BREAKING NEWS…! ಕನ್ಯಾನ ಬಾಕ್ಸೈಟ್ ಗಣಿಗಾರಿಕೆ ಸ್ಥಳದಲ್ಲಿ ಭೀಕರ ದುರಂತ; ಟಿಪ್ಪರ್ ಲಾರಿ ಚಲಿಸಿ ಚಾಲಕ ಸ್ಥಳದಲ್ಲೇ ಸಾವು

Prakhara News
1 Min Read

ವಿಟ್ಲ: ಕನ್ಯಾನ ಗ್ರಾಮದ ಪಾದೆಕಲ್ಲು ಪೆರೋಡಿ ಸರವು ಗುಡ್ಡೆ ಎಂಬಲ್ಲಿ ಇಂದು ಬೆಳಿಗ್ಗೆ ಸುಮಾರು 10 ಗಂಟೆಗೆ ಭೀಕರ ಅಪಘಾತವೊಂದು ಸಂಭವಿಸಿದ್ದು, ಟಿಪ್ಪರ್ ಲಾರಿಯ ಚಾಲಕ ಸ್ಥಳದಲ್ಲೇ ದುರ್ಮರಣಕ್ಕೀಡಾಗಿದ್ದಾರೆ. ಮೃತರನ್ನು ಧರ್ಮಸ್ಥಳ ಪರಿಸರದ ನಿವಾಸಿ ಮಹೇಶ್ ಎಂದು ಗುರುತಿಸಲಾಗಿದೆ.

ಘಟನೆಯ ವಿವರ:
ಅಕ್ರಮ ಎನ್ನಲಾದ ಬಾಕ್ಸೈಟ್ ದಂಧೆ ನಡೆಯುವ ಸ್ಥಳಕ್ಕೆ ತೆರಳಿದ್ದ ಲಾರಿಯಲ್ಲಿ ತಾಂತ್ರಿಕ ವೈಫಲ್ಯ ಕಾಣಿಸಿಕೊಂಡಿತ್ತು. ಇದನ್ನು ಸರಿಪಡಿಸಲು ಚಾಲಕ ಮಹೇಶ್ ಅವರು ಲಾರಿಯ ಕೆಳಗೆ ಹೋಗಿ ದುರಸ್ತಿ ಕಾರ್ಯದಲ್ಲಿ ತೊಡಗಿದ್ದಾಗ, ಲಾರಿ ಏಕಾಏಕಿ ಚಲಿಸಿ ಅವರ ಮೇಲೆ ಹರಿದು ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾರೆ.

ಘಟನೆ ನಡೆದ ತಕ್ಷಣ ಸ್ಥಳೀಯ ಕಾರ್ಮಿಕರು ಹಾಗೂ ಕನ್ಯಾನದ ಸದ್ಗುರು ಅಂಬ್ಯುಲೆನ್ಸ್ ಚಾಲಕರು ಜಂಟಿಯಾಗಿ ಕಾರ್ಯಾಚರಣೆ ನಡೆಸಿ, ಲಾರಿಯ ಅಡಿಯಿಂದ ಮೃತದೇಹವನ್ನು ಮೇಲಕ್ಕೆತ್ತಿದ್ದಾರೆ. ಬಳಿಕ ಮೃತದೇಹವನ್ನು ವಿಟ್ಲದ ಸರಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ.

ಸಾರ್ವಜನಿಕರ ಆಕ್ರೋಶ:
ಪ್ರದೇಶದಲ್ಲಿ ರಾಜಕೀಯ ನಾಯಕರು ಪಕ್ಷಭೇದ ಮರೆತು ನಡೆಸುತ್ತಿದ್ದಾರೆ ಎನ್ನಲಾದ ಈ ಬಾಕ್ಸೈಟ್ ದಂಧೆಯ ವಿರುದ್ಧ ಸ್ಥಳೀಯ ನಾಗರಿಕರು ನಿರಂತರವಾಗಿ ಹಿಡಿಶಾಪ ಹಾಕುತ್ತಿದ್ದಾರೆ. ಈ ಹಿಂದೆ ಬಾಕ್ಸೈಟ್ ಲಾರಿಗಳ ಅಟ್ಟಹಾಸ ಹಾಗೂ ದಬ್ಬಾಳಿಕೆಯಿಂದಾಗಿ ವಿಟ್ಲ ಸೇರಿದಂತೆ ಸುತ್ತಮುತ್ತಲಿನ ವಾಹನ ಚಾಲಕರು ಮತ್ತು ಸಾರ್ವಜನಿಕರು ತೀವ್ರ ಹೈರಾಣಾಗಿದ್ದರು. ಇದರ ವಿರುದ್ಧ ಪ್ರತಿಭಟನೆಗಳು ನಡೆದಿದ್ದರೂ, ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ದಂಧೆಕೋರರೊಂದಿಗೆ ಶಾಮೀಲಾಗಿದ್ದಾರೆ ಎಂದು ಸಾರ್ವಜನಿಕರು ಗಂಭೀರ ಆರೋಪ ಮಾಡಿದ್ದಾರೆ. ಸಾರ್ವಜನಿಕರಿಗೆ ನಿರಂತರ ಕಿರುಕುಳ ನೀಡುತ್ತಿದ್ದ ಈ ದಂಧೆಯು, ಇಂದು ಸ್ವತಃ ತನ್ನದೇ ಲಾರಿಯ ಚಾಲಕನ ಬಲಿ ಪಡೆದಂತಾಗಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Share This Article
Leave a Comment