ಮುಜಫರಾಬಾದ್ : 2019ರ ಪುಲ್ವಾಮಾ ಭಯೋತ್ಪಾದಕ ದಾಳಿಯ ಹಿಂದಿನ ಮಾಸ್ಟರ್ ಮೈಂಡ್ಗಳಲ್ಲಿ ಒಬ್ಬನೆಂದು ಗುರುತಿಸಲ್ಪಟ್ಟ ಹಮ್ಜಾ ಬುರ್ಹಾನ್, ಪಾಕಿಸ್ತಾನ ಆಕ್ರಮಿತ ಕಾಶ್ಮೀರದ (ಪಿಒಕೆ) ಮುಜಫರಾಬಾದ್ನಲ್ಲಿ ಅಪರಿಚಿತ ಬಂದೂಕುಧಾರಿಗಳಿಂದ ಕೊಲ್ಲಲ್ಪಟ್ಟಿದ್ದಾನೆ. ಹಮ್ಜಾ ಬುರ್ಹಾನ್ ತನ್ನ ಕಚೇರಿಯಲ್ಲಿ ಕುಳಿತಿದ್ದಾಗ ಆತನಿಗೆ ಮನಬಂದಂತೆ ಗುಂಡು ಹಾರಿಸಲಾಯಿತು.


2019 ರಲ್ಲಿ ಪುಲ್ವಾಮಾದಲ್ಲಿ ಭಾರತೀಯ ಸೈನಿಕರ ಬೆಂಗಾವಲು ಪಡೆಯ ಮೇಲೆ ದಾಳಿ ನಡೆಸಲಾಯಿತು.ಆ ದಾಳಿಯಲ್ಲಿ 40ಕ್ಕೂ ಹೆಚ್ಚು ಸೈನಿಕರು ಹುತಾತ್ಮರಾಗಿದ್ದರು. ಭಯೋತ್ಪಾದಕ ಹಮ್ಜಾ ಬುರ್ಹಾನ್ ಪುಲ್ವಾಮಾ ಭಯೋತ್ಪಾದಕ ದಾಳಿಯ ಮಾಸ್ಟರ್ ಮೈಂಡ್ಗಳಲ್ಲಿ ಒಬ್ಬನಾಗಿದ್ದ. ಆತ ಶಿಕ್ಷಕನೆಂದು ಗುರುತಿಸಲ್ಪಟ್ಟಿದ್ದ, ಬೋಧನಾ ವೃತ್ತಿಯ ಸೋಗಿನಲ್ಲಿ ಭಯೋತ್ಪಾದಕ ಚಟುವಟಿಕೆಗಳನ್ನು ನಡೆಸುತ್ತಿದ್ದ

2019ರ ನಂತರವೂ ಈತ ಅನೇಕ ಭಯೋತ್ಪಾದಕ ದಾಳಿಗಳಲ್ಲಿ ಸಕ್ರಿಯ ಪಾತ್ರ ವಹಿಸಿದ್ದನು. ಅವನು ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಅನೇಕ ಭಯೋತ್ಪಾದಕ ಸಂಘಟನೆಗಳಿಗೆ ತರಬೇತಿ ನೀಡುತ್ತಿದ್ದನು. ಇದರೊಂದಿಗೆ, ಗಡಿ ಪ್ರದೇಶಗಳಿಂದ ಒಳನುಸುಳುವಿಕೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದ. ಪುಲ್ವಾಮಾ ದಾಳಿಗೆ ಪ್ರತೀಕಾರವಾಗಿ ಭಾರತ ವಾಯುದಾಳಿ ನಡೆಸಿತು. ಬಾಲಕೋಟ್ನಲ್ಲಿರುವ ಭಯೋತ್ಪಾದಕ ಶಿಬಿರಗಳನ್ನು ನಾಶಪಡಿಸಲಾಯಿತು.

ಕಳೆದ ಕೆಲವು ತಿಂಗಳುಗಳಿಂದ ಪಾಕಿಸ್ತಾನದಲ್ಲಿ ಭಯೋತ್ಪಾದಕರು ಮತ್ತು ಅವರ ನಾಯಕರನ್ನು ಅಪರಿಚಿತ ವ್ಯಕ್ತಿಗಳು ಹತ್ಯೆ ಮಾಡುತ್ತಿದ್ದಾರೆ. ಪಾಕಿಸ್ತಾನ ಸಂಘರ್ಷ ಮತ್ತು ಭದ್ರತಾ ಅಧ್ಯಯನ ಸಂಸ್ಥೆ (PICSS) ಮತ್ತು ಸಂಶೋಧನಾ ಮತ್ತು ಭದ್ರತಾ ಅಧ್ಯಯನ ಕೇಂದ್ರ (CRSS) ದಲ್ಲಿ ಲಭ್ಯವಿರುವ ಮಾಹಿತಿಯ ಪ್ರಕಾರ, 2025 ರಲ್ಲಿ ಕೊಲ್ಲಲ್ಪಟ್ಟ ಭಯೋತ್ಪಾದಕರ ಸಂಖ್ಯೆ 2115 ರಿಂದ 2597 ರ ನಡುವೆ ಇದೆ. ಲಷ್ಕರ್-ಎ-ತೈಬಾ, ಜೈಶ್-ಎ-ಮೊಹಮ್ಮದ್, ಹಿಜ್ಬುಲ್ ಮುಜಾಹಿದ್ದೀನ್ ಕಮಾಂಡರ್ಗಳು ಮತ್ತು ಭಯೋತ್ಪಾದಕರನ್ನು ಅಪರಿಚಿತ ದಾಳಿಕೋರರು ಹತ್ಯೆ ಮಾಡಿದ್ದಾರೆ.


