
ಉಳ್ಳಾಲ:ಹಾಡಹಗಲೇ ಆಗಂತುಕ ಮಹಿಳೆಯೋರ್ವಳು ಒಂಟಿ ಮನೆಗೆ ನುಗ್ಗಿ ವೃದ್ಧೆಯನ್ನ ದಿಂಬಿನಿಂದ ಅದುಮಿ ಕತ್ತಲ್ಲಿದ್ದ 22 ಗ್ರಾಮ್ ಚಿನ್ನದ ಸರ ದರೋಡೆಗೈದು ಪರಾರಿಯಾಗಿರುವ ಘಟನೆ ಕುಂಪಲ ಮೂರುಕಟ್ಟೆ ಒಂದನೇ ಅಡ್ಡ ರಸ್ತೆಯ ಮಿತ್ರನಗರ ಎಂಬಲ್ಲಿ ನಡೆದಿದೆ. ಮಿತ್ರನಗರದ ಒಂಟಿ ಮನೆ ನಿವಾಸಿ ಸುಶೀಲ(76)ಎಂಬವರ ಕತ್ತಲ್ಲಿದ್ದ 22 ಗ್ರಾಮ್ ತೂಕದ ಹವಳ ಪೋಣಿತ ಚಿನ್ನದ ಸರವನ್ನ ದರೋಡೆಗೈಯಲಾಗಿದೆ.ಸುಶೀಲ ಅವರ ಪತಿ ಉಗ್ಗಪ್ಪ ಮೂಲ್ಯ ಅವರು ಕೆಲ ವರುಷಗಳ ಹಿಂದೆ ಸಾವನ್ನಪ್ಪಿದ್ದರು.ದಂಪತಿಗೆ ಮಕ್ಕಳಿರಲಿಲ್ಲ ಹಾಗಾಗಿ ಸುಶೀಲ ಅವರು ಮನೆಯಲ್ಲಿ ಒಂಟಿಯಾಗಿ ವಾಸಿಸುತ್ತಿದ್ದರು. ಇಂದು ಮದ್ಯಾಹ್ನ 2.45 ರ ವೇಳೆ ಸುಶೀಲ ಅವರು ಮನೆಯ ಹಾಲ್ ನಲ್ಲಿ ಇದ್ದ ಮಂಚದಲ್ಲಿ ಗೋಡೆ ಕಡೆ ಮುಖ ಹಾಕಿ ಮಲಗಿದ್ದ ಸಂದರ್ಭ ಮಹಿಳೆಯೋರ್ವಳು ನುಗ್ಗಿ ಮುಖಕ್ಕೆ ದಿಂಬನ್ನು ಅದುಮಿ ಸರವನ್ನು ದರೋಡೆಗೈದು ಪರಾರಿಯಾಗಿದ್ದಾಳೆ.ದರೋಡೆಗೈದ ಆಗಂತುಕೆ ಬಾಗಿಲಿನಿಂದ ಹೊರ ಓಡಿದಾಗ ಸುಶೀಲ ಅವರು ಮಹಿಳೆ ಚೂಡಿದಾರ್ ಧರಿಸಿದ್ದನ್ನ ಗಮನಿಸಿದ್ದಾರೆ. ಘಟನಾ ಸ್ಥಳಕ್ಕೆ ಉಳ್ಳಾಲ ಪೊಲೀಸ್ ಠಾಣಾ ನಿರೀಕ್ಷಕರಾದ ಸಂದೀಪ್ ,ಉಪ ನಿರೀಕ್ಷಕರಾದ ಶೀತಲ್ ನೇತೃತ್ವದ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಬಿಜೆಪಿ ಮುಖಂಡ ಸತೀಶ್ ಕುಂಪಲ ಅವರು ಪೊಲೀಸರಲ್ಲಿ ಆರೋಪಿಯ ಶೀಘ್ರ ಬಂಧನಕ್ಕೆ ಆಗ್ರಹಿಸಿದ್ದಾರೆ.ಈ ಹಿಂದೆನೂ ಸುಶೀಲ ಅವರ ಎರಡು ಚಿನ್ನದ ಬಳೆಗಳು ಕಳವಾಗಿದ್ದು ಪೊಲೀಸ್ ದೂರು ನೀಡಿರಲಿಲ್ಲ.ಸ್ಥಳೀಯ ನಿವಾಸಿ ಆರ್ಥಿಕ ಮುಗ್ಗಟ್ಟಿನಲ್ಲಿರುವ ಮಹಿಳೆಯ ಮೇಲೆಯೇ ಶಂಕೆಯಿದ್ದು ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೆತ್ತಿದ್ದಾರೆ.


