ಮಂಗಳೂರು: ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ (ರಿ) ಮಂಗಳೂರು ಇದರ 11 ನೇ ವರ್ಷದ “ಪಟ್ಲ ಸಂಭ್ರಮ 2026” ಕಾರ್ಯಕ್ರಮ ಮೇ 30 ಶನಿವಾರ ಅಡ್ಯಾರ್ ಬಳಿಯ ಅಡ್ಯಾರ್ ಗಾರ್ಡನ್ ನಲ್ಲಿ ನಡೆಯಲಿದೆ ಎಂದು ಯಕ್ಷಧ್ರುವ ಪಟ್ಲ ಫೌಂಡೇಶನ್ನ ಸ್ಥಾಪಕಧ್ಯಕ್ಷರಾದ ಸತೀಶ್ ಕುಮಾರ್ ಪಟ್ಲ ಹೇಳಿದರು.


ನಗರದ ಖಾಸಗಿ ಹೋಟೆಲ್ನಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಯಕ್ಷಧ್ರುವ ಪಟ್ಲ ಸಂಭ್ರಮ 2026 ಕಾರ್ಯಕ್ರಮವನ್ನು ಪಾವಂಜೆ ನಾಗವೃಜ ಕ್ಷೇತ್ರದ ಧರ್ಮಧರ್ಶಿಗಳಾದ ಡಾ.ಯಾಜಿ ನಿರಂಜನ ಭಟ್ ಉದ್ಘಾಟಿಸಲಿದ್ದಾರೆ, ಬೆಳಿಗ್ಗೆ 8.30 ರಿಂದ 9 ರ ತನಕ ಚೌಕಿ ಪೂಜೆ ಮತ್ತು ಅಬ್ಬರ ತಾಳ, 9 ರಿಂದ 11 ರ ವರೆಗೆ ಭರತ ನಾಟ್ಯ ಪ್ರದರ್ಶನ, 11 ರಿಂದ 1.30 ರ ವರೆಗೆ ಸಭಾ ಕಾರ್ಯಕ್ರಮ, ಮಧ್ಯಾಹ್ನ 1.30 ರಿಂದ 2 ರ ವರೆಗೆ ನಾಗವೃಜ ಕ್ಷೇತ್ರ ಪಾವಂಜೆಯ ಶ್ರೀ ವಾಣಿ ಶಾಲಾ ವಿದ್ಯಾರ್ಥಿಗಳಿಂದ ಯೋಗ ಪ್ರದರ್ಶನ, ಮಧ್ಯಾಹ್ನ 2ರಿಂದ 3.30 ರ ವರೆಗೆ ಮಹಿಳಾ ಯಕ್ಷಗಾನ, ಸಂಜೆ 3.30 ರಿಂದ 5 ರವರೆಗೆ ಯಕ್ಷಗಾನ ಹಾಸ್ಯ ವೈಭವ ನಡೆಯಲಿದೆ ಎಂದರು.

ಈ ಬಾರಿ ಪಟ್ಲ ಫೌಂಡೇಶನ್ ಟ್ರಸ್ಟ್ ನ ಪ್ರಧಾನ ಸಂಚಾಲಕರಾದ, ಉದ್ಯಮಿ ಶಶಿಧರ ಬಿ ಶೆಟ್ಟಿ ಬರೋಡಾ ಅವರ ಮಾರ್ಗದರ್ಶನದಲ್ಲಿ 11 ನೇ ವರ್ಷದ ಪಟ್ಲ ಸಂಭ್ರಮದಲ್ಲಿ ಡಾ ಎಂ ಮೋಹನ್ ಆಳ್ವ ಅವರಿಗೆ 2026 ರ ಯಕ್ಷಧ್ರುವ ಮಹಾಪೋಷಕ ಪ್ರಶಸ್ತಿ ನೀಡಿ ಗೌರವಿಸಲಾಗುವುದು. 2026 ರ ಸಾಲಿನ ಪಟ್ಲ ಪ್ರಶಸ್ತಿಯನ್ನು ಪೊಲ್ಯ ಲಕ್ಷ್ಮೀನಾರಾಯಣ ಶೆಟ್ಟಿ ಅವರಿಗೆ ನೀಡಲಾಗುವುದು ಎಂದರು.

ಬೆಳಿಗ್ಗೆ 11 ಗಂಟೆಗೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಶ್ರೀ ಪಾದರು, ಒಡಿಯೂರು ಕ್ಷೇತ್ರದ ಶ್ರೀ ಗುರುದೇವಾನಂದ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ.ಮುಂಬೈ ಹೇರಂಭ ಇಂಡಸ್ಟ್ರೀಸ್ ಸಂಸ್ಥೆಯ ಅಧ್ಯಕ್ಷರಾದ ಡಾ. ಸದಾಶಿವ ಶೆಟ್ಟಿ ಕನ್ಯಾನ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ. ಎಂಆರ್ ಜಿ ಗ್ರೂಪ್ ಕಂಪನೀಸ್ ಬೆಂಗಳೂರು ಇದರ ಅಧ್ಯಕ್ಷರು ಹಾಗೂ ನಿರ್ದೇಶಕರಾದ ಡಾ.ಕೆ ಪ್ರಕಾಶ್ ಶೆಟ್ಟಿ ಸಮಾರಂಭವನ್ನು ದೀಪ ಬೆಳಗಿಸಿ ಉದ್ಘಾಟಿಸಲಿದ್ದಾರೆ. ಗೌರವಾನ್ವಿತರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದರು.
*ಯಕ್ಷಶಿಕ್ಷಣ ಯೋಜನೆ:**
ಯಕ್ಷಧ್ರುವ ಯಕ್ಷಶಿಕ್ಷಣ ಯೋಜನೆಯಡಿ 51 ಶಿಕ್ಷಕರ ಮೂಲಕ 89 ಶಾಲೆಗಳ 13,248 ವಿದ್ಯಾರ್ಥಿಗಳಿಗೆ ಯಕ್ಷಗಾನ ತರಬೇತಿ ನೀಡಲಾಗುತ್ತಿದ್ದು, ಈಗಾಗಲೇ 5,234 ವಿದ್ಯಾರ್ಥಿಗಳು ರಂಗಪ್ರವೇಶ ಮಾಡಿದ್ದಾರೆ.

ಈ ಸಂದರ್ಭದಲ್ಲಿ ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಿ ಮಾತನಾಡಿದ ಫೌಂಡೇಶನ್ ಗೌರವಾಧ್ಯಕ್ಷ ಕನ್ಯಾನ ಸದಾಶಿವ ಶೆಟ್ಟಿ, ಪ್ರತಿವರ್ಷವೂ ಉತ್ತಮ ಜನಸ್ಪಂದನೆಯೊಂದಿಗೆ ಕಾರ್ಯಕ್ರಮ ಯಶಸ್ವಿಯಾಗಿ ನಡೆಯುತ್ತಿದೆ ಎಂದರು. ಮುಂದಿನ ದಿನಗಳಲ್ಲಿ 13 ಸಾವಿರ ಮಕ್ಕಳಿಗೆ ಯಕ್ಷಗಾನ ತರಬೇತಿ ನೀಡುವ ಮಹತ್ವಾಕಾಂಕ್ಷಿ ಯೋಜನೆ ರೂಪಿಸಲಾಗಿದೆ ಎಂದು ಹೇಳಿದರು.
ಯಕ್ಷಗಾನ ಕರಾವಳಿಯ ಅಪರೂಪದ ಕಲೆ ಆಗಿದ್ದು, ಪುರಾಣ ಮತ್ತು ಮಹಾಕಾವ್ಯಗಳ ಕಥಾರೂಪ, ಸಂಗೀತ ಹಾಗೂ ನೃತ್ಯದ ಸಂಯೋಜನೆಯಾಗಿದೆ. ಈ ಕಲೆಯ ಉಳಿವು ಮತ್ತು ಬೆಳವಣಿಗೆಗೆ ಫೌಂಡೇಶನ್ ಮಹತ್ತರ ಕೊಡುಗೆ ನೀಡುತ್ತಿದೆ ಎಂದರು.
ಇದೀಗ 45 ಯಕ್ಷಧ್ರುವ ಘಟಕಗಳು ಕಾರ್ಯನಿರ್ವಹಿಸುತ್ತಿದ್ದು, ಕಲಾವಿದರಿಗೆ ಸನ್ಮಾನ, ಗೃಹ ನಿರ್ಮಾಣ, ಆರೋಗ್ಯ ವಿಮೆ ಸೇರಿದಂತೆ ಹಲವು ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ. ಈ ಬಾರಿ ಸಮುದ್ರಯಾನದ ಮೂಲಕ ಯಕ್ಷಗಾನ ಪ್ರದರ್ಶನ ಮಾಡುವ ಯೋಜನೆಯೂ ರೂಪಿಸಲಾಗಿದೆ ಎಂದು ತಿಳಿಸಿದರು.
ಹಿಂದೆ ಕನ್ನಡಕ್ಕೆ ಮಾತ್ರ ಸೀಮಿತವಾಗಿದ್ದ ಯಕ್ಷಗಾನ ಇದೀಗ ಮೊದಲಿಗೆ ತುಳು ನಂತರ ಹಿಂದಿ, ಇಂಗ್ಲಿಷ್ ಭಾಷೆಗಳಲ್ಲೂ ಪ್ರದರ್ಶನ ಕಂಡು ಜಾಗತಿಕ ಮಟ್ಟದಲ್ಲಿ ಪಸರಿಸಿ ಜಾಗತೀಕರಣಗೊಂಡಿದೆ ಎಂದರು.
ಸುಧ್ಧಿಗೋಷ್ಠಿಯಲ್ಲಿ ಸಿಎ ಉದಯಕುಮಾರ್ ಶೆಟ್ಟಿ, ಸವಣೂರು ಸೀತಾರಾಮ ರೈ, ಪ್ರೋ ಪ್ರಭಾಕರ ಜೋಷಿ, ಭುಜಬಲಿ ಧರ್ಮಸ್ಥಳ, ಪ್ರದೀಪ್ ಆಳ್ವ, ಶ್ರೀಮತಿ ಆರತಿ ರಾಮಚಂದ್ರ, ಪುರುಷೋತ್ತಮ ಭಂಡಾರಿ ಮುಂತಾದವರು ಉಪಸ್ಥಿತರಿದ್ದರು.


