ಒಳಮೀಸಲಾತಿ ವರ್ಗೀಕರಣದಲ್ಲಿ ಆದಿದ್ರಾವಿಡ ಸಮುದಾಯಕ್ಕೆ ಅನ್ಯಾಯ: ಕುಲಶಾಸ್ತ್ರೀಯ ಅಧ್ಯಯನಕ್ಕೆ ಒತ್ತಾಯ

Prakhara News
1 Min Read

ಮಂಗಳೂರು : ರಾಜ್ಯ ಸರ್ಕಾರ ಜಾರಿಗೊಳಿಸಿರುವ ಒಳಮೀಸಲಾತಿ ಪದ್ಧತಿಯಲ್ಲಿ ಆದಿದ್ರಾವಿಡ ಸಮುದಾಯಕ್ಕೆ ಅನ್ಯಾಯವಾಗುತ್ತಿದ್ದು, ಕೂಡಲೇ ಈ ಬಗ್ಗೆ ಕುಲಶಾಸ್ತ್ರೀಯ ಅಧ್ಯಯನ ನಡೆಸಿ ಸಮುದಾಯವನ್ನು ಪ್ರತ್ಯೇಕವಾಗಿ ಗುರುತಿಸಬೇಕು ಎಂದು ಮುಖಂಡರಾದ ಅನಿಲ್ ಕುಮಾರ್ ಕಂಕನಾಡಿ ಆಗ್ರಹಿಸಿದರು.

ನಗರದ ಪ್ರೆಸ್‌ಕ್ಲಬ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರದ ಹೊಸ ವರ್ಗೀಕರಣದಿಂದ ಉಂಟಾಗಿರುವ ಗೊಂದ ಗಳು ಮತ್ತು ಸಮುದಾಯ ಎದುರಿಸುತ್ತಿರುವ ಸವಾಲುಗಳನ್ನು ಎಳೆಎಳೆಯಾಗಿ ಬಿಚ್ಚಿಟ್ಟರು. ರಾಜ್ಯದ 101 ಜಾತಿಗಳನ್ನು ಮೂರು ವಿಭಾಗಗಳಾಗಿ ವರ್ಗೀ ರಿಸಿ ಮೀಸಲಾತಿ ನೀಡುವ ಸರ್ಕಾರದ ಕ್ರಮದಲ್ಲಿ ಹಲವು ದೋಷಗಳಿವೆ. ವಿಶೇಷವಾಗಿ, “ಆದಿದ್ರಾವಿಡ ಎಂಬುದು ಜಾತಿಯಲ್ಲ, ಅದೊಂದು ಜಾತಿಗಳ ಗುಂಪು” ಎಂಬ ನ್ಯಾಯಮೂರ್ತಿ ನಾಗಮೋಹನ್ ದಾಸ್ ಅವರ ಹೇಳಿಕೆಯು ಸಮುದಾಯಕ್ಕೆ ತೀವ್ರ ಬೇಸರ ತಂದಿದೆ. ದಶಕಗಳಿಂದ ಸರ್ಕಾರವೇ ನೀಡುತ್ತಿರುವ ಜಾತಿ ಪ್ರಮಾಣಪತ್ರ ಈಗ ಸುಳ್ಳೇ? ಎಂದು ಅವರು ಪ್ರಶ್ನಿಸಿದರು.

ಸಮುದಾಯದ ಶೇ. 90ರಷ್ಟು ಜನರು ಇಂದಿಗೂ ತೋಟ ಮತ್ತು ಗದ್ದೆಗಳಲ್ಲಿ ಕೃಷಿ ಕಾರ್ಮಿಕರಾಗಿ ದುಡಿಯುತ್ತಿದ್ದಾರೆ. ಪ್ರಸ್ತುತ ಈ ಸಮುದಾಂ ವನ್ನು ‘ಬಲಗೈ’ ಗುಂಪಿಗೆ ಸೇರಿಸಲಾಗಿದೆ. ಆದರೆ ಈ ಗುಂಪಿನಲ್ಲಿ ಐಎಎಸ್, ಐಪಿಎಸ್ ಅಧಿಕಾರಿಗಳು ಹಾಗೂ ಪ್ರಭಾವಿ ರಾಜಕಾರಣಿಗಳನ್ನು ಹೊಂದಿರುವ ಬಲಿಷ್ಠ ಸಮುದಾಯಗಳು ಇವೆ. ಇಂತಹ ಪ್ರಭಾವಿಗಳ ನಡುವೆ ಶೈಕ್ಷಣಿಕವಾಗಿ ಮತ್ತು ಆರ್ಥಿಕವಾಗಿ ತೀರಾ ಹಿಂದುಳಿದಿರುವ ತಮ್ಮ ಸಮುದಾಯಕ್ಕೆ ಮೀಸಲಾತಿಯ ಪಾಲು ದೊರೆಯುತ್ತಿಲ್ಲ ಎಂದು ಅಳಲು ತೋಡಿಕೊಂಡರು.

ಸಮುದಾಯವು ಆರು ಜಿಲ್ಲೆಗಳಲ್ಲಿ ಸುಮಾರು 8 ಲಕ್ಷ ಜನಸಂಖ್ಯೆ ಹೊಂದಿದ್ದರೂ, ಅಸಲರು, ಕಲ್ಲಾದಿ, ಮುಂದಾಲ, ಮುಗೇರ, ಹೊಳೆಯ ಈ ತ್ತು ಆದಿಕರ್ನಾಟಕ ಎಂಬ ವಿವಿಧ ಪ್ರಾದೇಶಿಕ ಹೆಸರುಗಳಿಂದ ಗುರುತಿಸಿಕೊಳ್ಳುತ್ತಿರುವುದರಿಂದ ಸೌಲಭ್ಯಗಳಿಂದ ವಂಚಿತವಾಗುತ್ತಿದೆ. ಈ ಹಿನ್ನೆಲೆಯಲ್ಲಿ, ಸಮುದಾಯದ ಆರಾಧ್ಯ ದೈವ ‘ಶ್ರೀ ಕಾನದ ಕಟದ’ (ಸತ್ಯಸಾರಮಣಿ) ಅವರ ಹೆಸರಿನಲ್ಲಿ ‘ಸಾರಮಣಿ ಸಮಾಜ’ ಎಂದು ಪ್ರತ್ಯೇಕ ಉಪಜಾತಿಯಾಗಿ ಗುರುತಿಸಬೇಕು ಮತ್ತು ಸಮುದಾಯಕ್ಕೆ ಶೇ. 2 ರಷ್ಟು ಒಳಮೀಸಲಾತಿಯನ್ನು ನೀಡಬೇಕು ಎಂದು ಒತ್ತಾಯಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮುಖಂಡರಾದ ಶಿವರಾಜ್, ಸೂರಜ್ ಬಳ್ಳಾಲ್ ಬಾಗ್ ಹಾಗೂ ಎ.ಕೆ. ವಿಜಯ್ ಕೋಕಿಲ ಅವರು ಉಪಸ್ಥಿತರಿದ್ದರು.

Share This Article
Leave a Comment