ಮಂಗಳೂರು : ಕ್ರಿಪ್ಟೋ ಕರೆನ್ಸಿ ಹೂಡಿಕೆಯ ಹೆಸರಿನಲ್ಲಿ ನೂರು ದಿನಗಳಲ್ಲಿ ಹಣ ದುಪ್ಪಟ್ಟು ಮಾಡಿಕೊಡುವುದಾಗಿ ನಂಬಿಸಿ ಮಂಗಳೂರಿನ ಖಾಸಗಿ ಕಂಪನಿಯೊಂದರ ಸಾಫ್ಟ್ವೇರ್ ಡೆವಲಪರ್ ಯುವತಿಯೊಬ್ಬರಿಗೆ ಬರೋಬ್ಬರಿ 6,42,000 ರೂಪಾಯಿ ಆನ್ಲೈನ್ ವಂಚನೆ ಮಾಡಲಾದ ಘಟನೆ ಬೆಳಕಿಗೆ ಬಂದಿದೆ. ವಂಚನೆಗೆ ಒಳಗಾದ 28 ವರ್ಷದ ಯುವತಿ ಈ ಕುರಿತು ಸೈಬರ್ ಪೊಲೀಸ್ ಠಾಣೆಗೆ ಅಧಿಕೃತ ದೂರು ನೀಡಿದ್ದಾರೆ.


ದೂರಿನ ಸಾರಾಂಶದ ಪ್ರಕಾರ, ಮಂಗಳೂರಿನ ಖಾಸಗಿ ಕಂಪನಿಯಲ್ಲಿ ಉದ್ಯೋಗಿಯಾಗಿರುವ ಪಿರ್ಯಾದಿದಾರರಿಗೆ 2026ರ ಮಾರ್ಚ್ ತಿಂಗಳಿನಲ್ಲಿ ಅವರ ಪರಿಚಯಸ್ಥರೊಬ್ಬರು ವಾಟ್ಸ್ ಆಪ್ (WhatsApp) ಸಂದೇಶವೊಂದನ್ನು ಕಳುಹಿಸಿದ್ದರು. ಅದರಲ್ಲಿ ‘BG GOLD’ ಎಂಬ ಆನ್ಲೈನ್ ಕ್ರಿಪ್ಟೋ ಟ್ರೇಡಿಂಗ್ನಲ್ಲಿ ಹಣ ಹೂಡಿಕೆ ಮಾಡಿದರೆ ಕೇವಲ 100 ದಿನಗಳಲ್ಲಿ ದುಪ್ಪಟ್ಟು ಲಾಭ ಗಳಿಸಬಹುದು ಎಂದು ತಿಳಿಸಲಾಗಿತ್ತು. ಇದನ್ನು ಸತ್ಯವೆಂದು ನಂಬಿದ ಯುವತಿ, ಸಂದೇಶದಲ್ಲಿದ್ದ ಲಿಂಕ್ ಮುಖಾಂತರ ‘dsj & gold bs’ ಎಂಬ ಅಪ್ಲಿಕೇಶನ್ಗಳನ್ನು ಮೊಬೈಲ್ನಲ್ಲಿ ಡೌನ್ಲೋಡ್ ಮಾಡಿಕೊಂಡಿದ್ದರು.

ಅಪ್ಲಿಕೇಶನ್ನಲ್ಲಿ ಯೂಸರ್ ನೇಮ್ ಮತ್ತು ಪಾಸ್ವರ್ಡ್ ಕ್ರಿಯೇಟ್ ಮಾಡಿದ ನಂತರ ಯುವತಿಗೆ ಸೈಬರ್ ವಂಚಕರು ಟ್ರೇಡಿಂಗ್ ಸಿಗ್ನಲ್ಗಳನ್ನು ಕಳುಹಿಸುತ್ತಿದ್ದರು. ಅದರಂತೆ ಆನ್ಲೈನ್ನಲ್ಲಿ ನಕಲಿ ಟ್ರೇಡಿಂಗ್ ಮಾಡಿದಾಗ ಯುವತಿಯ ಡಿಜಿಟಲ್ ವ್ಯಾಲೆಟ್ನಲ್ಲಿ ಹಣ ಜಮಾವಣೆಯಾದಂತೆ ಭಾರಿ ಮೊತ್ತದ ಬ್ಯಾಲೆನ್ಸ್ ತೋರಿಸಲಾಗಿತ್ತು. ಇದನ್ನು ನಿಜವಾದ ಲಾಭವೆಂದು ನಂಬಿದ ಯುವತಿ, ವ್ಯಾಲೆಟ್ನಲ್ಲಿರುವ ಮೊತ್ತವನ್ನು ಹಿಂಪಡೆಯಲು ಮುಂದಾಗಿದ್ದಾರೆ. ಆದರೆ, ಆಪ್ನಲ್ಲಿ ಹಣ ಹಿಂಪಡೆಯಲು ಮತ್ತಷ್ಟು ಹೂಡಿಕೆ ಮಾಡಬೇಕು ಮತ್ತು 30 ದಿನಗಳಲ್ಲಿ ದುಪ್ಪಟ್ಟು ಹಣ ಸಿಗಲಿದೆ ಎಂಬ ನಕಲಿ ಸೂಚನೆಗಳನ್ನು ಫ್ಲ್ಯಾಶ್ ಮಾಡಲಾಗಿತ್ತು.
ಇದರಿಂದ ಪ್ರೇರೇಪಿತರಾದ ಯುವತಿ ದಿನಾಂಕ 28-02-2026 ರಿಂದ 11-04-2026 ರವರೆಗೆ ಹಂತ ಹಂತವಾಗಿ ಒಟ್ಟು 6,42,000 ರೂಪಾಯಿಗಳನ್ನು ತನ್ನ ಐಸಿಐಸಿಐ (ICICI) ಬ್ಯಾಂಕ್ ಖಾತೆಯಿಂದ ಅಪರಿಚಿತ ವಂಚಕರ ಬ್ಯಾಂಕ್ ಖಾತೆಗೆ ಯುಪಿಐ (UPI) ಮುಖಾಂತರ ವರ್ಗಾಯಿಸಿದ್ದಾರೆ.

ಹಣ ವರ್ಗಾವಣೆಯಾದ ಕೆಲವೇ ದಿನಗಳಲ್ಲಿ ಸದ್ರಿ ಟ್ರೇಡಿಂಗ್ ಆಪ್ ತಾತ್ಕಾಲಿಕವಾಗಿ ಬಂದ್ ಆಗಿದೆ. ಇದರಿಂದ ಆತಂಕಗೊಂಡ ಯುವತಿ ತನ್ನ ಸ್ನೇಹಿತರ ಬಳಿ ವಿಚಾರಿಸಿದಾಗ, ಆ ಸ್ನೇಹಿತರು ಸಹ ಇದೇ ನಕಲಿ ಟ್ರೇಡಿಂಗ್ ಆಪ್ನಲ್ಲಿ ಹಣ ಹೂಡಿಕೆ ಮಾಡಿ ಲಕ್ಷಾಂತರ ರೂಪಾಯಿ ಕಳೆದುಕೊಂಡು ಮೋಸ ಹೋಗಿರುವುದು ಬೆಳಕಿಗೆ ಬಂದಿದೆ. ಸದ್ಯ ಯಾರೋ ಅಪರಿಚಿತ ಸೈಬರ್ ಅಪರಾಧಿಗಳು ಆನ್ಲೈನ್ ಮೂಲಕ ನಕಲಿ ಟ್ರೇಡಿಂಗ್ ಆಪ್ ಸೃಷ್ಟಿಸಿ ವಂಚನೆ ಎಸಗಿರುವುದು ದೃಢಪಟ್ಟಿದ್ದು, ಮಂಗಳೂರಿನ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಐಟಿ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಪೊಲೀಸರು ವಂಚಕರ ಬ್ಯಾಂಕ್ ಖಾತೆ ಹಾಗೂ ಯುಪಿಐ ಐಡಿಗಳನ್ನು ಆಧರಿಸಿ ತನಿಖೆ ಚುರುಕುಗೊಳಿಸಿದ್ದಾರೆ.


