ಬೆಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾದ ಅಸಹಜ ಸಾವು ಪ್ರಕರಣಗಳ ಕುರಿತ ತನಿಖೆಯನ್ನು ಶೀಘ್ರ ಪೂರ್ಣಗೊಳಿಸಲು ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳ, ಧರ್ಮಾಧಿಕಾರಿ ಡಿ ವೀರೇಂದ್ರ ಹೆಗ್ಗಡೆ ಮತ್ತವರ ಕುಟುಂಬದ ವಿರುದ್ಧ ವ್ಯವಸ್ಥಿತ ಪಿತೂರಿ ನಡೆಸಿದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ವಿಶೇಷ ತನಿಖಾ ದಳಕ್ಕೆ (ಎಸ್‌ಐಟಿ) ನಿರ್ದೇಶಿಸುವಂತೆ ಕೋರಿ ಪ್ರಕರಣದ ಆರೋಪಿ ಸಿ.ಎನ್. ಚಿನ್ನ ಕರ್ನಾಟಕ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಪ್ರಕರಣದಲ್ಲಿ ತನ್ನನ್ನು ಒಬ್ಬನನ್ನೇ ಬಲಿಪಶು ಮಾಡಲಾಗಿದ್ದು, ನಿಜವಾದ ಪಿತೂರಿ ನಡೆಸಿದವರ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಚಿನ್ನ ಅರ್ಜಿಯಲ್ಲಿ ಆರೋಪಿಸಿದ್ದಾರೆ.


ಮಂಡ್ಯ ಮೂಲದ, ಪ್ರಸ್ತುತ ಧರ್ಮಸ್ಥಳ ವಾಸ್ತವ್ಯ ಹೊಂದಿರುವ ಸಿ.ಎನ್. ಚಿನ್ನ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರ ಏಕಸದಸ್ಯ ಪೀಠ ಗುರುವಾರ ವಿಚಾರಣೆ ನಡೆಸಿತು. ಕೆಲ ಕಾಲ ಅರ್ಜಿ ಆಲಿಸಿದ ಪೀಠವು ಪ್ರತಿವಾದಿಗಳಾದ ರಾಜ್ಯ ಗೃಹ ಇಲಾಖೆ, ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಎಸ್‌ಐಟಿ ಮುಖ್ಯಸ್ಥರು ಹಾಗೂ ಧರ್ಮಸ್ಥಳ ಪೊಲೀಸರಿಗೆ ನೋಟಿಸ್ ಜಾರಿಗೊಳಿಸಿ ವಿಚಾರಣೆಯನ್ನು ಜೂನ್ 29ಕ್ಕೆ ಮುಂದೂಡಿತು.

“ಸೂತ್ರಧಾರರು ಹೊರಗಿದ್ದಾರೆ. ನಾನೊಬ್ಬನೇ ಏಕೆ ಬಲಿಪಶು?”
ತಮ್ಮ ಅರ್ಜಿಯಲ್ಲಿ ಚಿನ್ನ, ಬುರುಡೆ ಪ್ರಕರಣ ಒಂದು ಷಡ್ಯಂತ್ರ ಎಂದು ತಿಳಿಸಿದ್ದು. ಈ ಕುರಿತು ತನಿಖೆ ನಡೆಸಿದ ಎಸ್‌ಐಟಿ ಕರ್ತವ್ಯಲೋಪ ಎಸಗಿರುವುದಾಗಿ ಆರೋಪಿಸಿದ್ದಾರೆ.. “ನನ್ನ ಪಾಡಿಗೆ ನಾನಿದ್ದೆ. ಇವರೇ ನನ್ನನ್ನು ಒತ್ತಾಯಪೂರ್ವಕವಾಗಿ ಕರೆತಂದು ಇದರಲ್ಲಿ ಸಿಲುಕಿಸಿದ್ದಾರೆ. ಇಷ್ಟೆಲ್ಲಾ ದೊಡ್ಡ ಮಟ್ಟದ ಪ್ರಭಾವಿಗಳು ಸೇರಿ ಷಡ್ಯಂತ್ರ ಹೆಣೆದಿದ್ದರೂ, ಜೈಲಿಗೆ ಹೋಗಿದ್ದು ಪರಿಶಿಷ್ಟ ಜಾತಿಗೆ ಸೇರಿದ ನಾನೊಬ್ಬನೇ. ಅಸಲಿ ಸೂತ್ರಧಾರರು ಈಗಲೂ ಆರಾಮಾಗಿದ್ದಾರೆ” ಎಂದು ಚಿನ್ನಯ್ಯ ತಮ್ಮ ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ.

ಎಸ್‌ಐಟಿ ವಿಳಂಬ ನೀತಿ ಮತ್ತು ಕರ್ತವ್ಯಲೋಪ ಆರೋಪ
ಎಫ್‌ಐಆರ್ ಸಂಖ್ಯೆ 39/2025 ರ ತನಿಖೆ ಆರಂಭವಾಗಿ ಇಷ್ಟು ದಿನಗಳಾದರೂ ಎಸ್‌ಐಟಿ ಅಂತಿಮ ವರದಿ ಸಲ್ಲಿಸದೆ ವಿಳಂಬ ಮಾಡುತ್ತಿದೆ ಎಂದು ಚಿನ್ನ ಆರೋಪಿಸಿದ್ದಾರೆ. ಪ್ರಾಥಮಿಕ ವರದಿಯಲ್ಲಿ ಅಸಲಿ ಆರೋಪಿಗಳ ಹೆಸರುಗಳನ್ನು ಸ್ಪಷ್ಟವಾಗಿ ಉಲ್ಲೇಖಿಸಿದ್ದರೂ, ಅವರ ವಿರುದ್ಧ ಎಸ್‌ಐಟಿ ಯಾವುದೇ ಸೂಕ್ತ ಕ್ರಮ ಕೈಗೊಂಡಿಲ್ಲ ಎಂದು ಅರ್ಜಿಯಲ್ಲಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
200 ಕೋಟಿ ರೂ. ಬಜೆಟ್ ಮತ್ತು ಕೇರಳದ ಹಣದ ಲಿಂಕ್ !
ಈ ಷಡ್ಯಂತ್ರದ ಹಿಂದೆ ಅಂತರರಾಜ್ಯ ಮಟ್ಟದ ಆರ್ಥಿಕ ವಹಿವಾಟು ನಡೆದಿರುವ ಬಗ್ಗೆ ಚಿನ್ನಯ್ಯ ಕೋರ್ಟ್‌ಗೆ ಮಾಹಿತಿ ನೀಡಿದ್ದಾರೆ. ಧರ್ಮಸ್ಥಳದ ವಿರುದ್ದ ಸುಳ್ಳು ಹಬ್ಬಿಸಲು ಒಟ್ಟು 200 ಕೋಟಿ ರೂಪಾಯಿಗಳ ಬಜೆಟ್ ಸಿದ್ಧವಾಗಿತ್ತು ಎಂದು ಅವರು ಹೇಳಿದ್ದಾರೆ. ಈ ಸಂಚಿನ ಭಾಗವಾಗಿ ತನಗೆ 50 ಲಕ್ಷ ರೂಪಾಯಿ ಕೊಡುವ ಆಮಿಷವನ್ನು ಮಹೇಶ್ ಶೆಟ್ಟಿ ತಿಮರೋಡಿ ಒಡ್ಡಿದ್ದ ಎಂದು ಚಿನ್ನ ಆರೋಪಿಸಿದ್ದಾರೆ. ಈ ಷಡ್ಯಂತ್ರಕ್ಕಾಗಿ ಕೇರಳದಿಂದ ಹಣ ಸಂದಾಯವಾಗಿದೆ. ಇದರೊಂದಿಗೆ ಚಿತ್ರದುರ್ಗದ ರಮಾ ನಾಗರಾಜ್ ಎಂಬುವವರೂ ಕೂಡ ಹಣ ನೀಡಿದ್ದಾರೆ. ತಮ್ಮ ಪತ್ನಿಯ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆಯಾಗಿರುವ ಹಾಗೂ ನಗದು ಹಣದ ವಹಿವಾಟಿನ ಸಂಪೂರ್ಣ ವಿವರಗಳನ್ನು ಚಿನ್ನಯ್ಯ ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ.
ನಟ ಪ್ರಕಾಶ್ ರಾಜ್ ಸೇರಿದಂತೆ ಪ್ರಭಾವಿ ವ್ಯಕ್ತಿಗಳ ಹೆಸರು ಪ್ರಸ್ತಾಪ ಚಿನ್ನಯ್ಯ ಸಲ್ಲಿಸಿರುವ ರಿಟ್ ಅರ್ಜಿಯಲ್ಲಿ ಪ್ರಭಾವಿ ವ್ಯಕ್ತಿಗಳು ಹಾಗೂ ಯೂಟ್ಯೂಬರ್‌ಗಳ ಹೆಸರುಗಳು ಉಲ್ಲೇಖವಾಗಿರುವುದು ತೀವ್ರ ಸಂಚಲನ ಮೂಡಿಸಿದೆ. “ಗಿರೀಶ್ ಮಟ್ಟೆಣ್ಣವರ್ ಹೇಳಿಕೊಟ್ಟಂತೆ ನೀನು ಹೇಳಿಕೆ ಕೊಡು, 29ನೇ ತಾರೀಕು ಬಂದು ನಿನ್ನನ್ನು ಅಪ್ಪಿಕೊಳ್ಳುತ್ತೇನೆ” ಎಂದು ನಟ ಪ್ರಕಾಶ್ ರಾಜ್ ಅವರು ತಮಿಳಿನಲ್ಲಿ ತಮಗೆ ಹೇಳಿದ್ದರು ಎಂಬುದಾಗಿ ಚಿನ್ನಯ್ಯ ಅರ್ಜಿಯಲ್ಲಿ ಉಲ್ಲೇಖಿಸಿದ್ದಾನೆ. ಜೊತೆಗೆ ಮಹೇಶ್ ಶೆಟ್ಟಿ ತಿಮರೋಡಿ, ಗಿರೀಶ್ ಮಟ್ಟೆಣ್ಣವರ್, ವಿಠಲಗೌಡ, ಮತ್ತು ಜಯಂತ್ ಈ ಇಡೀ ಷಡ್ಯಂತ್ರದ ಮುಖ್ಯ ರೂವಾರಿಗಳು ಎಂದು ಹೆಸರಿಸಲಾಗಿದೆ.
ಯೂಟ್ಯೂಬರ್‌ಗಳಾದ ಸಮೀರ್ ಎಂ.ಡಿ ಹಾಗೂ ಅಜಯ್ ಅಂಚನ್ ಎಂಬುವವರು ತಮ್ಮ ಸ್ವಾರ್ಥಕ್ಕೆ ಬೇಕಾದ ರೀತಿಯಲ್ಲಿ 30 ರಿಂದ 35 ವೀಡಿಯೋಗಳನ್ನು ಮೊದಲೇ ಮಾಡಿಕೊಂಡಿದ್ದರು. ಅವರು ತೋರಿಸಿದ ಸ್ಥಳಗಳನ್ನೇ ತಾನು ನಂತರ ಎಸ್‌ಐಟಿ ಅಧಿಕಾರಿಗಳಿಗೆ ತೋರಿಸಬೇಕಾಯಿತು ಎಂದು ಚಿನ್ನಯ್ಯ ದೂರಿದ್ದಾರೆ.
ಚಾಕು ತೋರಿಸಿ ಬೆದರಿಕೆ. ಒತ್ತೆಯಾಳಾಗಿಟ್ಟಿದ್ದ ಗ್ಯಾಂಗ್ ಆರೋಪ!
“ಧರ್ಮಸ್ಥಳದ ಧರ್ಮಾಧಿಕಾರಿಗಳ ವಿರುದ್ಧ ಸುಳ್ಳು ಹೇಳಲು ನನ್ನ ಆತ್ಮಸಾಕ್ಷಿ ಒಪ್ಪಲಿಲ್ಲ. ಆಗ ಮಹೇಶ್ ಶೆಟ್ಟಿ ತಿಮರೋಡಿ ಚಾಕುವಿನಿಂದ ನನ್ನನ್ನು ಕೊಲ್ಲಲು ಬಂದಿದ್ದ. ಹೇಳಿಕೊಟ್ಟಂತೆ ಕೇಳದಿದ್ದರೆ ನಿನ್ನ ಹೆಂಡತಿಯನ್ನು ಕೊಲ್ಲುತ್ತೇವೆ ಎಂದು ಹೆದರಿಸಿದ್ದರು. ಒಂದು ವೇಳೆ ತಪ್ಪು ಹೇಳಿಕೆ ನೀಡಿದರೆ, ಅದೇ ಜಾಗದಲ್ಲಿ ಹೂತು ಹಾಕುವುದಾಗಿ ಗ್ಯಾಂಗ್ ಬೆದರಿಕೆ ಹಾಕಿತ್ತು. ನನ್ನ ಕೈಗೆ ಬುರುಡೆ ಕೊಟ್ಟು ಫೋಟೋ ತೆಗೆಸಿಕೊಂಡಿದ್ದರು.
ಸುಜಾತಾ ಭಟ್ ಎಂಬುವವರ ಜೊತೆ ದೆಹಲಿಗೆ ಕರೆದೊಯ್ದು ಕಂಡಕಂಡಲ್ಲಿ ಸಹಿ ಹಾಕಿಸಿಕೊಂಡರು.
ವಕೀಲರ ಕಚೇರಿಯಲ್ಲಿ ಕೂರಿಸಿ ಹೇಗೆ ಹೇಳಿಕೆ ನೀಡಬೇಕೆಂದು ತರಬೇತಿ ನೀಡಲಾಗಿತ್ತು. ನನ್ನನ್ನು ಸಂಪೂರ್ಣವಾಗಿ ಒತ್ತೆಯಾಳುವಿನಂತೆ ಇರಿಸಿಕೊಳ್ಳಲಾಗಿತ್ತು. ನನಗೆ ಹಾಕಲಾಗಿದ್ದ ಮಾಸ್ಕ್‌ನ ಹಿಂದೆ ಹೆಡ್‌ಫೋನ್ ಇರಿಸಲಾಗಿತ್ತು. ಅದರಲ್ಲಿ ಕ್ಷಣಕ್ಷಣಕ್ಕೂ ನಾನು ಏನು ಮಾತನಾಡಬೇಕು ಎಂಬ ಸೂಚನೆಗಳು ಬರುತ್ತಿದ್ದವು. ಈ ಮಾನಸಿಕ ಕಿರುಕುಳ ತಾಳಲಾರದೆ ನಾನು ಒಮ್ಮೆ ಆತ್ಮಹತ್ಯೆಗೂ ಯತ್ನಿಸಿದ್ದೆ” ಎಂದು ಚಿನ್ನಯ್ಯ ಕೋರ್ಟ್‌ಗೆ ಸಲ್ಲಿಸಿದ ಅರ್ಜಿಯಲ್ಲಿ ಉಲ್ಲೇಖಿಸಿದ್ದಾನೆ.
“ತಪ್ಪಿತಸ್ಥರೆಲ್ಲರೂ ಹೊರಗಡೆ ಮುಕ್ತವಾಗಿ ತಿರುಗಾಡುತ್ತಿದ್ದಾರೆ. ಕಾನೂನು ಕ್ರಮ ಜರುಗಿಸುವುದಾದರೆ ಇಡೀ ಷಡ್ಯಂತ್ರ ರೂಪಿಸಿದ ಎಲ್ಲರ ವಿರುದ್ಧವೂ ಕಠಿಣ ಕ್ರಮ ಕೈಗೊಳ್ಳಬೇಕು” ಎಂದು ಚಿನ್ನಯ್ಯ ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ. ಸದ್ಯ ಹೈಕೋರ್ಟ್ ಸರ್ಕಾರ ಮತ್ತು ಎಸ್‌ಐಟಿಗೆ ನೋಟಿಸ್ ನೀಡಿರುವುದರಿಂದ, ಜೂನ್ 29ರ ಮುಂದಿನ ವಿಚಾರಣೆಯೊಳಗೆ ಎಸ್‌ಐಟಿ ಯಾವ ರೀತಿಯ ವರದಿ ಸಲ್ಲಿಸಲಿದೆ ಮತ್ತು ಈ ಹೈಪ್ರೊಫೈಲ್ ಪ್ರಕರಣ ಯಾವ ತಿರುವು ಪಡೆದುಕೊಳ್ಳಲಿದೆ ಎಂಬುದು ಕಾದು ನೋಡಬೇಕಿದೆ.


