ಮಂಗಳೂರು: ಸೆಕೆಂಡ್ ಹ್ಯಾಂಡ್ ಕಾರ್ ಶೋಂರೂನಲ್ಲಿ ಎರಡು ಕಾರನ್ನು ಕಳ್ಳತನ ಮಾಡಿದ್ದ ಆರೋಪಿಯನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ. ಶಫೀಕ್, ಬಂಧಿತ ಆರೋಪಿ.
ಜುಲೈ 12ರ ರಾತ್ರಿ ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯ ಹೊಸಬೆಟ್ಟಿನ ಕಾರ್ ಮಾರ್ಟ್ ಎಂಬ ಹೆಸರಿನ ಹಳೆಯ ವಾಹನಗಳ ಖರೀದಿ ಮತ್ತು ಮಾರಾಟದ ಶೋರೂಂಗ ದ್ವಿ ಚಕ್ರದಲ್ಲಿ ಬಂದ ಕಳ್ಳರು ಶೋರೂಂನ ಕಛೇರಿಯ ಗ್ಲಾಸ್ ನ ಡೋರ್ ನ್ನು ಸುತ್ತಿಗೆಯಿಂದ ಜಖಂಗೊಳಿಸಿ ಸಂಪೂರ್ಣ ಪುಡಿ ಮಾಡಿ ಒಳಪ್ರವೇಶಿಸಿದ್ದರು.
ಕಛೇರಿಯೊಳಗೆ ಟೇಬಲ್ ಮೇಲೆ ಇದ್ದ ಒನ್ ಪ್ಲಾಸ್ ಮೊಬೈಲ್, ಎಚ್ ಪಿ ಕಂಪನಿಯ ಲ್ಯಾಪ್ ಟಾಪ್ ಹಾಗೂ ಎಚ್ ಪಿ ಕಂಪನಿಯ ಪ್ರಿಂಟರ್ ಹಾಗೂ ಶೋರೂಂನ ಪಾರ್ಕ್ ನಲ್ಲಿ ನಿಲ್ಲಿಸಿದ್ದ ಕ್ರೆಟಾ ಕಾರು ಹಾಗೂ ಸ್ವಿಫ್ಟ್ ಕಾರನ್ನು ಕಳವು ಮಾಡಿಕೊಂಡು ಹೋಗಿದ್ದರು. ಈ ಬಗ್ಗೆ ಕಾರ್ ಮಾರ್ಟ್ ಮಾಲಕರಾದ ಅಬೀದ್ ಅಹಮ್ಮದ್ ಸೂರಲ್ಪಾಡಿ ಇವರು ನೀಡಿದ ದೂರಿನಂತೆ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ತನಿಖೆ ವೇಳೆ ಪೊಲೀಸರು ಅಪ್ರಾಪ್ತ ಬಾಲಕನಿಂದ ಕಳವಾದ ಸ್ವಿಫ್ಟ್ ಕಾರನ್ನು ವಶಕ್ಕೆ ಪಡೆದಿದ್ದಾರೆ. ಆತ ನೀಡಿದ ಮಾಹಿತಿಯಂತೆ ಮಂಗಳೂರು ತಾಲೂಕಿನ ಕಿನ್ನಿಪದವಿನ ಶಫೀಕ್ ಎಂಬಾತನನ್ನು ದ್ವಿ ಚಕ್ರದಲ್ಲಿ ಬರುವಾಗ ಮರಕಡ ಬಸ್ ನಿಲ್ದಾಣದ ಬಳಿ ಬಂಧಿಸಲಾಗಿದೆ. ತೊಕ್ಕೊಟ್ಟು ಬಸ್ ನಿಲ್ದಾಣದ ಬಳಿ ಕ್ರೆಟಾ ಕಾರನ್ನು ಹಾಗೂ ಕೃತ್ಯಕ್ಕೆ ಉಪಯೋಗಿಸಿದ ಸುತ್ತಿಗೆ, ಕೃತ್ಯದ ಸಮಯ ತಲೆಗೆ ಧರಿಸಿದ ಹೆಲ್ಮೆಟ್, ರೈನ್ ಕೋಟ್ , ಕೈಗೆ ಧರಿಸಿದ ಗೌಸ್, ಮುಖಕ್ಕೆ ಹಾಕಿದ ಮಾಸ್ಕನ್ನು ವಶಕ್ಕೆ ಪಡೆಯಲಾಗಿದೆ. ಆರೋಪಿ ಮಹಮ್ಮದ್ ಶಫೀಕ್ @ ಶಫೀಕ್ ನು ಒಂದು ವರ್ಷದ ಹಿಂದೆ ಮೂಡಬಿದ್ರಿ ಠಾಣಾ ವ್ಯಾಪ್ತಿಯ ಕೆಸರುಗದ್ದೆ ಎಂಬಲ್ಲಿ ಮನೆಯಿಂದ ಕಳ್ಳತನ ಮಾಡಿದ್ದ ದ್ವಿ ಚಕ್ರ ವಾಹನವನ್ನು ಆತನಿಂದ ವಶಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಂಡಿರುವ ವಾಹನಗಳ ಒಟ್ಟು ಅಂದಾಜು ಮೌಲ್ಯ ರೂಪಾಯಿ 15.50 ಲಕ್ಷ ಆಗಿದೆ. ಆರೋಪಿ ಮಹಮ್ಮದ್ ಶಫೀಕ್ ಶಫೀಕ್ ನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಪ್ರಕರಣದ ವಿಚಾರಣೆಯ ಬಗ್ಗೆ 3 ದಿನಗಳವರೆಗೆ ಪೊಲೀಸ್ ಕಸ್ಟಡಿಗೆ ಪಡೆಯಲಾಗಿದೆ.