ಮಧುರೈ ಬಳಿ ಭೀಕರ ಅಪಘಾತ: ಕಾರುಗಳ ನಡುವೆ ಮುಖಾಮುಖಿ ಡಿಕ್ಕಿ, ಮಗು ಸೇರಿ ಐವರ ದಾರುಣ ಸಾವು..!

Prakhara News
1 Min Read

ಮಧುರೈ : ತಮಿಳುನಾಡಿನ ಮಧುರೈ ಜಿಲ್ಲೆಯ ಮೇಲೂರು ಸಮೀಪದ ತುಂಬೈಪಟ್ಟಿ ಚತುಷ್ಪಥ ರಸ್ತೆ ಮೇಲ್ಸೇತುವೆ ಮೇಲೆ ಸೋಮವಾರ (ಆಗಸ್ಟ್ 3) ಕಾರು ನಿಯಂತ್ರಣ ತಪ್ಪಿ ಮೀಡಿಯನ್ ದಾಟಿ ಎದುರಿನಿಂದ ಬರುತ್ತಿದ್ದ ಮತ್ತೊಂದು ಕಾರಿಗೆ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ 3 ವರ್ಷದ ಬಾಲಕಿ ಸೇರಿದಂತೆ ಚೆನ್ನೈನ ಒಂದೇ ಕುಟುಂಬದ ಐವರು ಸ್ಥಳದಲ್ಲೇ ದಾರುಣವಾಗಿ ಮೃತಪಟ್ಟಿದ್ದಾರೆ.

ಚೆನ್ನೈನಿಂದ ತಿರುನೆಲ್ವೇಲಿಗೆ ರಾಷ್ಟ್ರೀಯ ಹೆದ್ದಾರಿಯಲ್ಲಿ ತೆರಳುತ್ತಿದ್ದ ಕಾರು ತುಂಬೈಪಟ್ಟಿ ಫ್ಲೈಓವರ್ ಮೇಲೆ ಚಲಿಸುತ್ತಿದ್ದಾಗ, ಚಾಲಕನ ನಿಯಂತ್ರಣ ತಪ್ಪಿ ಮುಂದೆ ಸಾಗುತ್ತಿದ್ದ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದು, ತಕ್ಷಣವೇ ರಸ್ತೆ ವಿಭಾಜಕ (ಮೀಡಿಯನ್) ದಾಟಿ ಎದುರಿನಿಂದ ಬರುತ್ತಿದ್ದ ಕಾರಿಗೆ ರಭಸವಾಗಿ ಡಿಕ್ಕಿ ಹೊಡೆದಿದೆ.

ಅಪಘಾತದ ಭೀಕರತೆಗೆ ಕಾರಿನಲ್ಲಿದ್ದ ಐವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತರನ್ನು ಚೆನ್ನೈನ ಮಡಿಪಕ್ಕಂ ನಿವಾಸಿಗಳಾದ ಶ್ರೀಮನ್, ರಾಜಕುಮಾರಿ, ರಂಜಾ ಹಾಗೂ ಮೂರು ವರ್ಷದ ಬಾಲಕಿ ಪ್ರಾಣಿಕಾ ಎಂದು ಗುರುತಿಸಲಾಗಿದೆ. ಮೃತಪಟ್ಟ ಮತ್ತೊಬ್ಬ ವ್ಯಕ್ತಿಯ ಗುರುತು ಇನ್ನಷ್ಟೇ ಪತ್ತೆಯಾಗಬೇಕಿದೆ. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡ ಇಬ್ಬರನ್ನು ಅಗ್ನಿಶಾಮಕ ದಳ, ಪೊಲೀಸರು ಮತ್ತು 108 ಆಂಬ್ಯುಲೆನ್ಸ್ ಸಿಬ್ಬಂದಿ ರಕ್ಷಿಸಿ ಮೇಲೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಪಘಾತದಿಂದಾಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಕೆಲಕಾಲ ಸಂಚಾರ ವ್ಯತ್ಯಯ ಉಂಟಾಗಿತ್ತು. ಸ್ಥಳಕ್ಕಾಗಮಿಸಿದ ಮೇಲೂರು ಪೊಲೀಸರು ಸಂಚಾರ ಸುಗಮಗೊಳಿಸಿ, ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

Share This Article
Leave a Comment