ಉಡುಪಿ : ನಗರದ ಕರಾವಳಿ ಬೈಪಾಸ್ ಬಳಿ ಬೇಕರಿ ನಡೆಸಿಕೊಂಡಿದ್ದ ಮಾಲೀಕನೊಬ್ಬನ ಮೇಲೆ ಪಕ್ಕದ ಬೇಕರಿ ಮಾಲೀಕನೇ ಒಳನುಗ್ಗಿ ಚೂರಿಯಿಂದ ಹಲ್ಲೆ ನಡೆಸಿರುವ ಘಟನೆ ನಡೆದಿದೆ. ಹಲ್ಲೆಯಿಂದ ಗಾಯಗೊಂಡಿರುವ ಬೇಕರಿ ಮಾಲೀಕ ಮುರಳೀಧರ (35) ನೀಡಿದ ದೂರಿನ ಮೇರೆಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಮೂಡನಿಡಂಬೂರು ಗ್ರಾಮದ ಕರಾವಳಿ ಬೈಪಾಸ್ ಸಮೀಪದ ‘ಸಾಗರ್ ಗಂಗಾ’ ಕಟ್ಟಡದ ನೆಲ ಅಂತಸ್ತಿನಲ್ಲಿ ಕಿದಿಯೂರು ಗ್ರಾಮದ ನಿವಾಸಿ ಮುರಳೀಧರ ಅವರು ಕಳೆದ 20 ವರ್ಷಗಳಿಂದ ‘ಪೂಜಾ ಬೇಕರಿ’ ಎಂಬ ಅಂಗಡಿಯನ್ನು ನಡೆಸಿಕೊಂಡು ಬರುತ್ತಿದ್ದಾರೆ. ಇವರ ಅಂಗಡಿಗೆ ಹೊಂದಿಕೊಂಡೇ ಅಶೋಕ ಎಂಬಾತ ಕಳೆದ ಒಂದು ವರ್ಷದಿಂದ ‘ಕೃಷ್ಣ ಬೇಕರಿ’ ಎಂಬ ಅಂಗಡಿಯನ್ನು ಆರಂಭಿಸಿದ್ದನು.

ಮೇ 23ರಂದು ಮಧ್ಯಾಹ್ನ 12:30 ರ ಸುಮಾರಿಗೆ ಮುರಳೀಧರ ಅವರು ತಮ್ಮ ಅಂಗಡಿಯಲ್ಲಿ ವ್ಯಾಪಾರ ಮಾಡುತ್ತಿದ್ದಾಗ, ಅಶೋಕನು ಒಮ್ಮೇಲೇ ಪೂಜಾ ಬೇಕರಿ ಮುಂದೆ ಬಂದು ಅವಾಚ್ಯ ಶಬ್ದಗಳಿಂದ ಬೈದಿದ್ದಾನೆ. ಅಷ್ಟಕ್ಕೇ ನಿಲ್ಲದೆ, ಏಕಾಏಕಿ ಅಂಗಡಿಯೊಳಗೆ ಅಕ್ರಮವಾಗಿ ನುಗ್ಗಿ ಮುರಳೀಧರ ಅವರ ಕಾಲರ್ ಪಟ್ಟಿ ಹಿಡಿದು ಕೆನ್ನೆಗೆ ಹಾಗೂ ಕುತ್ತಿಗೆಗೆ ಕೈಯಿಂದ ಹೊಡೆದಿದ್ದಾನೆ. ಅಲ್ಲದೆ ಕಾಲಿನಿಂದ ತುಳಿದು ನೆಲಕ್ಕೆ ಬೀಳಿಸಿದ್ದಾನೆ.

ಮುರಳೀಧರ ಅವರು ನೆಲದಿಂದ ಮೇಲೆ ಏಳಲು ಯತ್ನಿಸಿದಾಗ, ಅಶೋಕನು ತಾನು ತಂದಿದ್ದ ಚೂರಿಯಿಂದ ಅವರ ಎದೆ ಹಾಗೂ ಕುತ್ತಿಗೆ ಭಾಗಕ್ಕೆ ಚುಚ್ಚಿ ಹಲ್ಲೆ ನಡೆಸಿದ್ದಾನೆ. ದಾಳಿಯಿಂದಾಗಿ ಮುರಳೀಧರ ಅವರಿಗೆ ತೀವ್ರ ಒಳನೋವು ಹಾಗೂ ಗಾಯಗಳಾಗಿವೆ.
ಈ ಘಟನೆ ಕುರಿತಂತೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 69/2026 ರಂತೆ ಭಾರತೀಯ ನ್ಯಾಯ ಸಂಹಿತೆಯ (BNS) ವಿವಿಧ ಸೆಕ್ಷನ್ಗಳಾದ 115(2) (ಸ್ವಯಂಪ್ರೇರಿತವಾಗಿ ಗಾಯಗೊಳಿಸುವುದು), 118(1) (ಅಪಾಯಕಾರಿ ಆಯುಧಗಳಿಂದ ಗಾಯಗೊಳಿಸುವುದು), 329(4) (ಅಕ್ರಮ ಪ್ರವೇಶ ಮತ್ತು ಹಲ್ಲೆ), 352 ಹಾಗೂ 351(2) (ಕ್ರಿಮಿನಲ್ ಬೆದರಿಕೆ) ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.


