ಮಂಗಳೂರು: ಕಲುಷಿತ ನೀರು ಕುಡಿದು ಹಲವರು ಅಸ್ವಸ್ಥ: ಪಾಲಿಕೆ, ಕಾಂಗ್ರೆಸ್ ಸರ್ಕಾರದ ವಿರುದ್ಧ ಶಾಸಕ ವೇದವ್ಯಾಸ ಕಾಮತ್ ತೀವ್ರ ಆಕ್ರೋಶ

Prakhara News
1 Min Read

ಮಂಗಳೂರು : ನಗರದ ಬಿಜೈ ನ್ಯೂರೋಡ್, ಬಟ್ಟಗುಡ್ಡೆ, ಕದ್ರಿ, ಚಿಲಿಂಬಿ ಸೇರಿದಂತೆ ಕೆಲವು ಭಾಗಗಳಲ್ಲಿ ಕುಡಿಯಲು ಯೋಗ್ಯವಲ್ಲದ ನೀರು ಸರಬರಾಜು ಆಗಿದ್ದರಿಂದ ಹಲವು ಸಾರ್ವಜನಿಕರ ಆರೋಗ್ಯದಲ್ಲಿ ಸಮಸ್ಯೆ ಕಂಡು ಬಂದಿದ್ದು ಶಾಸಕ ವೇದವ್ಯಾಸ ಕಾಮತ್ ಅವರು ರಾಜ್ಯ ಕಾಂಗ್ರೆಸ್ ನೇತೃತ್ವದ ಪಾಲಿಕೆಯ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಈ ಪ್ರದೇಶಗಳ ಬಹುತೇಕ ಮನೆ ಹಾಗೂ ಅಪಾರ್ಟ್‌ಮೆಂಟ್ ಗಳಿಗೆ, ನೀಲಿ ಬಣ್ಣದಿಂದ ಕೂಡಿದ ವಾಸನೆ ಮಿಶ್ರಿತ ನೀರು ಸರಬರಾಜಾಗಿದೆ ಎಂದು ಸ್ಥಳೀಯ ನಿವಾಸಿಗಳು ದೂರಿದ್ದಾರೆ. ಈ ನೀರನ್ನು ಕುಡಿದ ಅವರಲ್ಲಿ ವಾಂತಿ, ಜ್ವರ, ಭೇದಿ, ಸಹಿಸಲು ಆಗದ ಸುಸ್ತು ಸೇರಿದಂತೆ ಆರೋಗ್ಯದಲ್ಲಿ ತೀವ್ರ ಸಮಸ್ಯೆಯಾಗಿದೆ. ಪಂಪ್‌ವೆಲ್ ಬಯೋಟೆಕ್ ಲ್ಯಾಬೋರೇಟರಿ ಹಾಗೂ ಬಿಜೈ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಮಾಡಿದ ಪರೀಕ್ಷೆಯ ನಂತರ ಈ ನೀರು ಕುಡಿಯಲು ಯೋಗ್ಯ ಅಲ್ಲವೇ ಅಲ್ಲ ಎಂಬ ವರದಿ ಬಂದಿರುವುದು ಮತ್ತಷ್ಟು ಜನರ ಆತಂಕಕ್ಕೆ ಕಾರಣವಾಗಿದೆ. ಅಲ್ಲದೇ ಯಾವುದೇ ಕಾರಣಕ್ಕೂ ಮಾಧ್ಯಮಗಳಿಗೆ ಈ ಬಗ್ಗೆ ಮಾಹಿತಿ ಸಿಗದಂತೆ ಅಧಿಕಾರಿಗಳು ಪ್ರಯತ್ನಿಸಿದ್ದು ಯಾಕೆ ಎಂದು ಶಾಸಕರು ಕಳವಳ ವ್ಯಕ್ತಪಡಿಸಿದರು.

ರಾಜ್ಯದ ಆರೋಗ್ಯ ಸಚಿವರು ನಮ್ಮದೇ ಜಿಲ್ಲೆಯವರಾಗಿದ್ದರೂ ಕೂಡಾ ನಮ್ಮ ಜನರಿಗೆ ಆರೋಗ್ಯದ ಬಗ್ಗೆ ಗ್ಯಾರಂಟಿ ಒದಗಿಸಲು ಸಾಧ್ಯವಾಗಿಲ್ಲದಿರುವುದು ದುರಂತ. ಸದ್ಯ ಪಾಲಿಕೆಯಲ್ಲಿ ಯಾವುದೇ ಜನಪ್ರತಿನಿಧಿಗಳು ಇಲ್ಲದೇ ಆಡಳಿತಾಧಿಕಾರಿ ಮೂಲಕ ರಾಜ್ಯ ಕಾಂಗ್ರೆಸ್ ಸರ್ಕಾರವೇ ಆಡಳಿತ ನಡೆಸುತ್ತಿದೆ. ಹಾಗಿರುವಾಗ ಜನರ ಸಮಸ್ಯೆ ಕೇಳುವವರೇ ಇಲ್ಲವಾಗಿದೆ. ಸರ್ಕಾರದ, ಪಾಲಿಕೆಯ ಬೇಜವಾಬ್ದಾರಿಗೆ ಜನರು ತೊಂದರೆ ಅನುಭವಿಸುವುದನ್ನು ಯಾವುದೇ ಕಾರಣಕ್ಕೂ ಒಪ್ಪಲು ಸಾಧ್ಯವಿಲ್ಲ. ಕೂಡಲೇ ಇದರ ಹಿಂದಿನ ಕಾರಣ ಪತ್ತೆ ಹಚ್ಚಿ ಸೂಕ್ತ ಕ್ರಮ ಕೈಗೊಳ್ಳಬೇಕು. ಜನರು ಈಗಾಗಲೇ ತಮ್ಮ ಮನೆಯ, ಅಪಾರ್ಟ್‌ಮೆಂಟ್ ಗಳ ಟಾಂಕಿಯಲ್ಲಿನ ಕಲುಷಿತ ನೀರನ್ನು ಚೆಲ್ಲಿದ್ದು, ಕೂಡಲೇ ಅವರಿಗೆ ಶುದ್ಧ ನೀರು ಪೂರೈಕೆಗೆ ಕ್ರಮ ಕೈಗೊಳ್ಳಬೇಕು ಎಂದು ಇದೇ ವೇಳೆ ಶಾಸಕರು ಆಗ್ರಹಿಸಿದರು.

Share This Article
Leave a Comment