9 ದೇಶಗಳ ವಾಯುಪ್ರದೇಶ ಬಳಸದಂತೆ ಭಾರತೀಯ ವಿಮಾನಯಾನ ಸಂಸ್ಥೆಗಳಿಗೆ ಡಿಜಿಸಿಎ ಸೂಚನೆ

Prakhara News
1 Min Read
Passanger airplane flying above clouds in evening.

ನವದೆಹಲಿ : ಇರಾನ್ ಗುರಿಯಾಗಿಸಿಕೊಂಡು ಅಮೆರಿಕ ಮತ್ತು ಇಸ್ರೇಲ್ ನಡುವಿನ ಸಂಘರ್ಷವು ಮೂರನೇ ವಾರಕ್ಕೆ ಕಾಲಿಟ್ಟಿದೆ. ಈ ಹಿನ್ನೆಲೆಯಲ್ಲಿ ಉದ್ವಿಗ್ನತೆ ಹೆಚ್ಚಾಗಿದ್ದು, ಪ್ರಯಾಣಿಕರ ಸುರಕ್ಷತೆಯ ದೃಷ್ಟಿಯಿಂದ 9 ದೇಶಗಳ ವಾಯುಪ್ರದೇಶದಲ್ಲಿ ಸಂಚರಿಸದಂತೆ ನಾಗರಿಕ ವಿಮಾನಯಾನ ನಿರ್ದೇಶನಾಲಯ ಭಾರತೀಯ ವಿಮಾನಯಾನ ಸಂಸ್ಥೆಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದೆ.

ಡಿಜಿಸಿಎ ನೀಡಿರುವ ಅಧಿಕೃತ ಆದೇಶದ ಪ್ರಕಾರ ಬಹ್ರೇನ್, ಇರಾನ್, ಇರಾಕ್, ಇಸ್ರೇಲ್, ಜೋರ್ಡಾನ್, ಕುವೈತ್, ಲೆಬನಾನ್, ಕತಾರ್ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ ವಾಯುಪ್ರದೇಶಗಳನ್ನು ವಿಮಾನ ಸಂಚಾರಕ್ಕೆ ಬಳಸದಂತೆ ನಿರ್ಬಂಧಿಸಲಾಗಿದೆ. ಈ ಆದೇಶವು ತಕ್ಷಣದಿಂದಲೇ ಜಾರಿಗೆ ಬರಲಿದ್ದು ಮಾರ್ಚ್ 28, 2026 ರವರೆಗೆ ಅನ್ವಯವಾಗಲಿದೆ.

ಒಮನ್ ಮತ್ತು ಸೌದಿ ಅರೇಬಿಯಾ ವಾಯುಪ್ರದೇಶಗಳಲ್ಲಿ ಹಾರಾಟ ನಡೆಸಲು ಕೆಲವು ಕಟ್ಟುನಿಟ್ಟಿನ ಷರತ್ತುಗಳನ್ನು ವಿಧಿಸಲಾಗಿದೆ. ವಿಮಾನಗಳು 32,000 ಅಡಿಗಳಿಗಿಂತ ಕಡಿಮೆ ಎತ್ತರದಲ್ಲಿ ಕಾರ್ಯಾಚರಣೆ ನಡೆಸುವಂತಿಲ್ಲ. ಸಂಘರ್ಷದ ವಲಯದಿಂದ ಸುರಕ್ಷಿತ ಅಂತರ ಕಾಯ್ದುಕೊಳ್ಳಲು ಎಲ್ಲಾ ಹಾರಾಟದ ಮಟ್ಟಗಳಲ್ಲಿ ಎಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ.

ಇತ್ತೀಚೆಗೆ ವಿಶ್ವದ ಅತ್ಯಂತ ಜನನಿಬಿಡ ನಿಲ್ದಾಣಗಳಲ್ಲಿ ಒಂದಾದ ದುಬೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ನಡೆದ ಡ್ರೋನ್ ದಾಳಿಯು ಆತಂಕಕ್ಕೆ ಕಾರಣವಾಗಿದೆ. ಈ ದಾಳಿಯಿಂದಾಗಿ ವಿಮಾನ ನಿಲ್ದಾಣದ ಆವರಣದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ವಿಮಾನ ಸಂಚಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು. ಗಲ್ಫ್ ರಾಷ್ಟ್ರಗಳ ಮೇಲೆ ಇರಾನ್ ನಡೆಸುತ್ತಿರುವ ಪ್ರತೀಕಾರದ ಕ್ರಮಗಳು ನಾಗರಿಕ ವಿಮಾನಗಳಿಗೆ ನೇರ ಅಪಾಯ ತಂದೊಡ್ಡಬಹುದು ಎಂದು ಡಿಜಿಸಿಎ ಕಳವಳ ವ್ಯಕ್ತಪಡಿಸಿದೆ. ಈ ತುರ್ತು ಬದಲಾವಣೆಯಿಂದಾಗಿ ಅಂತರಾಷ್ಟ್ರೀಯ ವಿಮಾನಗಳ ಮಾರ್ಗ ಬದಲಾಗಲಿದ್ದು, ಪ್ರಯಾಣದ ಅವಧಿ ಹೆಚ್ಚಾಗುವ ಸಾಧ್ಯತೆಯಿದೆ. ಪ್ರಯಾಣಿಕರು ವಿಮಾನ ನಿಲ್ದಾಣಕ್ಕೆ ತೆರಳುವ ಮುನ್ನ ತಮ್ಮ ವಿಮಾನಯಾನ ಸಂಸ್ಥೆಗಳೊಂದಿಗೆ ಸಂಪರ್ಕ ಸಾಧಿಸಿ, ಪರಿಷ್ಕೃತ ವೇಳಾಪಟ್ಟಿಯನ್ನು ಖಚಿತಪಡಿಸಿಕೊಳ್ಳಲು ಕೋರಲಾಗಿದೆ.

Share This Article
Leave a Comment