ಶಿವಮೊಗ್ಗ : ಬೇಸಿಗೆ ರಜೆಯನ್ನು ಕಳೆಯಲು ಸಂಬಂಧಿಕರ ಮನೆಗೆ ತೆರಳಿದ್ದ ಬಾಲಕಿಯೊಬ್ಬಳು ಆಟವಾಡುತ್ತಿದ್ದಾಗಲೇ ಸಾವನ್ನಪ್ಪಿದ ಹೃದಯವಿದ್ರಾವಕ ಘಟನೆ ಶಿವಮೊಗ್ಗ ತಾಲೂಕಿನ ಲಕ್ಕಿನಕೊಪ್ಪದಲ್ಲಿ ನಡೆದಿದೆ. ಮನೆಯೊಳಗೆ ಜೋಕಾಲಿ ಆಡುತ್ತಿದ್ದಾಗ ಆಕಸ್ಮಿಕವಾಗಿ ಕುತ್ತಿಗೆಗೆ ಪಂಚೆ ಬಿಗಿದುಕೊಂಡಿದ್ದೇ ಬಾಲಕಿಯ ಸಾವಿಗೆ ಕಾರಣವಾಗಿದೆ.


ಮೃತ ಬಾಲಕಿಯನ್ನು ಶಿವಮೊಗ್ಗ ನಗರದ ವಿದ್ಯಾನಗರ ನಿವಾಸಿ ಪ್ರಣಮ್ಯ (9) ಎಂದು ಗುರುತಿಸಲಾಗಿದೆ. ರಜೆಯ ಹಿನ್ನೆಲೆಯಲ್ಲಿ ಪ್ರಣಮ್ಯ ಲಕ್ಕಿನಕೊಪ್ಪದಲ್ಲಿರುವ ತನ್ನ ಚಿಕ್ಕಮ್ಮನ ಮನೆಗೆ ತೆರಳಿದ್ದಳು. ಏಪ್ರಿಲ್ 20ರಂದು ಮನೆಯ ಇತರ ಮಕ್ಕಳೊಂದಿಗೆ ಆಟವಾಡುತ್ತಿದ್ದ ಪ್ರಣಮ್ಯ, ನಂತರ ಒಬ್ಬಳೇ ಕೋಣೆಯೊಳಗೆ ಹೋಗಿ ಬಾಗಿಲು ಹಾಕಿಕೊಂಡಿದ್ದಾಳೆ.

ಅಲ್ಲಿ ಪಂಚೆಯನ್ನು ಬಳಸಿ ಜೋಕಾಲಿ ಮಾಡಿಕೊಂಡು ಆಟವಾಡುತ್ತಿದ್ದಾಗ, ಅದು ಕುತ್ತಿಗೆಗೆ ಬಿಗಿದುಕೊಂಡಿದೆ. ಉಸಿರಾಟಕ್ಕೆ ತೊಂದರೆಯಾಗಿ ಬಾಲಕಿ ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾಳೆ. ತುಂಗಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸುತ್ತಿದ್ದಾರೆ.



