರ ಪರಿಹಾರ ಸಿಗದಿದ್ದಲ್ಲಿ ಮುಂದಿನ ದಿನಗಳಲ್ಲಿ ಹೋರಾಟ ನಡೆಸುವ ಎಚ್ಚರಿಕೆಯನ್ನೂ ನೀಡಿದ್ದಾರೆ.


