ಮಂಗಳೂರು: ಆಟೋದಲ್ಲಿ ಮರೆತಿದ್ದ ₹25 ಲಕ್ಷ ಮೌಲ್ಯದ ಚಿನ್ನಾಭರಣವಿದ್ದ ಬ್ಯಾಗ್ ವಾರಸುದಾರರಿಗೆ ಹಸ್ತಾಂತರ

Prakhara News
1 Min Read

ಮಂಗಳೂರು : ಆಟೋ ರಿಕ್ಷಾದಲ್ಲಿ ಪ್ರಯಾಣಿಕರು ಮರೆತು ಬಿಟ್ಟಿದ್ದ ಸುಮಾರು ₹25 ಲಕ್ಷ ಮೌಲ್ಯದ ಚಿನ್ನಾಭರಣಗಳಿದ್ದ ಬ್ಯಾಗ್ ಅನ್ನು ಮಂಗಳೂರು ಪೂರ್ವ (ಕದ್ರಿ) ಠಾಣೆಯ ಪೊಲೀಸರು ಮತ್ತು ಆಟೋ ಚಾಲಕನ ಪ್ರಾಮಾಣಿಕತೆಯಿಂದ ವಾರಸುದಾರರಿಗೆ ಸುರಕ್ಷಿತವಾಗಿ ಹಸ್ತಾಂತರಿಸಲಾಗಿದೆ.

ಮಲ್ಲಿಕಟ್ಟೆ ನಿವಾಸಿ ಶ್ರೀಮತಿ ಲೋಲಿಟ್ಟ ಹಾಗೂ ಅವರ ಕುಟುಂಬದವರು ಮಲ್ಲಿಕಟ್ಟೆಯಿಂದ ಮೇರಿ ಹಿಲ್ ಕಡೆಗೆ ಆಟೋ ರಿಕ್ಷಾದಲ್ಲಿ ಪ್ರಯಾಣಿಸಿದ್ದರು. ಈ ಸಂದರ್ಭದಲ್ಲಿ ಚಿನ್ನಾಭರಣಗಳಿದ್ದ ತಮ್ಮ ವ್ಯಾನಿಟಿ ಬ್ಯಾಗ್ ಅನ್ನು ಅವರು ಆಟೋದಲ್ಲಿಯೇ ಮರೆತು ಇಳಿದಿದ್ದರು. ಬ್ಯಾಗ್ ನಾಪತ್ತೆಯಾಗಿರುವುದು ಗಮನಕ್ಕೆ ಬರುತ್ತಿದ್ದಂತೆ ಗಾಬರಿಗೊಂಡ ಕುಟುಂಬದವರು ತಕ್ಷಣ ಮಂಗಳೂರು ಪೂರ್ವ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದರು.


ದೂರು ಸ್ವೀಕರಿಸಿದ ತಕ್ಷಣವೇ ಕಾರ್ಯಪ್ರವೃತ್ತರಾದ ಪೊಲೀಸರು, ಆಟೋ ರಿಕ್ಷಾವನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾದರು. ಆಟೋ ಚಾಲಕ ರೋಷನ್ ಅವರು ಕೂಡ ಬ್ಯಾಗ್ ಸಿಕ್ಕ ತಕ್ಷಣ ಪ್ರಾಮಾಣಿಕತೆ ಮೆರೆದು ಪೊಲೀಸರಿಗೆ ಸಹಕರಿಸಿದರು. ಆಟೋ ಚಾಲಕನ ಸಹಕಾರದಿಂದ ಪತ್ತೆಯಾದ ಬ್ಯಾಗ್‌ನಲ್ಲಿದ್ದ ₹25 ಲಕ್ಷ ಮೌಲ್ಯದ ಆಭರಣಗಳನ್ನು ಮಂಗಳೂರು ಪೂರ್ವ ಪೊಲೀಸ್ ಉಪನಿರೀಕ್ಷಕರ ಸಮ್ಮುಖದಲ್ಲಿ ಲೋಲಿಟ್ಟ ಅವರಿಗೆ ಹಸ್ತಾಂತರಿಸಲಾಯಿತು. ಪೊಲೀಸರ ತ್ವರಿತ ಸ್ಪಂದನೆ ಮತ್ತು ಚಾಲಕ ರೋಷನ್ ಅವರ ಪ್ರಾಮಾಣಿಕತೆಗೆ ಸಾರ್ವಜನಿಕ ವಲಯದಲ್ಲಿ ಶ್ಲಾಘನೆ ವ್ಯಕ್ತವಾಗಿದೆ.

Share This Article
Leave a Comment