ಕುಂದಾಪುರ: ಬ್ಯಾಂಕ್ ಎಪಿಕೆ ಫೈಲ್ ಕಳುಹಿಸಿ ಹಿರಿಯ ನಾಗರಿಕರೊಬ್ಬರಿಗೆ ₹2.24 ಲಕ್ಷ ಸೈಬರ್ ಕನ್ನ..!

Prakhara News
1 Min Read

ಕುಂದಾಪುರ: ಹಿರಿಯ ನಾಗರಿಕರೊಬ್ಬರಿಗೆ ಪಂಜಾಬ್ ನ್ಯಾಷನಲ್ ಬ್ಯಾಂಕ್ (PNB) ಹೆಸರಿನಲ್ಲಿ ಕ್ರೆಡಿಟ್ ಕಾರ್ಡ್ ನೀಡುವುದಾಗಿ ನಂಬಿಸಿ, ಎಪಿಕೆ (APK) ಫೈಲ್ ಡೌನ್‌ಲೋಡ್ ಮಾಡಲು ತಿಳಿಸಿ ಅವರ ಕ್ರೆಡಿಟ್ ಕಾರ್ಡ್‌ಗಳಿಂದ ಒಟ್ಟು ₹2.24 ಲಕ್ಷಕ್ಕೂ ಅಧಿಕ ಹಣವನ್ನು ಸೈಬರ್ ವಂಚಕರು ದೋಚಿಕೊಂಡಿರುವ ಘಟನೆ ವರದಿಯಾಗಿದೆ. ಕುಂದಾಪುರ ನಿವಾಸಿ ಶೇಖರ (68) ಎಂಬುವವರೇ ಈ ಸೈಬರ್ ವಂಚನೆಗೆ ಒಳಗಾದ ಹಿರಿಯ ನಾಗರಿಕರು.

ಅಕ್ಟೋಬರ್ 21ರಂದು ಮಧ್ಯಾಹ್ನ 12:00 ಗಂಟೆಯ ಸುಮಾರಿಗೆ ಶೇಖರ ಅವರ ಮೊಬೈಲ್‌ಗೆ ಕರೆ ಮಾಡಿದ ಅಪರಿಚಿತ ವ್ಯಕ್ತಿಯೊಬ್ಬ ಹಿಂದಿ ಭಾಷೆಯಲ್ಲಿ ಮಾತನಾಡಿದ್ದಾನೆ. “ನೀವು ಹಿರಿಯ ನಾಗರಿಕರಾಗಿರುವುದರಿಂದ ನಿಮಗೆ ಪಿಎನ್‌ಬಿ ಬ್ಯಾಂಕ್‌ನಿಂದ ಕ್ರೆಡಿಟ್ ಕಾರ್ಡ್ ನೀಡಲಾಗುತ್ತಿದೆ” ಎಂದು ನಂಬಿಸಿ ಅವರ ವೈಯಕ್ತಿಕ ಹಾಗೂ ಕ್ರೆಡಿಟ್ ಕಾರ್ಡ್ ವಿವರಗಳನ್ನು ಪಡೆದುಕೊಂಡಿದ್ದಾನೆ. ಬಳಿಕ PNB CREDIT CARD.apk ಫೈಲ್ ಅನ್ನು ಕಳುಹಿಸಿ, ಬ್ಯಾಂಕ್ ಆಫ್ ಬರೋಡಾಕ್ಕೆ ಸಂಬಂಧಿಸಿದ ವಿವರಗಳನ್ನೂ ಕೇಳಿ ಪಡೆದಿದ್ದಾನೆ.

ಅದೇ ದಿನ ಸಂಜೆ 4:00 ಗಂಟೆಗೆ ಪಿರ್ಯಾದಿದಾರರು ತಮ್ಮ ಮೊಬೈಲ್ ಇನ್‌ಬಾಕ್ಸ್ ಪರಿಶೀಲಿಸಿದಾಗ, ಒಟಿಪಿ (OTP) ಶೇರ್ ಆಗಿರುವುದು ಬೆಳಕಿಗೆ ಬಂದಿದೆ. ವಂಚಕರು ಬ್ಯಾಂಕ್ ಆಫ್ ಬರೋಡಾ ಕ್ರೆಡಿಟ್ ಕಾರ್ಡ್‌ನಿಂದ ₹1,30,490, ₹22,167, ₹10,000 ಹಾಗೂ ಆರ್‌ಬಿಎಲ್ (RBL) ಬ್ಯಾಂಕ್ ಕ್ರೆಡಿಟ್ ಕಾರ್ಡ್‌ನಿಂದ ₹3,468.34, ₹20,000 ಮತ್ತು ₹37,999 ಸೇರಿದಂತೆ ಒಟ್ಟು ₹2,24,124.34 ಹಣವನ್ನು ಯಾವುದೇ ಮುನ್ಸೂಚನೆ ಇಲ್ಲದೆ ಆನ್‌ಲೈನ್ ಮೂಲಕ ವರ್ಗಾಯಿಸಿಕೊಂಡು ವಂಚನೆ ಮಾಡಲಾಗಿದೆ.

ಈ ಕುರಿತು ಸಂತ್ರಸ್ತ ಶೇಖರ ಅವರು ನೀಡಿದ ದೂರಿನ ಮೇರೆಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 90/2026, ಕಲಂ 66(C), 66(D) ಐಟಿ ಕಾಯ್ದೆ (IT Act) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಸೈಬರ್ ಅಪರಾಧಿಗಳ ಪತ್ತೆಗೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Share This Article
Leave a Comment